ಹಳಿಯಾಳ : ನವರಾತ್ರಿ ಉತ್ಸವದ 9ದಿನಗಳ ಕಾಲ ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆಯುವ ದುರ್ಗಾದೌಡ –ಧಾರ್ಮಿಕ ನಡಿಗೆ ಕಾರ್ಯಕ್ರಮ 2ನೇ ದಿನ ಪೂರೈಸಿದ್ದು. ತಾಲೂಕಿನ ಮುರ್ಕವಾಡ, ತೇರಗಾಂವ ಹಾಗೂ ಯಡೋಗಾ ಗ್ರಾಮಗಳಲ್ಲಿಯೂ ದುರ್ಗಾದೌಡ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ಪಕ್ಕದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲೇ ಆಚರಿಸಲ್ಪಡುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಈಗಾಗಲೇ ಆಯಾ ಭಾಗದ ಜನರು ದುರ್ಗಾದೌಡನ್ನು ಸ್ವಾಗತಿಸಲು ತಮ್ಮ ಬಡಾವಣೆಗಳಲ್ಲಿ ವಿಶೇಷ ಅಲಂಕಾರ, ಭಗವಾಧ್ವಜಗಳಿಂದ ಕೇಸರಿ ವಾತಾವರಣ ಹಾಗೂ ರಸ್ತೆಗಳ ತುಂಬೆಲ್ಲ ಬಣ್ಣ-ಬಣ್ಣದ ದೊಡ್ಡ ರಂಗವಲ್ಲಿಗಳ ಚಿತ್ತಾರದಿಂದ ಆಕರ್ಷಕ ಕಾಣುವಂತೆ ಶೃಂಗರಿಸುತ್ತಿದ್ದಾರೆ. ಅಲ್ಲದೇ ಮಕ್ಕಳಿಗೆ ವೀರ ವನಿತೆಯರು, ಪುರುಷರ ಛದ್ಮವೇಷ ತೊಡಿಸುವುದು. ರಸ್ತೆಯ ಇಕ್ಕೆಲಗಳಲ್ಲಿ, ಮಧ್ಯದಲ್ಲಿ ದೇವತೆಗಳ, ವೀರ ಪುರುಷರು, ವನಿತೆಯರು, ಕ್ರಾಂತಿಕಾರಿಗಳ ಭಾವಚಿತ್ರಗಳನ್ನಿಟ್ಟು ಪೂಜೆ ಸಲ್ಲಿಸುವ ಮೂಲಕ ವಿಶಿಷ್ಠವಾಗಿ ದುರ್ಗಾದೌಡ ಆಚರಿಸಲಾಗುತ್ತಿದೆ.
ಪಟ್ಟಣದ ಸಿದ್ದರಾಮೇಶ್ವರ ದೇವಸ್ಥಾನ ತಲುಪಿರುವ ದುರ್ಗಾದೌಡ ಶುಕ್ರವಾರ ದಿನ ಅಲ್ಲಿಂದ ವಿವಿಧ ಬಡಾವಣೆಗಳಲ್ಲಿ ಸಾಗಿ ಚವಾಟೆಪ್ಪ ದೇವಸ್ಥಾನಕ್ಕೆ ತಲುಪಲಿದ್ದು 6ಸಾವಿರಕ್ಕೂ ಅಧಿಕ ಜನ 2ನೇ ದಿನದ ದೌಡನಲ್ಲಿ ಭಾಗವಹಿಸಿದ್ದರು.
ಇನ್ನೂ ಮುರ್ಕವಾಡ ಗ್ರಾಮದಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನವರಾತ್ರಿ ಉತ್ಸವ ಹಾಗೂ ದುರ್ಗಾದೌಡಕ್ಕೆ ಗ್ರಾಮಸ್ಥರು ಚಾಲನೆ ನೀಡಿದ್ದಾರೆ. ಹಾಗೆಯೇ ತಾಲೂಕಿನ ತೇರಗಾಂವ, ಯಡೋಗಾ ಗ್ರಾಮದಲ್ಲಿಯೂ ಗ್ರಾಮಸ್ಥರು ದುರ್ಗಾದೌಡನ್ನು ಶ್ರಧ್ದಾಭಕ್ತಿಯಿಂದ ಆಚರಿಸುತ್ತಿದ್ದಾರೆ.
Leave a Comment