ಕಾರವಾರ: ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿ ಎರಡು ಮುಖ್ಯ ಕಡಲತೀರಗಳಲ್ಲಿ ಡಿ.28 ಮತ್ತು 29 ರಂದು ‘ಗಾಳಿಪಟ ಉತ್ಸವ’ ಆಯೋಜಿಸಲಾಗಿದೆ.
ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗತ್ವದಲ್ಲಿ ಇದೇ ಮೊದಲ ಬಾರಿಗೆ ಗಾಳಿಪಟ ಉತ್ಸವ ಆಯೋಜಿಸಲಾಗುತ್ತಿದೆ. ಈಗಾಗಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಾಲು ಸಾಲು ಉತ್ಸವಗಳ ಮೂಲಕ ಪ್ರವಾಸಿಗರ ಹಾಗೂ ಸ್ಥಳೀಯರ ಗಮನ ಸೆಳೆದಿರುವ ಜಿಲ್ಲಾಡಳಿತ ಮತ್ತೊಂದು ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಗುಜರಾತ್, ಬೆಂಗಳೂರು, ಮಂಗಳೂರು, ಮಲ್ಪೆ ಸೇರಿದಂತೆ ಇನ್ನಿತರ ಭಾಗಗಳಲ್ಲಿ ಆಯೋಜಿಸುತ್ತಿರುವ ಗಾಳಿಪಟ ಉತ್ಸವಗಳು ಆ ಭಾಗದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ಯಶಸ್ವಿಯಾಗಿದ್ದು, ಅದೇ ಮಾದರಿಯಲ್ಲಿ ಜಿಲ್ಲೆಯ ಮುಖ್ಯ ಕಡಲತೀರಗಳಲ್ಲಿ ಗಾಳಿಪಟ ಉತ್ಸವಗಳನ್ನು ಆಯೋಜಿಸಿ ಆ ಮೂಲಕ ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಪ್ರವಾಸಿಗರು ಹಾಗೂ ಕಲಾವಿದರನ್ನು ಆಕರ್ಷಿಸಲು ಸಿದ್ದತೆ ನಡೆಸಲಾಗಿದೆ.
ಡಿ. 28 ರಂದು ಮೊದಲ ದಿನ ಗೋಕರ್ಣ ಕಡಲತೀರದಲ್ಲಿ ಹಾಗೂ ಡಿ.29 ರಂದು ಕಾರವಾರ ಕಡಲತೀರದಲ್ಲಿ ಉತ್ಸವ ನಡೆಯಲಿದೆ. ಎರಡು ದಿನವೂ ಸಂಜೆ 3 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಉತ್ಸವ ಕಡಲತೀರಗಳಲ್ಲಿ ನಡೆಯಲಿದೆ. ಜಿಲ್ಲೆಯ ಕಲೆ, ಸಂಸ್ಕøತಿ, ಪರಂಪರೆ ಪರಿಚಯಿಸುವ ಗಾಳಿಪಟ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದ್ದು, ಯಕ್ಷಗಾನ, ಪೃಕೃತಿ ಸೊಬಗು, ವಿವಿಧ ಪ್ರಾಣಿ-ಪಕ್ಷಿಗಳ ಅದ್ಬುತ ಕಲಾಕೃತಿಗಳನ್ನೊಳಗೊಂಡ ಬಾನಾಡಿಗಳ ಪ್ರದರ್ಶನ ನಡೆಯಲಿದೆ. ಅಲ್ಲದೆ ಹೀಗೆ ಕಡಲತಡಿಯಲ್ಲಿ ನಡೆಯುವ ಬಣ್ಣ ಬಣ್ಣದ ಬಾನಾಡಿಗಳ ಕಲರವದ ಸೊಬಗು ನೋಡಲು ಪ್ರವಾಸಿಗರು ಸೇರಿದಂತೆ ಸ್ಥಳೀಯರಿಗೆ ಲಭ್ಯವಾಗಲಿದೆ.
