ಹಳಿಯಾಳ:- ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ವಿರುದ್ದ ಬುಧವಾರ ದಿ.5 ರಂದು ಕಬ್ಬು ಬೆಳೆಗಾರ ರೈತರು, ರೈತ ಸಂಘದವರು ಕರೆ ನೀಡಿದ್ದ ಹಳಿಯಾಳ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬೇಡಿಕೆ ಈಡೇರದೇ ಇದ್ದರೇ ಸೆ.18 ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗುವುದೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
2016-17ನೇ ಸಾಲಿಗೆ ಪೂರೈಸಿದ ಕಬ್ಬಿನ ಬಾಕಿ ಬಿಲ್ ಪ್ರತಿ ಟನ್ಗೆ 305ರೂ. ನೀಡುವಂತೆ ಆಗ್ರಹಿಸಿ, ಹಳಿಯಾಳದ ಹುಲ್ಲಟ್ಟಿಯಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಎದುರು ಕಳೆದ 32 ದಿನಗಳಿಂದ ಧರಣಿ ನಡೆಸುತ್ತಿರುವ ರೈತರ ಬೇಡಿಕೆಗೆ ಕಾರ್ಖಾನೆ, ತಾಲೂಕಾಡಳಿತ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸ್ಪಂದಿಸದೆ ಇರುವುದಕ್ಕೆ ಬಂದ್ ಕರೆ ನಿಡಲಾಗಿತ್ತು ಎಂದಿರು ಪ್ರತಿಭಟನಾಕಾರರು ಇನ್ನೂ ಮುಂದೆ ಬೆಂಗಳೂರಿನ ಸಿಎಮ್ ಕಚೇರಿ ಎದುರು ಕೂಡ ಪ್ರತಿಭಟನೆ ನಡೆಸುವ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪಟ್ಟಣದ ಮರಾಠಾ ಭವನದಲ್ಲಿ ಬೆಳಿಗ್ಗೆ ಸಭೆ ಸೇರಿ, ಬಳಿಕ ಹಲವರು ಬೈಕ್ ರ್ಯಾಲಿ ನಡೆಸಿದರು. ತದ ನಂತರ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ವನಶ್ರೀ ವೃತ್ತದಿಂದ ಶಿವಾಜಿ ವೃತ್ತಕ್ಕೆ ಆಗಮಿಸಿ ರಸ್ತೆ ತಡೆದು ರೈತರು ಪ್ರತಿಭಟಿಸಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ರೈತರು ಸಲ್ಲಿಸಿದರು.
ರೈತರ ಧರಣಿಯಲ್ಲಿ ಪಾಲ್ಗೊಂಡ ಹಳಿಯಾಳ ನ್ಯಾಯವಾದಿಗಳ (ವಕೀಲರ) ಸಂಘದವರು ತಮ್ಮ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಅಲ್ಲದೇ ಕಾನೂನಾತ್ಮಕವಾಗಿಯೂ ಹೋರಾಟ ನಡೆಸಲು ರೈತರಿಗೆ ಸಾಥ್ ನೀಡುವುದಾಗಿ ಘೊಷಿಸಿದರು. ಈಗಾಗಲೇ ಧರಣಿ ಸತ್ಯಾಗ್ರಹ 32 ದಿನ ಪೂರೈಸಿದ್ದು ಕೂಡಲೇ ರೈತರ ಬೇಡಿಕೆ ಈಡೇರದೇ ಇದ್ದರೇ ಸೆ.18 ರಂದು ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಾಕಿಕೊಳ್ಳಲಾಗುವುದೆಂದು ರೈತ ಮುಖಂಡರು ಘೋಷಿಸಿದರು.
ಹಳಿಯಾಳ ಬಂದ್ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೇ ವ್ಯಕ್ತವಾಗಿದೆ. ಬಂದ್ನಿಂದ ಅಂಗಡಿ ಮುಗ್ಗಟ್ಟು, ಹೋಟೆಲ್ ಸೇರಿದಂತೆ ವಾಣಿಜ್ಯ ವ್ಯವಹಾರಗಳು ಸ್ಥಗೀತಗೊಂಡಿದ್ದವು. ಜೌಷಧಿ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿತ್ತು. ಬಸ್ ಸಂಚಾರ ಕೆಲಕಾಲ ಮಾತ್ರ ಸ್ಥಗೀತಗೊಂಡಿತ್ತು. ಸಾಯಂಕಾಲ 5 ಗಂಟೆಯ ಬಳಿಕ ವ್ಯಾಪಾರಸ್ಥರು ಅಂಗಡಿಗಳನ್ನು ತೆರೆದು ವ್ಯಾಪಾರ ವಹಿವಾಟುಗಳನ್ನು ಪ್ರಾರಂಭಿಸಿದರು.
ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೀಗಿ ಪೋಲಿಸ್ ಬಂದೋಬಸ್ತ ನಿಯೋಜಿಸಲಾಗಿತ್ತು. ಸುಮಾರು 500ಕ್ಕೂ ಹೆಚ್ಚು ಪೋಲಿಸರು ಪಟ್ಟಣದಲ್ಲಿ ಕಾರ್ಯನಿರ್ವಹಿಸಿದರು. ಪ್ರತಿಭಟನಾಕಾರರಿಗಿಂತ ಪೋಲಿಸರ ಸಂಖ್ಯೆಯೆ ಅಧಿಕವಾಗಿ ಕಂಡಿದ್ದು ವಿಶೇಷವಾಗಿತ್ತು.
ಪ್ರತಿಭಟನೆಯ ನೇತೃತ್ವವನ್ನು ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಾರಿ ಘಾಡಿ, ತಾಲೂಕಾಧ್ಯಕ್ಷ ಶಂಕರ ಕಾಜಗಾರ, ಅಶೋಕ ಮೆಟಿ, ಗಿರಿಶ ಠೋಸುರ, ಕುಮಾರ ಬೋಬಾಟಿ, ಪ್ರಕಾಶ ಫಾಕ್ರಿ, ಗಣಪತಿ ಕರಂಜೆಕರ, ಜಿ.ಆರ್.ಪಾಟೀಲ್, ಎಸ್.ಕೆ. ಗೌಡಾ, ಯುಕೆ ಬೋಬಾಟಿ ಇತರರು ವಹಿಸಿದ್ದರು. ವಕೀಲರ ಸಂಘದ ಎಮ್.ವಿ.ಅಷ್ಟೇಕರ, ಎಎಮ್ ಪಾಟೀಲ್, ಮೇಘರಾಜ ಮೇತ್ರಿ, ಚಂದ್ರಶೇಖರ ನುಚ್ಚಂಬ್ಲಿ, ಮಂಜುನಾಥ, ಸುಂದರ ಕಾನಕತ್ರಿ, ಸುರೇಖಾ ಗುನಗಾ, ರಾಧಾರಾಣಿ ಕೊಳಂಬೆ ಇತರರು ಇದ್ದರು.
Leave a Comment