ಹೊನ್ನಾವರ: ಜ್ಞಾನವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಿ ಎಂದು ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.
ಪಟ್ಟಣದ ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ವಿದ್ಯಾರ್ಥಿ ನಿಲಯದಲ್ಲಿ ಸಂಘದ ವತಿಯಿಂದ ರವಿವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಪ್ರತಿಭಾವತರಿದ್ದಾರೆ. ಪ್ರತಿವರ್ಷ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುತ್ತಿದೆ. ಬಹುಮಾನದ ಮೌಲ್ಯವನ್ನು ಲೆಕ್ಕಿಸದೇ ಸಮಾಜವು ನೀಡಿದ ಗೌರವವನ್ನು ಕಾಳಜಿಯಿಂದ ಸ್ವೀಕರಿಸಬೇಕು. ಸಮಾಜದ ಜನರು ಸಂಘದ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಿರ್ವತ್ತ ಬ್ಯಾಂಕ್ ವ್ಯವಸ್ಥಾಪಕ ಡಿ.ಜೆ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಅಭಿನಂದನಾರ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಿದಾಗ ಸಮಾಜದ ಒಳಿತನ್ನು ಬಯಸುವಂತಾಗಬೇಕು. ಸಂಘದ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಸಮಾಜಬಾಂಧವರು ಕೈಜೋಡಿಸಬೇಕು ಎಂದರು.
ಎಸ್‍ಎಸ್‍ಎಲ್‍ಸಿಯಲ್ಲಿ ಶೇ. 90 ಮತ್ತು ಪಿಯುಸಿಯಲ್ಲಿ ಶೇ. 85 ಕ್ಕಿಂತ ಹೆಚ್ಚು ಅಂಕಗಳಿಸಿದ ತಾಲೂಕಿನ ಸಮಾಜದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಮಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಎಂ.ಜಿ.ನಾಯ್ಕ, ಜಿ.ಪಂ.ಸದಸ್ಯೆ ಪುಷ್ಪಾ ನಾಯ್ಕ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಸ್.ಟಿ.ನಾಯ್ಕ, ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಜಿ.ಎಚ್.ನಾಯ್ಕ ಇತರರು ಉಪಸ್ಥಿತರಿದ್ದರು.
ಸಂಗೀತಾ ನಾಯ್ಕ ಪ್ರಾರ್ಥನಾ ಗೀತೆ ಹಾಡಿದರು. ಸಂಘದ ಉಪಾಧ್ಯಕ್ಷ ವಿ.ಜಿ.ನಾಯ್ಕ ಸ್ವಾಗತಿಸಿದರು. ನೀಲಕಂಠ ನಾಯ್ಕ ಮತ್ತು ವಾಮನ ನಾಯ್ಕ ವರದಿ ವಾಚಿಸಿದರು. ಟಿ.ಟಿ.ನಾಯ್ಕ ವಂದನಾರ್ಪಣೆ ಮಾಡಿದರು. ಸುಧೀಶ ನಾಯ್ಕ ಮತ್ತು ಮೋಹನ ನಾಯ್ಕ ನಿರ್ವಹಿಸಿದರು.
Leave a Comment