ಉತ್ಸವದಲ್ಲಿ ಭಾಗವಹಿಸಲು ಈಗಾಗಲೇ ರಾಜ್ಯ ಹಾಗೂ ಹೊರ ರಾಜ್ಯದ 3 ತಂಡಗಳು ನೋಂದಣಿ ಮಾಡಿಕೊಂಡಿವೆ. 5 ಅಂತರಾಷ್ಟ್ರೀಯ ಮಟ್ಟದ ಕಲಾವಿದರು, 15 ರಾಷ್ಟ್ರಮಟ್ಟದ ಕಲಾವಿದರು ಭಾಗವಹಿಸುವ ಸಾಧ್ಯತೆ ಇದೆ. ಇದಲ್ಲದೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದ್ದು, ಸಾಮಾನ್ಯ ಜನರು ಪ್ರವಾಸಿಗರು ಗಾಳಿ ಪಟ ಉತ್ಸವದಲ್ಲಿ ಭಾಗವಹಿಸಿ ತಾವು ಸಿದ್ದಪಡಿಸಿದ ಗಾಳಿಪಟಗಳನ್ನು ಹಾರಿಸಲು ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರು ಸೇರಿದಂತೆ ನೆರೆದವರು ತಂಡವಾಗಿ ಬಂದಲ್ಲಿ ಗಾಳಿಪಟ ಹಾರಿಸುವ ಬಗ್ಗೆ ತರಬೇತಿ ಕೂಡ ನೀಡಲಾಗುತ್ತದೆ.
ಗಾಳಿಪಟ ಉತ್ಸವವನ್ನು ವ್ಯವಸ್ಥಿತವಾಗಿ ನಡೆಸಲು ಬಳ್ಳಾರಿ ಮೂಲದ ನ್ಯಾಶನಲ್ ಆರ್ಗನೈಸೇಶನ್ ಫಾರ್ ಪ್ರಮೋಷನ್ ಆಫ್ ಅಡ್ವೆಂಚರ್ ಸ್ಪೋಟ್ರ್ಸ್ ಆ್ಯಂಡ್ ನೇಚರ್ ಅವೇರ್ನೆಸ್ (ನೋಪಸ್ನಾ) ಸಂಸ್ಥೆ ಟೆಂಡರ್ ನೀಡಲಾಗಿದೆ. ಸ್ಥಂಸ್ಥೆಯೂ ಈಗಾಗಲೇ ಹಲವು ಭಾಗಗಳಲ್ಲಿ ಗಾಳಿಪಟ ಉತ್ಸವಗಳನ್ನು ಆಯೋಜನೆ ಮಾಡಿ ಗಮನ ಸೇಳೆದಿದ್ದು, ಇದರಿಂದ ಜಿಲ್ಲಾಡಳಿತ ಎರಡು ದಿನಗಳ ಕಾಲ ನಡೆಯಲಿರುವ ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸುವಂತೆ ಸೂಚಿಸಿದೆ. ಅಲ್ಲದೆ ಗಾಳಿ ಪಟ ಉತ್ಸವದಲ್ಲಿ ಪ್ರವಾಇಗರನ್ನು ಆಕರ್ಷಿಸುವ ಹಾಗೂ ಆಕರ್ಷಣಿಯ ಪತಂಗಗಳನ್ನು ಸಿದ್ದಪಡಿಸುವಂತೆ ತಂಡಗಳನ್ನು ಆಹ್ವಾನಿಸಿ ಉತ್ಸವವನ್ನು ಯಶಸ್ವಿಯಾಗಿ ನಡೆಸುವಂತೆ ಸೂಚಿಸಿದೆ.
ಒಟ್ಟಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಗಾಳಿಪಟ ಉತ್ಸವದಲ್ಲಿ ಬಣ್ಣ ಬಣ್ಣದ ಬಾನಾಡಿಗಳ ಅದ್ಬುತ ಪ್ರದರ್ಶನಕ್ಕೆ ಕಡಲತೀರಗಳು ಶಾಕ್ಷಿಯಾಗಲಿವೆ. ಅಲ್ಲದೆ ಪ್ರದರ್ಶನದ ಮೂಲಕ ರಾಜ್ಯ ಹಾಗೂ ಅಂತರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಜಿಲ್ಲಾಡಳಿತದ ಯೋಜನೆಗೆ ವೇದಿಕೆಯಾಗಲಿದ್ದು, ಆ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳನ್ನು ಪರಿಚಯಿಸುವ ಪ್ರಯತ್ನ ನಡೆದಿದೆ.
******************
ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಗಾಳಿಪಟ ಉತ್ಸವ ಆಯೋಜಿಸುತ್ತಿದ್ದು, ಮಹಾರಾಷ್ಟ್ರ, ಆಂದ್ರಪ್ರದೇಶ ಸೇರಿದಂತೆ ರಾಜ್ಯದ 5 ತಂಡಗಳು ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿವೆ. ಸ್ಥಳೀಯರಿಗೆ ಗಾಳಿಪಟ ನಿರ್ಮಿಸುವುದರ ಜತೆಗೆ ಗಾಳಿಪಟ ಹಾರಿಸುವುದನ್ನು ತಿಳಿಸಿಕೊಡಲಾಗುತ್ತದೆ.
Leave a Comment