ಗೋಕರ್ಣ :
ಸಾಮಾಜಿಕ ಕಳಕಳಿ ಹಾಗೂ ಜನಸೇವೆಯಲ್ಲಿ ತನ್ನದೇ ಛಾಪು ಮೂಡಿಸಿದ ಜನಮಾನಸದಲ್ಲಿ ಬೆರೆತು ಕಳೆದ ಜಿ.ಪಂ. ಚುನಾವಣೆಯಲ್ಲಿ ಅತಿಹೆಚ್ಚು ಮತ ಪಡೆದು ಕೆಲವೇ ಮತಗಳಿಂದ ಪರಾಭವ ಆದ ತಾ.ಪಂ ಮಾಜಿ ಅದ್ಯಕ್ಷೆ ಭಾರತಿ ದೇವತೆ ಹಾಗೂ ಗೋಕರ್ಣದಲ್ಲಿ ಗೂಡಂಗಡಿ ಅತಿಕ್ರಮಣ ತೆರವು ಹಾಗೂ ಗ್ರಾ.ಪಂ. ಆದಾಯ ಹೆಚ್ಚಿಸುವಲ್ಲಿ ನೆರವಾದ ಸಾಮಾಜಿಕ ಕಾರ್ಯಗಳ
ಮುಂಚೂಣಿ ಸ್ಥಾನದಲ್ಲಿ ಹೆಸರು ಮಾಡಿದ ನಾಗರಾಜ ಹಿತ್ಲಮಕ್ಕಿ ಹಾಗೂ ಇತರ 40 ಕ್ಕೂ ಹೆಚ್ಚಿನವರು ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡೆಯಾದರು.
ನಿನ್ನೆ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ, ಕೆನರಾ ಸಂಸದ ಅನಂತಕುಮಾರ ಹೆಗಡೆಯವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಹಾಲಕ್ಕಿ ಸಮಾಜದ ಮುಖಂಡ ಸುಬ್ಬು ಗೌಡ ಪಕ್ಷಕ್ಕೆ ಸೇರಿ ನೂತನ ಮುನ್ನುಡಿ ಬರೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು “70 ವರುಷಗಳ ಕಾಂಗ್ರೆಸ್ ಪಕ್ಷದ ಅಸಂಬದ್ದ ಅಭಿವೃದ್ದಿ ಕಾರ್ಯ ಜನರಿಗೆ ತೀವ್ರ ಬೇಸರ ತಂದಿದೆ. ಹೊಸ ಅವಿಷ್ಕಾರದ ಹೊಸ ರೀತಿಯ ಅಭಿವೃದ್ಧಿ ಕಾರ್ಯಕ್ಕೆ ಜನರ ಸಹಕಾರ ಬೇಕಾಗಿದೆ. ಕಾಂಗ್ರೆಸ್ ಪಕ್ಷ ಜನರಿಗೆ ಕೊಡ ಮಾಡಿದ ದುರಾಡಳಿತದ ಕ್ಯಾನ್ಸರ್ ಗಡ್ಡೆಯನ್ನು ಕಿತ್ತೆಸೆಯಬೇಕಾಗಿದೆ. ಇದೇ 12 ರ ಮತದಾನ ಬಿಜೆಪಿಗಿರಲಿ” ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ ಅದ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಪ್ರಾಸ್ತಾವಿಕದಲ್ಲಿ “ಪಕ್ಷ ಹಾಗೂ ಕೇಂದ್ರದ ಅಭಿವೃದ್ಧಿ ಪಥಕ್ಕೆ ಸಹಕರಿಸುವ ನಿಟ್ಟಿನಲ್ಲಿ ಈ ಹಿಂದೆ ಆನಂದು ಕವರಿ, ಸುಧಾಗೌಡ, ಅರುಣ ಕವರಿ ಹಾಗೂ ತಾನು ಪಕ್ಷಕ್ಕೆ ಸೇರ್ಪಡೆಯಾಗಿ ಹೆಚ್ಚಿನ ಜನಬಲ ಬರುವಂತೆ ಮಾಡಿದೆವು. ಇದೀಗ ಭಾರತಿ ದೇವತೆ ಹಾಗೂ ಇತರರ ಸೇರ್ಪಡೆಯಿಂದ ಬಿ.ಜೆ.ಪಿ.ಗೆ ಆನೆಯ ಬಲ ಬಂದಿದೆ. ಪ್ರವಾಸೋದ್ಯಮದಲ್ಲಿ ಉನ್ನತ ಸ್ಥಾನಕ್ಕೇರಲಿರುವ ಗೋಕರ್ಣದ ಅಭಿವೃದ್ಧಿಗಾಗಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಶೀಘ್ರತೆಗೆ ಇದು ನಾಂದಿ ಹಾಗೂ ಬಿ.ಜೆ.ಪಿ. ಯೊಂದಿಗೆ ನಾವಿದ್ದು ಜಯಕ್ಕಾಗಿ ನಾವೆಲ್ಲ ಹೋರಾಡೋಣ” ಎಂದರು.
ವೇದಿಕೆಯಲ್ಲಿ ಪಕ್ಷದ ಅಭ್ಯರ್ಥಿ ದಿನಕರ ಶೆಟ್ಟಿ ಇದ್ದು ಮತ ಯಾಚಿಸಿದರು, ಜಿಲ್ಲಾ ಯುವ ಮೋರ್ಚಾ ಮಹಿಳಾ ಅದ್ಯಕ್ಷೆ ನಾಗವೇಣಿ ಹೆಗಡೆ, ವಿನೋದ ಪ್ರಭು, ಗಜಾನನ ಗುನಗಾ, ಜಯರಾಮ ಹೆಗಡೆ ಮುಂತಾದವರಿದ್ದರು. ಮಂಜುನಾಥ ಜನ್ನು ಸ್ವಾಗತಿಸಿ ವಂದಿಸಿದರು, ಸುರೇಶ ಮಾಸ್ತರ ನಿರ್ವಹಣೆ ಗೈದರು 1000 ಕ್ಕೂ ಹೆಚ್ಚಿನ ಜನ ನೆರೆದು ಪಕ್ಷದ ಬಲವರ್ಧನೆಗೆ ಸಾಕ್ಷಿಯಾದರು.
Leave a Comment