ಹಳಿಯಾಳ:- ಕುಟುಂಬದೊಡನೆ ಬಟ್ಟೆ ತೊಳೆಯಲು ತೆರಳಿದ ಇಡಿ ಕುಟುಂಬವೇ ನೀರಿನಲ್ಲಿ ಮುಳುಗಿ ಸಾವಿಗಿಡಾಗಿರುವ ಹೃದಯವಿದ್ರಾವಕ ದುರ್ಘಟನೆ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಅಂಬಿಕಾನಗರ ಪಂಚಾಯತ ವ್ಯಾಪ್ತಿಯ ಬೊಮ್ಮನಳ್ಳಿ ಗ್ರಾಮದ ಬಳಿಯ ಬೊಮ್ಮನಳ್ಳಿ-ಕಾಳಿನದಿಯಲ್ಲಿ ನಡೆದಿದ್ದು ಅದೃಷ್ಠವಶಾತ್ ಒರ್ವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿರುವ ಪವಾಡವು ಇಲ್ಲಿ ನಡೆದಿದೆ.
ಧೂಳು ದೊಂಡು ಗಾವಡೆ(40), ಗಾಯತ್ರಿ ಧೂಳು ಗಾವಡೆ(9), ಕೃಷ್ಣಾ ಧೂಳು ಗಾವಡೆ(6) ಹಾಗೂ ಸತೀಶ ಬಿರು ಗಾವಡೆ(6) ನಾಲ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನೂ ಈ ಘಟನೆಯಲ್ಲಿ ಧೂಳುನ ಮಡದಿ ರಮಿಬಾಯಿ ಗಾವಡೆ ಮಾತ್ರ ಅದೃಷ್ಠವಶಾತ್ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದು ಇವಳನ್ನು ತಕ್ಷಣ ಹಳಿಯಾಳ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ರವಾನಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾಳೆಂದು ಹೇಳಲಾಗಿದೆ.
ಧೂಳು ತನ್ನ ಕುಟುಂಬದವರೊಡನೆ ತನ್ನ ತಮ್ಮ ಬಿರುನ ಮಗ ಸತೀಶ(6 ವರ್ಷ) ನನ್ನು ಕೂಡ ಕರೆದುಕೊಂಡು ಹೋಗಿದ್ದು ಇವರೊಡನೆ ಆ ಕಂದಮ್ಮ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ.
ಬೊಮ್ಮನಳ್ಳಿ ಗ್ರಾಮಸ್ಥರಿಗೆ ಸೋಮವಾರ ಕರಾಳ ದಿನವಾಗಿ ಪರಿಣಮಿಸಿದ್ದು. ಸೋಮವಾರ ಸಾಯಂಕಾಲ ಘಟನೆ ನಡೆದಿದ್ದು ತಕ್ಷಣ ಗ್ರಾಮಸ್ಥರು ಹಾಗೂ ಪಕ್ಕದ ಗ್ರಾಮಸ್ಥರು ಕೂಡ ಸ್ಥಳಕ್ಕೆ ದೌಡಾಯಿಸಿ ನೀರಿನಲ್ಲಿ ಮುಳುಗಿದವರ ಶೋಧ ಕಾರ್ಯ ಆರಂಭಿಸಿದ್ದಾರೆ.
ಕಾಳಿನದಿಯಿಂದ ನೀರು ಹರಿದು ಬಂದು ಬೊಮ್ಮನಳ್ಳಿ ಆಣೆಕಟ್ಟಿನಲ್ಲಿ ನೀರು ಸಂಗ್ರಹವಾಗುತ್ತದೆ ಇದು ಹಿನ್ನಿರು ಪ್ರದೇಶ ಕೂಡವಾಗಿದ್ದು ಅಪಾಯಕಾರಕ ಪ್ರದೇಶವಾಗಿದ್ದು ಈವರೆಗೆ ಇಲ್ಲಿ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಹಳಿಯಾಳ ಆಸ್ಪತ್ರೆಗೆ ಆಗಮಿಸಿದ್ದ ಸಂಬಂಧಿಕರು ಹಾಗೂ ಗ್ರಾಮಸ್ಥರು ಮಾಧ್ಯಮದವರಿಗೆ ತಿಳಿಸಿದರು.
