ಹಳಿಯಾಳ:- ಜೀವನದಲ್ಲಿ ಸರಳತೆಯನ್ನು ಹೊಂದುವುದರಿಂದ ಉತ್ತಮ ಆಡಳಿತಗಾರನಾಗಬಹುದು ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಸರಳತೆಯನ್ನು ರೂಢಿಸಿಕೊಳ್ಳುಬೇಕೆಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕರಿಸಿದ್ದಪ್ಪನವರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳದ ಆಶ್ರಯದಲ್ಲಿ ಸಿವಿಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ ಯೋಜನಾ ಕಾರ್ಯದ ನಿರ್ವಹಣೆಯ ಪಾತ್ರ ಎಂಬ ವಿಷಯದ ಮೇಲೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾದ 2 ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉಧ್ಘಾಟಿಸಿ ಅವರು ಮಾತನಾಡಿದರು. ಸಿವಿಲ್ ಇಂಜನಿಯರಿಂಗ್ ವಿದ್ಯಾರ್ಥಿಗಳು ಹೊಸ ನಿರ್ಮಾಣ ವಿಧಾನಗಳನ್ನು ಕಲಿತುಕೊಳ್ಳುವುದರ ಮೂಲಕ ಉತ್ತಮ ಭವಿಷ್ಯವನ್ನು ಹೊಂದಬಹುದು ಎಂದರು.
ಹುಬ್ಬಳ್ಳಿ ಸ್ಮಾರ್ಟ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಎಮ್ ನಾರಾಯಣ ಮಾತನಾಡಿ ಸಿವಿಲ್ ಇಂಜನಿಯರಿಂಗ್ ಯೋಜನಾ ಕಾರ್ಯದ ಮಹತ್ವವನ್ನು ವಿವರಿಸಿದರು. ಯಾವುದೇ ಯೋಜನೆಗೆ ಮಾನವ ಸಂಪನ್ಮೂಲ, ಕಚ್ಚಾ ವಸ್ತುಗಳು, ಯಂತ್ರಗಳು ಮತ್ತು ಬಂಡವಾಳವನ್ನು ಸರಿಯಾದ ರೀತಿಯಲ್ಲಿ ಆಯೋಜಿಸಿ ಬಳಸಿಕೊಂಡರೆ ಮಾತ್ರ ಯೋಜನಾ ಕಾರ್ಯವು ಯಶಸ್ಸನ್ನು ಕಾಣಲು ಸಾಧ್ಯವಿದ್ದು ಆ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಬಲ್ಲದು ಎಂದು ಅಭಿಪ್ರಾಯಿಸಿದರು.
ಧಾರವಾಡದ ಇನ್‍ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ಸಂಸ್ಥೆಯ ಕಾರ್ಯದರ್ಶಿ ವಿಜಯ ಎಚ್ ತೋಟಿಗೇರ್, ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವಿ.ಎಮ್ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿ ಇಂಥಹ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಕೌಶಲ್ಯಗಳನ್ನು ವೃದ್ಧಿಸಿಕೊಂಡು ಉತ್ತಮ ಭವಿಷ್ಯವನ್ನು ಹೊಂದಬಹುದೆಂದರು.
ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಸಿವಿಲ್ ಇಂಜನಿಯರಿಂಗ್ ಯೋಜನಾ ಕಾರ್ಯದ ಕುರಿತಾಗಿ ಹಲವಾರು ಉಪನ್ಯಾಸ ಕಾರ್ಯಕ್ರಗಳು ಮತ್ತು ಪ್ರೈಮ್‍ವೇರಾ ಹಾಗೂ ಎಮ್.ಎಸ್.ಪಿ ಸಾಫ್ಟವೇರ್‍ಗಳ ಪ್ರಾಯೋಗಿಕ ತರಬೇತಿಗಳು ಪ್ರಾರಂಭಗೊಂಡವು.
ಧಾರವಾಡದ ಅಮ್ಮಿನಭಾವಿ ಮತ್ತು ಹೆಗಡೆ ಕನ್‍ಷ್ಟ್ರಕ್ಟನ್ ಲಿಮಿಟೆಡ್‍ನ ನಿರ್ದೇಶಕ ಸಂಜಯ ಅಮ್ಮಿನಭಾವಿ ಮತ್ತು ಬೆಳಗಾವಿಯ ಜಿ.ಎಸ್.ಕೆ ಟ್ರೈನಿಂಗ್‍ನ ಡಿಸೈನ್ ಇಂಜನಿಯರ್ ಮಂಜುನಾಥ ಐನಾಪುರೆ ತರಬೇತಿಯನ್ನು ನೀಡಿದರು. 2 ದಿನಗಳ ಕಾಲ ನಡೆಯಲಿರುವ ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯದ ವಿವಿಧ ಇಂಜನಿಯರಿಗ್ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಬೋಧಕ ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ ಎಂದು ಪ್ರಾಂಶುಪಾಲ ಡಾ|| ವಿ.ವಿ ಕಟ್ಟಿ ಮಾಹಿತಿ ನೀಡಿದರು.
Leave a Comment