ಹೊನ್ನಾವರ .ಮಾರುಕಟ್ಟೆಗೆ, ದೇವಸ್ಥಾನಕ್ಕೆ, ಆಸ್ಪತ್ರೆಗೆ ಎಲ್ಲ ಕಡೆ ನಾವೇ ಹೋಗಬೇಕು. ಆದರೆ ಪುಸ್ತಕಗಳು ಮಾತ್ರ ನಾವಿದ್ದಲ್ಲಿಗೇ ನಮ್ಮ ಜೊತೆಗೇ ಬರುತ್ತವೆ. ಆದ್ದರಿಂದ ಪುಸ್ತಕಗಳು ನಮ್ಮ ಬಾಂಧವ್ಯ ಬೆಸೆಯುವ ಶ್ರೇಷ್ಠ ಸಂಗಾತಿಗಳು ಎಂದು ಹೊನ್ನಾವರದ ಸಾಹಿತ್ಯ ಪ್ರೇಮಿಯಾದ ನಿವೃತ್ತ ಮುಖ್ಯಾಧಾಪಕಿ ಸುಬ್ಬಲಕ್ಷ್ಮಿ ಕೊಡ್ಲಕೆರೆ ನುಡಿದರು.
ಅವರು ಹೊನ್ನಾವರದಲ್ಲಿರುವ ಉ.ಕ. ಸಿರಿಗನ್ನಡ ಪುಸ್ತಕಮನೆ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ಕಿಯ ಶ್ರೀ ಚೆನ್ನಕೇಶವ ಹೈಸ್ಕೂಲ್ ಸಭಾಭವನದಲ್ಲಿ ನಡೆಸಿದ ‘ವಿಶ್ವಪುಸ್ತಕ ದಿನಾಚರಣೆ’ಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
1923ರಿಂದ ಜಗತ್ತಿನ ಮಹಾಕವಿ ಶೇಕ್ಸಪಿಯರ್‍ನ ಜನ್ಮದಿನದಂದು ಆಚರಿಸುವ ಈ ಪುಸ್ತಕ ದಿನ ಎಲ್ಲ ಭಾಷೆಯ ಓದುಗರನ್ನು ಬೆಸೆಯಲಿ ಎಂದು ಹೇಳಿ ತಮ್ಮ ಬಾಲ್ಯ ಕಾಲದ ಪುಸ್ತಕಪ್ರೇಮಕ್ಕೆ ಪ್ರೇರಣೆ ನೀಡಿದ ಹಲವು ಘಟನೆಗಳನ್ನು ಸಭಿಕರೊಡನೆ ಹಂಚಿಕೊಂಡರು.
ಮುಖ್ಯ ಅತಿಥಿಗಳಾದ ಕುಮಟಾದ ಶಿಕ್ಷಕ ಸಾಹಿತಿ ಚಿದಾನಂದ ಭಂಡಾರಿ ಮಾತನಾಡಿ ವಿದ್ಯಾರ್ಥಿಗಳು ಕೇವಲ ಪರೀಕ್ಷಾರ್ಥಿಗಳಾಗದೇ ಓದಿನಲ್ಲಿ ಆಸ್ತೆ ಬೆಳೆಸಿಕೊಂಡು ಚಿಂತನೆಯ ಚಿಲುಮೆಗಳಾಗಬೇಕು. ತಾವು ಪುಸ್ತಕಪ್ರೇಮಿಗಳಾಗಿ ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.
ಸಭೆಯಲ್ಲಿದ್ದ ಪುಸ್ತಕಪ್ರೇಮಿಗಳಾದ – . ಭೂಮಿಕಾ ಭಟ್, ಶಿಕ್ಷಕರಾದ ಎಂ. ಎಸ್. ಹೆಗಡೆ ಗಾಳಿ, ಜನಾರ್ಧನ ಹರನೀರು, ಪ್ರೊ. ನಾಗರಾಜ ಹೆಗಡೆ ಅಪಗಾಲ, ಮಾಸ್ತಿ ಗೌಡ ಮಾತನಾಡಿ ಪುಸ್ತಕದ-ಓದಿನ ಹಿರಿಮೆಯನ್ನು ಸಾರಿದರು.
ಸಭಾಧ್ಯಕ್ಷತೆ ವಹಿಸಿದ ಪುಸ್ತಕಮನೆಯ ಸಂಘಟಕ ಕೃಷ್ಣಮೂರ್ತಿ ಹೆಬ್ಬಾg Àಮಾತನಾಡಿ ಪುಸ್ತಕಗಳು ನೀವೆಷ್ಟೆ ಬಿಸಾಡಿದರೂ ಅವು ಕೋಪಗೊಳ್ಳುವುದಿಲ್ಲ. ಪುಸ್ತಕಗಳು ಮಾನವನ ಸೇಡಿರದ ಮೌನ ಸಂಗಾತಿಗಳು ಎಂದು ಹೇಳಿದರು.
ಶಿಕ್ಷಕರಾದ ಸುರೇಶ ತಾಂಡೇಲ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಿರಿಗನ್ನಡ ಪುಸ್ತಕಮನೆ ಪುಸ್ತಕ ಪ್ರದರ್ಶನ ಹಾಗೂ ಸಭೆಯ ನಂತರ ಹಳದೀಪುರದ ‘ಗೆಳೆಯರ ಬಳಗ’ದಿಂದ ಹೆಸರಾಂತ ನಟ ವಿ. ಜಿ. ನಾಯ್ಕರು ಬರೆದು ನಿರ್ದೇಶಿಸಿದ ‘ಪರಿವರ್ತನೆ’ ಎಂಬ ನಾಟಕವನ್ನು ಪ್ರದರ್ಶಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
Leave a Comment