ಹಳಿಯಾಳ:- ಕೇಂದ್ರ ಸರ್ಕಾರ ಐಸಿಡಿಎಸ್ ಬಲವರ್ಧನೆ ಮಾಡಲು, ಬಜೆಟ್ಟಿನಲ್ಲಿ ಸಾಕಷ್ಟು ಹಣ ಮೀಸಲಿಡಲು, ನೇರನಗದು ವರ್ಗಾವಣೆ ಮತ್ತು ಪ್ಯಾಕೆಟ್ ಆಹಾರ ವಿರೋಧಿಸಿ ಕೇಂದ್ರ ಸಮಿತಿಯ ಕರೆಯಂತೆ ದಿ.17-01-2018ರಿಂದ ಅಂಗನವಾಡಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು ಸಂಯೋಜಿತ) ತಾಲೂಕು ಸಮೀತಿ ಅಧ್ಯಕ್ಷೆ ಜಯಶ್ರೀ ಹಿರೇಕರ ತಿಳಿಸಿದ್ದಾರೆ. ಗುರುವಾರ ಪಟ್ಟಣದಲ್ಲಿ ಸಭೆ ನಡೆಸಿದ ಅವರು ಈ ವಿಷಯವನ್ನು ಮಾಧ್ಯಮದವರಿಗೆ ಲಿಖಿತ ಹೇಳಿಕೆ ನೀಡುವ ಮೂಲಕ ಬಹಿರಂಗಪಡಿಸಿದರು. ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ನಲ್ಲಿ ಮಹಿಳೆಯರು ಮತ್ತು ಮಕ್ಕಳ ಕುರಿತು ಒಟ್ಟಾರೆ ಸಮುದಾಯದ ಒಳಿತಿಗಾಗಿ ಹಗಲಿರುಳು ಕೆಲಸ ಮಾಡುತ್ತಿರುವ ದೇಶದ 26 ಲಕ್ಷಕ್ಕೂ ಅಧಿಕ ಅಂಗನವಾಡಿ ನೌಕರರ ಬದುಕು ಕಷ್ಟದಲ್ಲಿದೆ. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರ ಬಜೆಟ್ಟಿನಲ್ಲಿ ಸಾಕಷ್ಟು ಹಣ ಮೀಸಲಿಡಲಿಲ್ಲ ಅಲ್ಲದೇ ಅಂಗನವಾಡಿ ನೌಕರರಿಗೆ ಗೌರವಧನ ಹೆಚ್ಚಿಸಲು ಸಾಧ್ಯವಿಲ್ಲ ಅದು ರಾಜ್ಯದ ಜವಾಬ್ದಾರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಲೋಕಸಭೆಗೆ ಲಿಖಿತ ರೂಪದಲ್ಲಿ ತಿಳಿಸಿರುವುದು ಬೇಸರ ತಂದಿದೆ ಎಂದಿದ್ದಾರೆ. ಇದರಿಂದ ಐಸಿಡಿಎಸ್ ದುರ್ಬಲವಾಗುತ್ತದೆ ಮತ್ತು ಅಂಗನವಾಡಿ ತಾಯಂದಿರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ. ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಇದರ ಪ್ರತಿಕ್ರಿಯೆಗಳನ್ನು ಕಾಣಬಹುದಾಗಿದ್ದು ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರ ಸಂಘದ ಕೇಂದ್ರ ಸಮಿತಿ ನವದೆಹಲಿಯವರು ಕರೆ ಕೊಟ್ಟಿರುವಂತೆ, ಕೇಂದ್ರ ಸರ್ಕಾರ ಅಂಗನವಾಡಿ ನೌಕರರ ಕುರಿತು ತನ್ನ ಚುನಾವಣೆ ಭರವಸೆಗಳನ್ನು ಈಡೇರಿಸಬೇಕು, ಐಸಿಡಿಎಸ್ ರಕ್ಷಣೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು ಐಸಿಡಿಎಸ್ ಬಲವರ್ಧನೆ ಮಾಡಲು ಬಜೆಟ್ಟಿನ ಹಂಚಿಕೆ ಸರಿಯಾಗಿ ಮಾಡಬೇಕು, ಕೇವಲ ರಾಜ್ಯ ಸರ್ಕಾರದ ಮೇಲೆ ಹೊರೆ ಹಾಕಬಾರದು, ನೇರನಗದು ವರ್ಗಾವಣೆ ಮತ್ತು ಪ್ಯಾಕೆಟ್ ಆಹಾರ ಕೈಬಿಡಬೇಕು, ಭಾರತ ರಾಷ್ಟ್ರೀಯ ಕಾರ್ಮಿಕ ಸಂಘ (ಐ.ಎಲ್.ಸಿ) ಶಿಫಾರಸ್ಸಿನಂತೆ ಅಂಗನವಾಡಿ ನೌಕರರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡಿ, ಕನಿಷ್ಟ ಕೂಲಿ ಮತ್ತು ಇತರೆ ಸಾಮಾಜಿಕ ಭದ್ರತೆ ನೀಡಬೇಕೆಂದು ಆಗ್ರಹಿಸಲಾಗಿದೆ. ಅಲ್ಲದೇ ರಾಜ್ಯ ಮಟ್ಟದ ಹೋರಾಟವನ್ನು ದಿ.17 ರಿಂದ ನಡೆಸಲಿರುವುದಾಗಿ ಹೇಳಿರುವ ಜಯಶ್ರೀ ಅವರು ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಸೇರಿದಂತೆ ಹಳಿಯಾಳದಲ್ಲಿಯೂ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಬ್ರಿಜಿಟಾ ಬ್ರಗಾಂಜಾ, ಸದಸ್ಯರಾದ ಸುಷ್ಮಾ ಶಿಂಧೆ, ಯಲ್ಲವ್ವಾ ಹರಿಜನ, ಗಿರಿಜಾ ಮರಾಠೆ, ಸುರೇಖಾ ಕಳವೇಕರ, ರತ್ನಾ ರಾಟೆ, ಶಾರದಾ ಬಾವಕರ ಇದ್ದರು.
Leave a Comment