ಹಳಿಯಾಳ:- ಲೋಕಸಭೆ ಚುನಾವಣೆಯ ಕಾವು ಹಾಗೂ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೇ ಇತ್ತ ಟಿ.20 ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಗಳ ಬೆಟ್ಟಿಂಗ್ ದಂಧೆ ಕೂಡ ಹಳಿಯಾಳ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ.
ಮಾರ್ಚ 23 ಶನಿವಾರದಿಂದ ಆರಂಭವಾಗಿರುವ 12ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಮೇ.12 ಭಾನುವಾರ ಮುಕ್ತಾಯವಾಗಲಿವೆ. ಈ ಬಾರಿ ಐಪಿಎಲ್ ಪಂದ್ಯಗಳ ಮೇಲೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಯುತ್ತಿದೆ. ಸಾರ್ವಜನಿಕ ಸ್ಥಳ, ಅಂಗಡಿ-ಸಂಕೀರ್ಣಗಳು, ಮಾರುಕಟ್ಟೆ, ಕೆರೆ-ಕಟ್ಟೆಗಳು, ಉದ್ಯಾನವನಗಳು, ಆಟದ ಮೈದಾನಗಳು ಸೇರಿದಂತೆ ನಾನಾ ಕಡೆ ತೆರಳಿ ಬೆಟ್ಟಿಂಗ್ ಆಡೋ ಗಿಳಿನವರು ಮೊಬೈಲ್ ಮುಖಾಂತರ ಬೆಟ್ಟಿಂಗ್ ಆಡುತ್ತಿದ್ದಾರೆ.
ಇನ್ನೂ ಬೆಟ್ಟಿಂಗ್ ಯಾರ್ಯಾರು ಆಡುತ್ತಾರೆ ಎಂದು ನೀವು ಕೇಳಿದರೇ ನೀಜಕ್ಕೂ ಆತಂಕಕಾರಿ ಅಂಶಗಳು ಸಾರ್ವಜನೀಕ ವಲಯದಲ್ಲಿ ಕೇಳಿ ಬರುತ್ತಿವೆ. ಹೈಸ್ಕೂಲ್ ಮಕ್ಕಳಿಂದ ಹಿಡಿದು ವೃದ್ದರ ವರೆಗೂ ಕ್ರೀಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ವಯಸ್ಸಿನ ಮೀತಿ ಇರದ ಕೇವಲ ಕೈಯಲ್ಲಿ ಅಂಡ್ರಾಯ್ಡ್ ಮೊಬೈಲ್ ಇದ್ದರೇ ಸಾಕು ಬೆಟ್ಟಿಂಗ್ ಆಡಲು ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಬೇಕಾದ ಪೋಲಿಸ್ ಇಲಾಖೆ ಅಧಿಕಾರಿಗಳು ಚುನಾವಣೆ ಕೆಲಸದಲ್ಲಿ ನಿರತರಾಗಿರುವುದರಿಂದ ಕೆಲವರಿಗೆ ಇದು ವರವಾಗಿ ಪರಿಣಮಿಸಿದೆ. ಆದರೂ ಹದ್ದಿನ ಕಣ್ಣಿಟ್ಟಿರುವ ಹಳಿಯಾಳ ಪೋಲಿಸರು ಸಂಶಯವಿರುವ ಕೆಲವರನ್ನು ಠಾಣೆಗೆ ಕರೆದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ ಎನ್ನಲಾಗಿದೆ.
ಅಲ್ಲದೇ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕ್ರಿಕೆಟ್ ಬೆಟ್ಟಿಂಗ್ ದಂಧೆ ಈಗ ಗ್ರಾಮೀಣ ಪ್ರದೇಶಕ್ಕೂ ವಕ್ಕರಿಸಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅಲ್ಲದೇ ಇದರಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಹವ್ಯಾಸ ಬೆಳೆಸಿಕೊಂಡಿರುವುದು ಆಘಾತಕಾರಿ ವಿಷಯವಾಗಿದೆ. ಕೆಲವರು ಕೆಲಸಬಿಟ್ಟು ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿರುವುದು ಪಾಲಕರಲ್ಲಿ ಆತಂಕ ಮೂಡಿಸಿದೆ. ಪ್ರತಿಯೊಬ್ಬರಲ್ಲೂ ಈಗ ಅಂಡ್ರಾಯ್ಡ್ ಸ್ಮಾರ್ಟ ಮೊಬೈಲ್ಗಳಿದ್ದು ಮೊಬೈಲ್ನಲ್ಲೇ ಪಂದ್ಯ ವೀಕ್ಷಣೆಯ ಜತೆಗೆ ಬೆಟ್ಟಿಂಗ್ ಆಡುತ್ತಿರುವುದು ಹೆಚ್ಚಾಗಿದೆ.
