ಹಳಿಯಾಳ: ಗುರುವಾರ ಪಟ್ಟಣದಲ್ಲಿ ನಡೆದ ಜೆಡಿಎಸ್ ಪಕ್ಷದ ವಿಕಾಸ ಪರ್ವ ಯಾತ್ರೆಯಲ್ಲಿ ಹಳಿಯಾಳ-ಜೋಯಿಡಾ ಕ್ಷೇತ್ರದ ಮೂಲ ಜೆಡಿಎಸ್ ಮುಖಂಡರು, ತಾಲೂಕಾ ಕಮೀಟಿಯ ಪ್ರಮುಖರು ಹಾಗೂ ಹಿರಿಯ ಮುಖಂಡರ ಅನುಪಸ್ಥಿತಿ ಜೆಡಿಎಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತವನ್ನು ಬಹಿರಂಗಪಡಿಸಿದೆ. ಅಭ್ಯರ್ಥಿ ಕೆ.ಆರ್.ರಮೇಶ ಅವರ ತುಘಲಕ್ ದರ್ಬಾರನಿಂದ ಬೆಸತ್ತಿದ್ದು ಪಕ್ಷದ ಮೂಲ ಮುಖಂಡರಿಗೆ ಮರ್ಯಾದೆ ನೀಡದೆ ಏಕಾಧಿಪತ್ಯ ನಡೆಸುತ್ತಿರುವ ಬಗ್ಗೆ ಕಳೆದ 2 ದಿನಗಳ ಹಿಂದೆಯಷ್ಠೆ ಪತ್ರಿಕಾಗೊಷ್ಠಿಯಲ್ಲಿ ಹೇಳಿದ್ದ ತಾಲೂಕಾಧ್ಯಕ್ಷ ಕೈತಾನ ಬಾರಬೋಜಾ, ಮಹಿಳಾ ಅಧ್ಯಕ್ಷೆ ಶೋಭಾ ಕೊಳದಾರ, ಮಾಜಿ ಎಪಿಎಮ್ಸಿ ಅಧ್ಯಕ್ಷ ಶಾಂತಾರಾಮ ಜಾವಳೆಕರ, ಮಾರ್ಕೆಟಿಂಗ್ ಸೊಸೈಟಿ ಮಾಜಿ ಅಧ್ಯಕ್ಷ ದಾವಲಸಾಬ ಅಂಗಡಿ ಹಾಗೂ ಅವರ ಬೆಂಬಲಿಗರು ಇಂದಿನ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಜೋಯಿಡಾದ ಸುಭಾಷ ಕಾಣಕೊಣಕರ, ಶಾಮ ಪೊಕಳೆ, ತಾಪಂ ಸದಸ್ಯ ದೇಮಾಣಿ ಶೀರೋಜಿ, ದಾಂಡೆಲಿಯ ಟಿ.ಆರ್.ಚಂದ್ರಶೇಕರ ಸೇರಿದಂತೆ ಮೊದಲಾದ ಮುಖಂಡರು ಕೂಡ ಕಾರ್ಯಕ್ರಮಕ್ಕೆ ಆಗಮಿಸದೆ ಇರುವುದು ಹಾಗೂ ಅಭ್ಯರ್ಥಿ ಕೆ.ಆರ್.ರಮೇಶ ತಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ ಇರುವ ಬಗ್ಗೆ ಹಾಗೂ ಮನಸ್ಸಿಗೆ ಬಂದಂತೆ ವರ್ತಿಸುತ್ತಿರುವ ಕುರಿತು ಪತ್ರಿಕಾ ಹೇಳಿಕೆ ನೀಡುತ್ತಿರುವ ಮುಖಂಡರುಗಳು ಹೈಕಮಾಂಡ ಗಮನಕ್ಕೆ ತಂದಿದ್ದು ಸದ್ಯದಲ್ಲೆ ಅವರು ಪಕ್ಷ ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷರೇ ಆಗಮಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗದಿರುವ ಮುಖಂಡರ ನಡೆಯನ್ನು ಜೆಡಿಎಸ್ ಪಕ್ಷದಲ್ಲಿನ ಹಳಿಯಾಳ ಕ್ಷೇತ್ರದಲ್ಲಿನ ಬಹಿರಂಗಗೊಂಡಿರುವ ಭಿನ್ನಮತವನ್ನು ಜೆಡಿಎಸ್ ಹೈಕಮಾಂಡ ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.
Leave a Comment