ಉತ್ತರಕನ್ನಡ ಜಿಲ್ಲೆಯ ನೇತಾರ, ಮೌಲ್ಯಾಧಾರಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ, ಕರ್ನಾಟಕ ಲೋಕಾಯುಕ್ತ ಜನಕ, ದಿ|| ರಾಮಕೃಷ್ಣ ಹೆಗಡೆಯವರ ಜನ್ಮದಿನದಂದು ಉತ್ತರಕನ್ನಡ ಜಿಲ್ಲಾ ದಿ|| ಡಿ. ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಇವರು ಹೆಗಡೆಯವರನ್ನು ಸ್ಮರಿಸಿ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣ ಮಾಡುವಲ್ಲಿ ಲೋಕಪಾಲ ಮಸೂದೆ ಮತ್ತು ಕರ್ನಾಟಕ ಲೋಕಾಯುಕ್ತವÀನ್ನು ಸ್ವತಂತ್ರ ಸ್ವಾಯತ್ತ ಸಂಸ್ಥೆಯನ್ನಾಗಿ ಶಕ್ತಿ ತುಂಬುವ ಕೆಲಸ ಮಾಡಬೇಕೆಂದು ಆಗ್ರಹಿಸಿ ಸನ್ಮಾನ್ಯ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ.
ದೇಶದ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಲಿದೆ. ಇದನ್ನು ನಿಯಂತ್ರಿಸುವ ಮನಸ್ಥಿತಿ ಯಾವ ರಾಜಕೀಯ ಪಕ್ಷಕ್ಕೂ ಇದ್ದಹಾಗಿಲ್ಲ. ಭ್ರಷ್ಟಾಚಾರ ನಿವಾರಣೆಯಾಗದೇ ದೇಶದ, ರಾಜ್ಯದ ಪ್ರಗತಿ ಅಸಾಧ್ಯವೆಂದು ಮನಗಂಡ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ರಾಮಕೃಷ್ಣ ಹೆಗಡೆಯವರು 1985 ರಲ್ಲಿ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಸ್ವತಂತ್ರವಾದ ಸ್ವಾಯತ್ತ ಸಂಸ್ಥೆಯನ್ನಾಗಿ ಕರ್ನಾಟಕ ಲೋಕಾಯುಕ್ತವನ್ನು ಸ್ಥಾಪಿಸಿದರು. ಅದಕ್ಕೆ ತನ್ನದೇ ಆದ ಸಂಪೂರ್ಣ ಅಧಿಕಾರವನ್ನು ನೀಡಿದರು. ಇದರಿಂದ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದರು. ಆದರೆ ಇಂದು ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಿ ಮತ್ತೊಂದು ಭ್ರಷ್ಟಾಚಾರ ನಿಗ್ರಹ ದಳವನ್ನು ಹುಟ್ಟುಹಾಕಿದ್ದಾರೆ. ಒಂದು ಕತ್ತಿಗೆ ಎರಡು ಹಿಡಿಕೆಯನ್ನು ನಿರ್ಮಿಸಿ ಗೊಂದಲ ಸೃಷ್ಟಿಗೆ ದಾರಿಯಾಗಿದೆ. ಲೋಕಾಯುಕ್ತದ ಶಕ್ತಿ ಕುಂದಿಸಿದಂತಾಗಿದೆ. ಆದ್ದರಿಂದ ಭೃಷ್ಟಾಚಾರ ನಿಗ್ರಹ ದಳವನ್ನು ವಿಸರ್ಜಿಸಿ ಕೇವಲ ಲೋಕಾಯುಕ್ತ ಮಾತ್ರ ಭ್ರಷ್ಟಾಚಾರ ನಿಯಂತ್ರಿಸುವ, ಶಿಕ್ಷಿಸುವ ಏಕೈಕ ಸ್ವಾಯತ್ತ ಸಂಸ್ಥೆಯಾಗಬೇಕು. ಇಂದಿನ ಸರ್ಕಾರ, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ತಾಂಡವ ನೃತ್ಯಗೈಯ್ಯುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಂಕಲ್ಪ ಮಾಡಬೇಕಾಗಿದೆ. ಇಲ್ಲವಾದರೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಗಲು ದರೋಡೆ ನಡೆಯುವುದಕ್ಕೆ ಸಾಕ್ಷಿಯಾಗುತ್ತೇವೆ. ಲೋಕಾಯುಕ್ತ ದುರ್ಬಲವಾಗುವುದಕ್ಕೆ ನಮ್ಮನ್ನಾಳುವ ಜನಪ್ರತಿನಿಧಿಗಳು, ಸರ್ಕಾರ, ಅಧಿಕಾರಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಸಣ್ಣ ನೀರಾವರಿ ಇಲಾಖೆಯಿಂದ ಹಿಡಿದು ದೊಡ್ಡ ದೊಡ್ಡ ಕೆಲವು ಇಲಾಖೆಗಳು ಕೇವಲ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುತ್ತಲಿದ್ದಾರೆ. ಕಾರಣ ಲೋಕಾಯುಕ್ತ ದುರ್ಬಲಗೊಂಡಿರುವುದರಿಂದ, ಮಾಹಿತಿ ಹಕ್ಕನ್ನು ಅಗೌರವಿಸುವ, ದಾರಿ ತಪ್ಪಿಸುವ ಭೃಷ್ಟ ಅಧಿಕಾರಿಗಳಿಂದ ಭ್ರಷ್ಟಾಚಾರ ಹಿಂದೆಂದಿಗಿಂತಲೂ ಇಂದು ಹೆಚ್ಚು ವಿಜೃಂಭಿಸುತ್ತಲಿದೆ. ಭ್ರಷ್ಟಾಚಾರ ಮತ್ತು ನಿರುದ್ಯೋಗವನ್ನು ನಿಯಂತ್ರಿಸದೇ ಇದ್ದಲ್ಲಿ ದೇಶಕ್ಕೆ, ನಾಡಿಗೆ ಉಳಿಗಾಲವಿಲ್ಲ. ಸಾಮಾಜಿಕ ನ್ಯಾಯವೆಂದರೆ ದೇವರಾಜ ಅರಸು ; ಲೋಕಾಯುಕ್ತವೆಂದರೆ ರಾಮಕೃಷ್ಣ ಹೆಗಡೆಯವರ ನೆನಪು ಸಾಕ್ಷಾತ್ಕಾರಗೊಳ್ಳುತ್ತದೆ.
ಆದ ಕಾರಣ ಇಂದಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗ್ಗದ ಪ್ರಚಾರಗಳನ್ನು ಬಿಟ್ಟು, ಈ ಮಹಾಮಾರಿ ಪಿಡುಗುಗಳನ್ನು ತೊಲಗಿಸುವ ಸಂಕಲ್ಪ ಮಾಡಲಿ. ಕೇವಲ “ಅಚ್ಚಾ ದಿನ್ ಆಯೇಗಾ”, “ಸಬ್ ಕಾ ಸಾಥ್: ಸಬ್ ಕಾ ವಿಕಾಸ್,” ಅಂತ ಹೇಳುವುದರಿಂದಾಗಲೀ, ಮಾಧ್ಯಮದ ಮುಂದೆ ಕಣ್ಣೀರಿಡುವುದರಿಂದಾಗಲೀ ನಾಡಿನ ಅಭಿವೃದ್ಧಿ ಅಸಾಧ್ಯ. ಲೋಕಾಯುಕ್ತ ಜನಕರಾದ ರಾಮಕೃಷ್ಣ ಹೆಗಡೆಯವರ ಜನ್ಮದಿನದಂದು ಗೌರವ ಸಮರ್ಪಿಸಿ, ಈ ಮನವಿ ಸಲ್ಲಿಸಲಾಗಿದೆಯೆಂದು ಅನಂತ ನಾಯ್ಕ ಹೆಗ್ಗಾರ ಮನವಿ ಸಲ್ಲಿಸಿದ್ದಾರೆ.
Leave a Comment