ಗ್ರಾಮಸ್ಥರ ಹೇಳಿಕೆಯ ಪ್ರಕಾರ ಮೃತ ಧೂಳು ಕುಟುಂಬದವರು ಬಟ್ಟೆ ತೊಳೆಯಲು ತೆರಳಿದ್ದಾಗ ರಮಿಬಾಯಿ ಬಟ್ಟೆ ತೊಳೆಯುತ್ತಿರುವಾಗ ಮಕ್ಕಳಾದ ಗಾಯತ್ರಿ, ಕೃಷ್ಣಾ, ಸತೀಶ ನೀರಿನಲ್ಲಿ ಆಟವಾಡುತ್ತಿದ್ದಾಗ ಒಮ್ಮೆಲೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ತಾಯಿ ರಮಿಬಾಯಿ ನೀರಿಗೆ ಧುಮುಕಿದ್ದಾಳೆ ಇದನ್ನು ಕಂಡ ಅಲ್ಲೆ ಸನಿಹದಲ್ಲಿದ್ದ ಧೂಳು ಕೂಡ ಕೀರಾಚಾಡುತ್ತಾ ನೀರಿಗೆ ಇಳಿದಿದ್ದಾನೆ ಇದನ್ನು ಗಮನಿಸಿದ ಅಲ್ಲಿದ್ದ ಕೆಲವರು ಬಂದು ನೋಡಿ ತಕ್ಷಣ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಆದರೇ ಅದಾಗಲೇ ಐವರು ನೀರಿನಲ್ಲಿ ಮುಳುಗಿದ್ದಾರೆನ್ನಲಾಗಿದೆ.
ಅದೇಗೋ ಅದೃಷ್ಠವಶಾತ್ ರಕ್ಷಣೆಗೆ ನೀರಿಗೆ ಧುಮುಕಿದವರ ಕೈಗೆ ರಮಿಬಾಯಿ ಮಾತ್ರ ಸಿಕ್ಕಿದ್ದು ಅವಳೊಬ್ಬಳೆ ಬದುಕುಳಿದಿದ್ದಾಳೆ.
ವಿಷಯ ತಿಳಿದ ತಕ್ಷಣ ಡಿವೈಎಸ್ಪಿ ಮೋಹನಪ್ರಸಾದ, ಸಿಪಿಐ ಲೋಕಾಪುರ ಸೇರಿದಂತೆ ಪೋಲಿಸ್ ಅಧಿಕಾರಿಗಳು, ಅರಣ್ಯ ಇಲಾಖೆಯವರು, ಬೊಮ್ಮನಳ್ಳಿ ಆಣೆಕಟ್ಟಿನ ಸಿಬ್ಬಂದಿಗಳು, ಈಜುಗಾರರು, ಗ್ರಾಮಸ್ಥರೆಲ್ಲರೂ ಸೇರಿ ಮುಳುಗಿದವರ ಶೋಧ ಕಾರ್ಯ ಆರಂಭಿಸಿದ್ದಾರೆ. ರಾತ್ರಿ 8 ಗಂಟೆ ಆಸುಪಾಸಿನಲ್ಲಿ ಕೃಷ್ಣಾ ಗಾವಡೆ ಹಾಗೂ ಗಾಯತ್ರಿ ಗಾವಡೆ ಇಬ್ಬರ ಶವ ರಾತ್ರಿ ದೊರಕಿದ್ದು ಇನ್ನುಳಿದ ಇಬ್ಬರಿಗಾಗಿ ನೀರಿನಲ್ಲಿ ಶೋಧ ಕಾರ್ಯ ಮುಂದುವರೆದಿದೆ.
ಇನ್ನೂ ಘಟನೆಯ ಬಗ್ಗೆ ತಿಳಿದ ತಾಲೂಕ ಪಂಚಾಯತ ಹಿರಿಯ ಸದಸ್ಯ ದೇಮಾಣ ಶೀರೋಜಿ ಹಳಿಯಾಳ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಸಹಾಯಕರಿಗೆ ದೂರವಾಣ ಮೂಲಕ ಕರೆ ಮಾಡಿ ನಡೆದ ವಿಷಯ ತಿಳಿಸಿ ತಕ್ಷಣ ಪರಿಹಾರ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Leave a Comment