ಹಳಿಯಾಳ : ಮರಾಠಾ ಸಮಾಜವನ್ನು 3ಬ ಪ್ರವರ್ಗದಿಂದ 2 ಎ ಪ್ರವರ್ಗಕ್ಕೆ ಸೇರಿಸಬೇಕು, ಮೀಸಲಾತಿಯ ಹರಿಕಾರ ರಾಜಶ್ರೀ ಶಾಹೂ ಮಹಾರಾಜರ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಬೇಕು, ಸಮಾಜದ ಅಭಿವೃದ್ಧಿಗಾಗಿ ಛತ್ರಪತಿ ಶಾಹೂ ಮಹಾರಾಜ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಾಂಡೇಲಿ ನಗರದಲ್ಲಿ ದಿ.29 ರಂದು ‘ ಏಕ ಮರಾಠಾ, ಲಾಕ ಮರಾಠಾ’ ಕ್ರಾಂತಿ ಮೋರ್ಚಾ ಪ್ರತಿಭಟನೆ ನಡೆಸಲಾಗುವುದು ಎಂದು ಹಳಿಯಾಳ ಕ್ಷತ್ರೀಯ ಮರಾಠಾ ಪರಿಷತ್ ತಾಲೂಕಾಧ್ಯಕ್ಷ ಹಾಗೂ ವಿಧಾನ ಪರಿಷತ ಸದಸ್ಯ ಎಸ್.ಎಲ್.ಘೊಟ್ನೇಕರ ಹೇಳಿದರು. ಪಟ್ಟಣದ ಮರಾಠಾ ಭವನದಲ್ಲಿ ನಡೆಸಿದ ಸುದ್ದಿಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಹಿಂದೆ ಹಳಿಯಾಳದಲ್ಲಿ 1 ಬಾರಿ ಏಕ ಮರಾಠಾ ಲಾಕ್ ಮರಾಠಾ ಬೃಹತ್ ಹೋರಾಟ ನಡೆಸಲಾಗಿದೆ ಅಲ್ಲದೇ ಹಲವಾರು ಬಾರಿ ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು ಸಹ ಸರ್ಕಾರದಿಂದ ಈವರೆಗೆ ಸಕಾರಾತ್ಮಕ ಪ್ರತಿಕ್ರಿಯೇ ಬಾರದ ಹಿನ್ನೆಲೆಯಲ್ಲಿ ದಿ.29 ರಂದು ಅನಿವಾರ್ಯವಾಗಿ ಮತ್ತೊಮ್ಮೆ ಹಳಿಯಾಳ-ಜೋಯಿಡಾ ಹಾಗೂ ದಾಂಡೇಲಿಯನ್ನೊಳಗೊಂಡು ದಾಂಡೇಲಿ ನಗರದಲ್ಲಿ 2ನೇ ಬಾರಿಗೆ ಬೃಹತ್ ಏಕ್ ಮರಾಠಾ ಲಾಕ್ ಮರಾಠಾ ಮೀಸಲಾತಿಗಾಗಿ ಹೋರಾಟ ಕಾರ್ಯಕ್ರಮ ನಡೆಯಲಿದೆ ಎಂದರು. ಹೋರಾಟ ಯಾವುದೇ ಜಾತಿ ಅಥವಾ ಪಂಗಡದ ವಿರುದ್ಧವಿಲ್ಲ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದೂಳಿದಿರುವ ಮರಾಠಾ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮರಾಠಾ ಮುಖಂಡರಾದ ಎಲ್.ಎಸ್ ಅರಿಶಿಣಗೇರಿ, ಶಂಕರ ಬೆಳಗಾಂವಕರ, ಮಂಗಲಾ ಕಶೀಲಕರ, ವಾಯ್ ಡಿ ಬಿರ್ಜೆ, ಜೀವಪ್ಪ ಭಂಡಾರಿ, ರವಿ ಸುತಾರ, ದಾಂಡೇಲಿಯ ನ್ಯಾಯವಾದಿ ವಿಶ್ವನಾಥ ಜಾಧವ ಇನ್ನಿತರರು ಇದ್ದರು.
Leave a Comment