ಸಂಜೆ 4ರಿಂದ ಒಂದು ಪಂದ್ಯ ಹಾಗೂ ರಾತ್ರಿ 8ರಿಂದ 11 ರ ವರೆಗೆ ಇನ್ನೊಂದು ಪಂದ್ಯ ಹೀಗೆ ದಿನಕ್ಕೆ 2 ಕೆಲವೊಮ್ಮೆ ದಿನಕ್ಕೆ ಒಂದು ಪಂದ್ಯ ನಡೆಯುತ್ತದೆ. ಐಪಿಎಲ್ ಬೆಟ್ಟಿಂಗ್ ಆಡುವವರಿಗೆ ಹಣ ನೀಡಲು ಮೀಟರ್ ದಂಧೆಕೊರರು ಹಣ ತೊಡಗಿಸಿದ್ದಾರೆಂಬ ಮಾಹಿತಿಗಳು ಸಾರ್ವಜನೀಕ ವಲಯದಲ್ಲಿ ಚರ್ಚೆಯಾಗುತ್ತಿವೆ.
ಕನಿಷ್ಠ 500 ರೂ. ನಿಂದ ಹಿಡಿದು ಲಕ್ಷಾಂತರ ರೂ. ವರೆಗೆ ಬೆಟ್ಟಿಂಗ್ ಲೆಕ್ಕಾಚಾರಗಳು ನಡೆಯುತ್ತವೆ. ಓವರ್ ಟು- ಓವರ್ ರನ್ ಎಷ್ಟು ಗಳಿಸುತ್ತಾರೆ (ಫ್ಯಾನ್ಸಿ-ಲಾಂಬಿ), ಓವರ್ನಲ್ಲಿ ವಿಕೆಟ್ ಹೊಗುತ್ತಾ ? ಬ್ಯಾಟಿಂಗ್ ಮಾಡುತ್ತಿರುವ ಟೀಮ್ 20 ಓವರ್ಗಳಲ್ಲಿ ಎಷ್ಟು ರನ್ ಹೊಡೆಯುತ್ತೆ?, ಓವರ್ನಲ್ಲಿ ವಿಕೆಟ್ ಎಷ್ಟು ಹೊಗುತ್ತೆ?, ಯಾವ ಟೀಮ್ ಗೆಲ್ಲುತ್ತೆ ಎನ್ನುವ ಹಲವು ಲೆಕ್ಕಾಚಾರಗಳನ್ನಿಟ್ಟುಕೊಂಡು ಬೆಟ್ಟಿಂಗ್ ಹಣ ನಿಗದಿ ಮಾಡಲಾಗುತ್ತೆ ಎಂದು ಬೆಟ್ಟಿಂಗ್ ಆಡಿ ಲಕ್ಷಾಂತರ ರೂ. ಹಣ ಕಳೆದುಕೊಂಡ ಹೆಸರು ಹೆಳಲಿಚ್ಚಿಸಿದ ಕೆಲವರು ಮಾಹಿತಿ ನೀಡಿದ್ದಾರೆ.
