ಹಳಿಯಾಳ:- ಹಳಿಯಾಳದ ಹುಲ್ಲಟ್ಟಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಕರ್ತವ್ಯದಲ್ಲಿದ್ದ ಕಾರ್ಮಿಕನೊರ್ವ ಸುಮಾರು 4 ಟನ್ಗೂ ಹೆಚ್ಚಿನ ಭಾರದ ಇಲೆಕ್ಟ್ರಿಕ್ ಪ್ಯಾನಲ್ ಬೊರ್ಡ ಮೈಮೆಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ಗುರುವಾರ ಸಾಯಂಕಾಲ ಸಂಭವಿಸಿದೆ.
ತಾಲೂಕಿನ ಮುತ್ತಲಮುರಿ ಗ್ರಾಮದ ರಾಘವೇಂದ್ರ ಪರಶುರಾಮ ಗೌಡಾ(26) ಅವಿವಾಹಿತ ಯುವಕನೇ ದುರ್ಘಟನೆಯಲ್ಲಿ ಮೃತಪಟ್ಟ ಯುವಕನಾಗಿದ್ದು ಗುತ್ತಿಗೆ ಆಧಾರದಲ್ಲಿ ಇತ ಕಂಪೆನಿಯಲ್ಲಿ ಇಲೆಕ್ಟ್ರಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ.
ಈ ಘಟನೆಯಲ್ಲಿ ದಾವಣಗೇರಿಯ ಎನ್ ರಮೇಶ ಗಂಭೀರವಾಗಿ ಗಾಯಗೊಂಡಿದ್ದಾನೆ ಅಲ್ಲದೇ ಇನ್ನೊರ್ವ ಮಂಜು ವಾಡ್ನಳ್ಳಿ ಎನ್ನುವಾತ ಕೂಡ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗುತ್ತಿದೆ.
ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ನೂರಾರು ಕಾರ್ಮಿಕರು ಹಾಗೂ ಮೃತನ ಸಂಬಂಧಿಕರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಜಮಾಯಿಸಿ ಕಂಪೆನಿಯ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿತ್ತಿದ್ದಾರೆ.
ಘಟನೆ ಹೇಗಾಯಿತು:- ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೃತ ಹಾಗೂ ಗಾಯಾಗಳುಗಳು ಎಂದಿನಂತೆ ಕೆಲಸದಲ್ಲಿ ತೊಡಗಿದ್ದರು. ಸುಮಾರು 4ಟನ್ಗೂ ಹೆಚ್ಚಿನ ತೂಕದ ಇಲೆಕ್ಟ್ರಾನಿಕ್ ಪ್ಯಾನಲ್ ಬೊರ್ಡನ್ನು “ಕ್ರೇನ್” ಮೂಲಕ ಎತ್ತಿ ಇಡದೆ ಈ ಕಾರ್ಮಿಕರನ್ನು ಬಳಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಆಸ್ಪತ್ರೆ ಎದುರು ಜಮಾಯಿಸಿದ್ದ ಕಾರ್ಮಿಕರು ದೂರುತ್ತಿದ್ದರು. ಅಲ್ಲದೇ ಕಾರ್ಮಿಕರ ಕೆಲಸ 6 ಗಂಟೆಗೆ ಮುಗಿದಿದ್ದರು ಹೆಚ್ಚಿನ ಸಮಯ ಅವರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದು ಈ ಘಟನೆ 7.30ಕ್ಕೆ ಸಂಭವಿಸಿದ್ದು ಇದಷ್ಟೆ ಪುಷ್ಟಿ ನೀಡಿದಂತಾಗಿದೆ.
ಸ್ಥಳೀಯ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿದ ಕಾರ್ಮಿಕರು ಗುತ್ತಿಗೆದಾರರಾದ ಶ್ರೀಕಾಂತ ಗಣಾಚಾರಿ, ಸಂದಿಪ ಮಿಶ್ಯಾಳಿ, ಭುವನರಾಜ್ ಎಂಬುವವರು ಕಾರ್ಮಿಕರ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಮಾಧ್ಯಮಗಳ ಎದುರು ತಮ್ಮ ಅಸಹಾಯಕತೆ ತೊಡಿಕೊಂಡರು.
ಸ್ಥಳಕ್ಕೆ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದು ಮಾಹಿತಿ ಸಂಗ್ರಹಿಸಿದ್ದಾರೆ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.
Leave a Comment