ಹಳಿಯಾಳ :- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಗ್ರಾಮೀಣ ಪ್ರದೇಶದ ಉದಯೋನ್ಮುಖ ಮೂವರು ಕುಸ್ತಿಪಟುಗಳು ಭಾರತ ಸರ್ಕಾರದ ಯೋಜನೆಯಾದ ಖೇಲೋ ಇಂಡಿಯಾ ಯೋಜನೆಯ ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ಹೊರಡಿಸಿರುವ ಸಚಿವರು ತಾಲೂಕಿನ ಗ್ರಾಮೀಣ ಪ್ರದೇಶದ ಕುಸ್ತಿಪಟುಗಳಾದ ಲೀನಾ ಅಂತೋನ ಸಿದ್ಧಿ, ಸೂರಜ್ ಸಂಜು ಅಂಕೇರಿ ಮತ್ತು ಜ್ಯೋತಿ ಎಮ್. ಘಾಡಿ ಅವರುಗಳ ಸಾಧನೆಯನ್ನು ಶ್ಲಾಘಿಸಿದ್ದು ಹಳಿಯಾಳ ತಾಲೂಕಿಗೆ ಹೆಮ್ಮೆ ತಂದಿರುವ ವಿದ್ಯಾರ್ಥಿ ಕ್ರೀಡಾಪಟುಗಳು ಶೀಷ್ಯವೇತನದ ಸದುಪಯೋಗ ಪಡೆದು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದು ದೇಶ, ರಾಜ್ಯ,ಜಿಲ್ಲೆ ಹಾಗೂ ಹಳಿಯಾಳ ತಾಲೂಕಿಗೆ ಕೀರ್ತಿ ತರಲೆಂದು ಹಾರೈಸಿದ್ದಾರೆ. ಹಳಿಯಾಳದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನಿಂದ ಇವರಿಗೆ ಪ್ರೋತ್ಸಾಹನ ದೊರೆಯುತ್ತಿದ್ದು ಮುಂದೆ ಕೂಡ ಹೆಚ್ಚಿನ ಸಹಾಯ-ಸಹಕಾರ ಸಿಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಈ ಶಿಷ್ಯವೇತನದಲ್ಲಿ ಪ್ರತಿ ಕುಸ್ತಿಪಟುವಿಗೆ ಒಂದು ವರ್ಷದ ಶಿಷ್ಯವೇತನ ರೂ.5 ಲಕ್ಷಗಳ ವರೆಗೆ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ರೂ.1.25ಲಕ್ಷಗಳನ್ನು ನೀಡಲಾಗುತ್ತದೆ. ಈ ಶಿಷ್ಯವೇತನವು ಒಟ್ಟು 8 ವರ್ಷಗಳ ವರೆಗೆ ನೀಡಲಾಗುತ್ತದೆ ಎಂದು ಸಚಿವ ದೇಶಪಾಂಡೆ ಮಾಹಿತಿ ನೀಡಿದ್ದಾರೆ.


Leave a Comment