ಹಳಿಯಾಳ:- ತಾಲೂಕಿನ ಮುರ್ಕವಾಡ ವಲಯದ ಮುಂಡವಾಡ ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂ. ಬೆಲೆಬಾಳುವ ಸಾಗವಾನಿ ಮರಗಳನ್ನು ಕಡಿದು ರೂಪಾಂತರಗೊಳಿಸಿ ಸಾಗಿಸಲು ತಯಾರಿ ನಡೆಸಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹಳಿಯಾಳ ಅರಣ್ಯ ಇಲಾಖೆ ಅಧಿಕಾರಿಗಳು ಮಾಲು ಸಮೇತ ಇಬ್ಬರು ಆರೋಪಿಯನ್ನು ಬಂಧಿಸಿದ್ದು ಓರ್ವ ಆರೋಪಿ ಪರಾರಿಯಾಗಿದ್ದಾನೆ.
ದಿನಾಂಕ: 10-09-2018 ರಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ರಮೇಶ ರವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಸಂತೋಷ ಮುಕ್ರಿ ಇವರಿಗೆ ಸಿಕ್ಕ ಖಚಿತ ಮಾಹಿತಿಯಂತೆ ಸಿಬ್ಬಂದಿಯೊಂದಿಗೆ ಮುಂಡವಾಡ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಮಧ್ಯರಾತ್ರಿ ಅಕ್ರಮವಾಗಿ ಪ್ರವೇಶ ಮಾಡಿ ಅನಧೀಕೃತವಾಗಿ ಸಾಗ ಹಸಿ ಮರಗಳನ್ನು ಕಡಿದು ರೂಪಾಂತರಿಸಲು ತಮ್ಮ ಹೊಲದಲ್ಲಿ ಯಂತ್ರದಿಂದ ಕತ್ತರಿಸುತ್ತಿರುವ ಮೂರು ಆರೋಪಿತರನ್ನು ಹಠಾತನೆ ದಾಳಿ ಮಾಡಿದಾಗ ಒರ್ವ ಪರಾರಿಯಾಗಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ತಾಲೂಕಿನ ಮುಂಡವಾಡ ಗ್ರಾಮದ ಚಂದ್ರಕಾಂತ ದೇಮಣ್ಣಾ ಪರಸಣ್ಣವರ ಹಾಗೂ ಉಳಬಸಪ್ಪಾ ನಿಂಗಪ್ಪಾ ಗುತ್ತೇಣ್ಣವರ ಬಂಧಿತ ಆರೋಪಿಗಳಾಗಿದ್ದು ಪರಾರಿಯಾದವನನ್ನು ಮಲ್ಲಪ್ಪಾ ರುಪಣ್ಣಾ ಗುತ್ತೇಣ್ಣವರ ಎನ್ನಲಾಗಿದೆ.
ಬಂಧಿತರಿಂದ 1 ಲಕ್ಷ ರೂ ಬೆಲೆಯ ಸಾಗವಾನಿ ನಾಟಗಳು ಮತ್ತು ಯಂತ್ರ ವಶಪಡಿಸಿಕೊಂಡಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರಾಜಶೇಖರ ರಾಚಣ್ಣವರ, ಮಲ್ಲಪ್ಪ ಕದಂಪುರ, ಬಾಬು ಹರಿಜನ, ಎಲ್ ಬಿ ಕಶೀಲಕರ ಪಾಲ್ಗೊಂಡಿದ್ದರು.
Leave a Comment