ಹಳಿಯಾಳ: ಸ್ವಾಭಿಮಾನ ಹಾಗೂ ರಾಷ್ಟ್ರಭಕ್ತಿಗೆ ಹೆಸರಾದ ಮರಾಠ ಸಮಾಜವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಗುತ್ತಿಗೆಯಾಗಿ ನೀಡಿಲ್ಲ, ರಾಜಕೀಯದ ಹೆಸರಿನಲ್ಲಿ ಮರಾಠ ಸಮಾಜದ ದುರ್ಬಳಕೆಯನ್ನು ನಾವು ಸದಾ ಖಂಡಿಸುತ್ತೆವೆ. ಮರಾಠಾ ಸಮುದಾಯದವರು ಪಕ್ಷಾತೀತವಾಗಿ ಒಂದೇ ವೇದಿಕೆಯಲ್ಲಿ ಬಂದು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ ವಿನಃ ರಾಜಕಾರಣ ಮಾಡಲು ಅಲ್ಲ ಎಂದು ಹಳಿಯಾಳ ತಾಲೂಕ ಕ್ಷತ್ರೀಯ ಮರಾಠ ಪರಿಷತ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು. ಪಟ್ಟಣದ ಮರಾಠ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮರಾಠ ಸಮಾಜದಲ್ಲಿ ಎಲ್ಲ ಪಕ್ಷದ ಮುಖಂಡರು, ಜನಪ್ರತಿನಿಧಿಗಳು ಬೆಂಬಲಿಗರಿದ್ದಾರೆ. ಆದರೆ ಅವರೆಲ್ಲರೂ ಸೇರಿ ಸಮಾಜಕ್ಕೆ ಮೀಸಲಾತಿ ಸೌಲಭ್ಯವನ್ನು ಕಲ್ಪಿಸಲು ಒಂದೇ ವೇದಿಕೆಯಲ್ಲಿ ಬಂದು ಹೋರಾಟ ನಡೆಸುತ್ತಿದ್ದಾರೆ. ನಮ್ಮದು ಮೀಸಲಾತಿಗಾಗಿ ಹೋರಾಟವಾಗಿದ್ದು, ರಾಜಕೀಯ ಅಧಿಕಾರಕ್ಕಾಗಿ ಅಲ್ಲ ಎಂದರು. ಈ ನಮ್ಮ ಸಂಘಟನೆಯಲ್ಲಿ ಒಡಕು ಮೂಡಿಸಲು ಇಚ್ಛಿಸುವರ ಪ್ರಯತ್ನ ಎಂದಿಗೂ ಸಫಲವಾಗದು ಎಂದರು. ಇತ್ತೀಚೆಗೆ ಜಿಲ್ಲೆಗೆ ಆಗಮಿಸಿದ ಕರ್ನಾಟಕ ಮರಾಠ ಒಕ್ಕೂಟದ ರಾಜ್ಯಾಧ್ಯಕ್ಷ ಶ್ಯಾಮಸುಂದರ ಗಾಯಕ್ವಾಡ ಈ ಬಾರಿ ಮರಾಠ ಸಮಾಜ ಬಿಜೆಪಿಯನ್ನು ಬೆಂಬಲಿಸಲಿದೆ ಎಂದು ಹೇಳಿರುವುದು ಖಂಡನೀಯ ಈ ರೀತಿ ಜಿಲ್ಲೆಯ ಹಾಗೂ ರಾಜ್ಯದ ಮರಾಠ ಸಮಾಜದ ಗುತ್ತಿಗೆಯನ್ನು ಇವರಿಗೆ ನೀಡಿದವರ್ಯಾರು ಎಂದು ಪ್ರಶ್ನಿಸಿದ ಘೋಟ್ನೇಕರ ಜಿಲ್ಲೆಯ ಮರಾಠ ಸಮಾಜವನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೇ, ಯಾರನ್ನು ಸಂಪರ್ಕಿಸದೇ ಈ ರೀತಿ ಸಮಾಜದ ಹೆಸರನ್ನು ದುರ್ಬಳಕೆ ಮಾಡುವ ಗಾಯಕ್ವಾಡ ಕ್ರಮ ಖಂಡನೀಯ. ಗಾಯಕ್ವಾಡ ಹೇಳಿಕೆಯನ್ನು ಯಾರು ಮರಾಠರು ಬೆಂಬಲಿಸಲ್ಲ ಎಂದ ಅವರು ಇದೇ ರೀತಿ ಅವರು ಮತ್ತೇ ಹೇಳಿಕೆ ನೀಡಿದರೇ ಜಿಲ್ಲೆಗೆ ಅವರಿಗೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಯಾವ ಪಕ್ಷ, ಯಾವ ಅಭ್ಯರ್ಥಿಯು ಉತ್ತಮವಾಗಿದ್ದಾರೂ ಅವರನ್ನು ಮರಾಠರು ಬೆಂಬಲಿಸುವ ಪೂರ್ಣ ಸ್ವಾತಂತ್ರ್ಯ ಪ್ರತಿಯೊಬ್ಬ ಮರಾಠರಿಗಿದ್ದು ಅವರ ಹಕ್ಕನ್ನು ಅವರು ಚಲಾಯಿಸಲಿದ್ದಾರೆಂದರು. ಪತ್ರಿಕಾಗೋಷ್ಠಿಯಲ್ಲಿ ಮರಾಠ ಪ್ರಮುಖರಾದ ಯು.ಕೆ.ಬೂಬಾಟೆ, ಮಂಗಲಾ ಪಿತಾಂಬರ ಕಶೀಲಕರ, ಎಲ್.ಎಸ್.ಅರಶಿಣಗೇರಿ, ಶಂಕರ ಬೆಳಗಾಂವಕರ, ಶ್ರೀನಿವಾಸ ಘೋಟ್ನೇಕರ, ತುಕರಾಮ ಗೌಡ, ಭಾರತಿ ಬಿರ್ಜೆ, ಡಿ.ಬಿ.ಚೌಗುಲೆ, ಅಪ್ಪಾರಾವ ಪೂಜಾರಿ, ಬಾಬು ವಾಲೇಕರ, ಜೀವಪ್ಪ ಬಂಡಾರಿ, ಯಲ್ಲಪ್ಪ ಮಾಳವಣಕರ, ಅನಿಲ ಚವ್ಹಾನ, ಕೃಷ್ಣ ಶಹಾಪುರಕರ ಇದ್ದರು.
Leave a Comment