ಅಲ್ಲದೇ ಕೆಲವೊಮ್ಮೆ ಒಂದು ಟೀಮ್ಗೆ ಕಡಿಮೆ ಹಣವಿದ್ದರೇ ಇನ್ನೊಂದು ಟೀಮ್ಗೆ ಎರಡು ಪಟ್ಟು ಹಣವಂತೆ, ಅಂದರೇ ಸ್ಟ್ರಾಂಗ್ ಟೀಮ್ಗೆ ಹೆಚ್ಚು ದುರ್ಬಲ ಟೀಮ್ಗೆ ಕಡಿಮೆ ಹಣ ನಿಗದಿಯಾಗಿರುತ್ತಂತೆ ಇದಲ್ಲದೇ ಒಂದು ಟೀಮ್ ಬ್ಯಾಟಿಂಗ್ ಮಾಡಿದ ನಂತರ ಮತ್ತೇ ಬೆಲೆಯಲ್ಲಿ ಹೆಚ್ಚು ಕಡಿಮೆ ದರ ನಿಗದಿಯಾಗಿ ಬೆಟ್ಟಿಂಗ್ ಕುದುರಿಸಲಾಗುತ್ತೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊಬೈಲ್ನಲ್ಲಿ ಕ್ರೀಕೆಟ್ ಲೈನ್ಗುರು, ಕ್ರಿಕ್ಲೈನ್-ಲೈವ್, ಕ್ರಿಕ್ಬಜ್, ಕ್ರಿಕೆಟ್ ಫಾಸ್ಟ್ ಲೈವ್, ಲೈವಲೈನ್, ಕ್ರೀಕೆಟ್ ಮಾಝಾ, ಫಾಸ್ಟೆಸ್ಟ್ ಕ್ರಿಕೆಟ್ ಲೈವ್ ಸೇರಿದಂತೆ ಹತ್ತಾರು ಕ್ರಿಕೆಟ್ ಪಂದ್ಯಾವಳಿಯ ಬೆಟ್ಟಿಂಗ್ ದರಗಳನ್ನು ತಿಳಿಸುವ ಅಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ಗಳನ್ನು ಯುವಕರು ತಮ್ಮ ಮೊಬೈಲ್ನಲ್ಲಿ ಡೌನಲೋಡ್ ಮಾಡಿಕೊಂಡು ಬೆಟ್ಟಿಂಗ್ ಗಿಳಿಗೆ ತೊಡಗಿರುವುದು ಹಣ ಕಳೆದುಕೊಂಡು ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿರುವ ಘಟನೆಗಳು ಅಲ್ಲಲ್ಲಿ ಕೇಳಿ ಬರುತ್ತಿವೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಸ್ಪೀಟ್, ಜೂಜಾಟ, ಮಟ್ಕಾ ಸೇರಿದಂತೆ ಇನ್ನಿತರೇ ಅಕ್ರಮ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಹಳಿಯಾಳ ಪೋಲಿಸರು ದೂರುಗಳು ಬಂದಲ್ಲಿ ತಕ್ಷಣ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಆದರೇ ಐಪಿಎಲ್ ಪಂದ್ಯಗಳ ಮೇಲಿನ ಜೂಜಾಟಕ್ಕೆ ಕಡಿವಾಣ ಇಲ್ಲದಂತಾಗಿದೆ ಹಾಗಾಗಿ ದಿನದಿಂದ ದಿನಕ್ಕೆ ಬೆಟ್ಟಿಂಗ್ ಪ್ರಮಾಣ ಹೆಚ್ಚುತ್ತಿದೆ ಎನ್ನಲಾಗುತ್ತಿದೆ. ಅಲ್ಲದೇ ಬೆಳಗಾವಿ, ಖಾನಾಪುರ, ಹುಬ್ಬಳ್ಳಿಯಿಂದ ಹಳಿಯಾಳದ ಕ್ರಿಕೆಟ್ ಬೆಟ್ಟಿಂಗ್ ನಿಯಂತ್ರಣವನ್ನು ಮಾಡಲಾಗುತ್ತೆ ಇದರ ಬುಕ್ಕಿಗಳು ಅಲ್ಲಿದ್ದು ಆಡುವವರು ಹಾಗೂ ಇದರಲ್ಲಿ ಕಮಿಷನ್ ಹೊಡೆಯುವವರು ಇಲ್ಲಿದ್ದಾರೆ ಎಂಬ ಅಂಶಗಳು ಸಾರ್ವಜನೀಕ ವಲಯದಲ್ಲಿ ಬಿಸಿಬಿಸಿ ಚರ್ಚೆಯಾಗುತ್ತಿವೆ.
ಇನ್ನೂ ಮೊನ್ನೆಯಷ್ಟೇ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸಂಬಂಧಪಟ್ಟಂತೆ ಪಟ್ಟಣದ ನಿವಾಸಿ ಮಹಮ್ಮದಆರಿಫ್ ಎನ್ನುವ ಯುವಕನನ್ನು ಹಳಿಯಾಳ ಪೋಲಿಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು ಮತ್ತೇ ಮಾಹಿತಿಗಳು ಸಿಕ್ಕಲ್ಲಿ ಯಾರೆ ಆಗಿರಲಿ ಬಂಧಿಸಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಹಳಿಯಾಳ ಪಿಎಸ್ಐ ಆನಂದಮೂರ್ತಿ ಎಚ್ಚರಿಕೆ ನೀಡಿದ್ದಾರೆ.
Leave a Comment