ಹಳಿಯಾಳ:- ಕಳೆದ 25 ದಿನಗಳಿಂದ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಧುಮುಕಿ ಮತದಾರನ ಮನ ಗೆಲ್ಲಲು ಸಾಕಷ್ಟು ರಾಜಕೀಯ ಕಸರತ್ತು, ರಾಜಕೀಯ ಡೊಂಬರಾಟಗಳನ್ನು ಆಡಿ ಕ್ಷೇತ್ರಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಾಡಿದ ಅಭ್ಯರ್ಥಿಗಳು ಮತದಾನವಾದ 2ನೇ ದಿನ ಏನು ಮಾಡುತ್ತಿದ್ದಾರೆ ಎಂಬ ಕುರಿತು ಸಂಕ್ಷೀಪ್ತ ವರದಿ.
ಜಾತ್ರಾಮಹೋತ್ಸವದಲ್ಲಿ ಭಾಗಿ:- ಕಾಂಗ್ರೇಸ್ ಪಕ್ಷದ ಹಿರಿಯ ಮುಖಂಡ ಹಾಗೂ ಸಚಿವ ಆರ್.ವಿ.ದೇಶಪಾಂಡೆ ಅವರು ಈ ಬಾರಿ 8 ನೇ ಬಾರಿ ಗೆಲುವಿಗಾಗಿ 9ನೇ ಬಾರಿ ಅಖಾಡಕ್ಕೆ ಇಳಿದಿದ್ದರು ಅಲ್ಲದೇ ತಮ್ಮ 72ನೇ ವಯಸ್ಸಿನಲ್ಲೂ ಯುವಕರು ನಾಚಿಸುವಂತೆ ಕ್ಷೇತ್ರಾದ್ಯಂತ ತಮ್ಮ ಗೆಲುವಿಗಾಗಿ ಹಾಗೂ ಜಿಲ್ಲೆಯಾದ್ಯಂತ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತೀರುಗಾಡಿ 12ರಂದು ಮತದಾನವಾದ ಬಳಿಕ 13 ರಂದು ಭಾನುವಾರ ಅವರು ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವಿ ಲಕ್ಷ್ಮೀಯ ಜಾತ್ರಾ ಮಹೋತ್ಸವದಲ್ಲಿ ಪತ್ನಿ ರಾಧಾಬಾಯಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರೊಂದಿಗೆ ಪಾಲ್ಗೊಂಡು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ತಮ್ಮ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹಳಿಯಾಳದ ತಮ್ಮ ನಿವಾಸಕ್ಕೆ ಆಗಮಿಸಿದ ಅವರು ಮಧ್ಯಾಹ್ನ ಊಟ ಸೇವಿಸಿ ತಮ್ಮ ಆಪ್ತರೊಂದಿಗೆ ಕ್ಷೇತ್ರದ ಮತದಾನದ ಬಳಿಕದ ಚಿತ್ರಣದ ಬಗ್ಗೆ ಚರ್ಚಿಸಿ ಕೇಂದ್ರಸ್ಥಾನ ಬೆಂಗಳೂರಿಗೆ ತೆರಳಿದರು.
ಕಾರ್ಯಕರ್ತರೊಂದಿಗೆ ಚರ್ಚೆ- ವಿಶ್ರಾಂತಿ :- ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರು 2ನೇ ಬಾರಿ ಗೆಲುವಿಗಾಗಿ 3ನೇ ಬಾರಿ ರಾಜಕೀಯ ಕುಸ್ತಿ ಅಖಾಡಕ್ಕೆ ಇಳಿದು ತಮ್ಮ ತಂದೆ ವಿಡಿ ಹೆಗಡೆ ಹಾಗೂ ಮುಖಂಡರ ಮಾರ್ಗದರ್ಶನದಲ್ಲಿ ಕ್ಷೇತ್ರಾದ್ಯಂತ ದನಿವಿಲ್ಲದಂತೆ ಗೆಲುವು ಸಾಧಿಸಲೇಬೇಕು ಹಳಿಯಾಳದಲ್ಲಿ ಕಮಲ ಅರಳಿಸಲೇಬೇಕೆನ್ನುವ ಹಂಬಲದಿಂದ ನಿರಂತರವಾಗಿ ಸಂಚರಿಸಿ ಪ್ರಚಾರ ಕಾರ್ಯ ನಡೆಸಿ ಮತದಾನದ ಬಳಿಕ ಭಾನುವಾರ ಅವರು ತಮ್ಮ ಕಾರ್ಯಾಲಯದಲ್ಲಿ ಗ್ರಾಮಾಂತರ ಹಾಗೂ ಪಟ್ಟಣದ ಹತ್ತಾರು ಕಾರ್ಯಕರ್ತರೊಂದಿಗೆ ಮತದಾನೋತ್ತರದ ಸಮೀಕ್ಷೆಗಳ ಬಗ್ಗೆ ಹಾಗೂ ಹಳ್ಳಿಗಳಲ್ಲಿ ನಡೆದ ಮತದಾನದ ಸಂಪೂರ್ಣ ಚಿತ್ರಣ ಪಡೆದು ಚರ್ಚೆಯ ಬಳಿಕ ಪಟ್ಟಣದ ಸುಭಾಷ ನಗರದಲ್ಲಿರುವ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
Leave a Comment