ಹೊನ್ನಾವರ:
ತನ್ನ ಕ್ಷೇತ್ರದ ಯಾವುದೇ ಶಾಲೆಗಳಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲು ತಾನು ಬದ್ಧನಿರುತ್ತೇನೆ ಎಂದು ಶಾಸಕ ಮಂಕಾಳು ವೈದ್ಯ ನುಡಿದರು.
ಅವರು ಚಿತ್ತಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು
ಹಳ್ಳಿಗಳಲ್ಲಿ ಶಿಕ್ಷಣಕ್ಕೆ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಸರ್ಕಾರ ಶೈಕ್ಷಣಿಕ ಉದ್ದೇಶಕ್ಕೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಯೋಜನೆಯ ಸಂಪೂರ್ಣ ಫಲ ಗ್ರಾಮದ ವಿದ್ಯಾರ್ಥಿಗಳಿಗೆ ಸಿಗುವ ನಿಟ್ಟಿನಲ್ಲಿ ಪಾಲಕರು ಗಮನಹರಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಮಕ್ಕಳಲ್ಲಿ ಓದುವ ಆಸಕ್ತಿ ಹೆಚ್ಚಾಗಬೇಕು. ಓದಿನಿಂದ ಪ್ರಾಪಂಚಿಕ ಅರಿವು ಮೂಡುವುದರ ಜೊತೆಗೆ ಸಾಹಿತ್ಯ ಅಭಿರುಚಿ ಮೂಡುತ್ತದೆ. ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಓದಿನ ಹಸಿವು ಮೂಡಿಸಬೇಕು ಎಂದರು
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಊರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಇವರನ್ನು ಸನ್ಮಾನಿಸಲಾಯಿತು.
ನಂತರದಲ್ಲಿ ರಾಜ್ಯಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 2016-2017 ನೇ ಸಾಲಿನಲ್ಲಿ ಶೇ. 100% ಫಲಿತಾಂಶದೊಂದಿಗೆ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕ ಪ್ರಕಾಶ ನಾಯ್ಕ ತಮ್ಮ ತಂದೆ ತಾಯಿಯ ಹೆಸರಿನಲ್ಲಿ ಸನ್ಮಾನಿಸಿ ಗೌರವಿಸಿದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪುಷ್ಪಾ ನಾಯ್ಕ, ತಾ.ಪಂ. ಸದಸ್ಯ ಅಣ್ಣಯ್ಯ ನಾಯ್ಕ, ಗ್ರಾ.ಪಂ. ಅಧ್ಯಕ್ಷೆ ಶ್ರೀಮಾಲಾ ಉದಯ ಗೌಡ, ಮುಖ್ಯ ಶಿಕ್ಷಕ ದೀಪಕ ನಾಯ್ಕ, ವಕೀಲ ಉದಯ ನಾಯ್ಕ, ಗ್ರಾ.ಪಂ. ಸದಸ್ಯರಾದ ಚಂದ್ರಶೇಖರ ಗೌಡ, ದೇವಿದಾಸ ನಾಯ್ಕ, ದೈಹಿಕ ನಿರ್ದೇಶಕ ಎಸ್.ಎನ್. ಗೌಡ, ಎಸ್..ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
Leave a Comment