ಬೆಂಗಳೂರು,
ಮೇ 23, 2019 : 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವುದಕ್ಕೆ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ ದೇಶಪಾಂಡೆರವರು ಕೇಂದ್ರದಲ್ಲಿ ಬರುವ ನೂತನ ಸರ್ಕಾರ ಕೈಗೊಳ್ಳಬೇಕಾದ ಕೆಲವು ಆದ್ಯತಾ ಕೆಲಸಗಳ ಬಗ್ಗೆ ಅವರ ಗಮನ ಸೆಳೆದಿದ್ದಾರೆ.
ಈ ಬಗ್ಗೆ ಮೋದಿಯವರಿಗೆ ಪತ್ರ ಬರೆದ ಸಚಿವರು “ಕೈಗಾರಿಕಾ ಉತ್ಪಾದನೆ ದೇಶದ ಜಿ.ಡಿ.ಪಿ.ಯಲ್ಲಿ ಶೇ.30%ರಷ್ಟು ಪಾಲು ಹೊಂದಿದ್ದು, ಇತ್ತೀಚಿನ ವರ್ಷಗಳಲ್ಲಿ ತಯಾರಿಕಾ ವಲಯದಲ್ಲಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಇದರ ಫಲವಾಗಿ ದೇಶದಲ್ಲಿ ಯುವ ಜನರಿಗೆ ಉದ್ಯೋಗವಿಲ್ಲದಂತಾಗಿ ದೇಶದ ಆರ್ಥಿಕ ಅಭಿವೃದ್ಧಿಗೂ ಮಾರಕವಾಗಿ ಪರಿಣಮಿಸಿ ಜಿಡಿಪಿ ನಿರೀಕ್ಷಿತ ಬೆಳವಣಿಗೆ ತಲುಪಿರುವುದಿಲ್ಲ. ದೇಶದ ನಿರುದ್ಯೋಗ ದರ ಶೇ.6.1% ಇದ್ದು, ಇದು ಕಳೆದ 4 ದಶಕಗಳಲ್ಲೇ ಅತ್ಯಧಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತಯಾರಿಕಾ ವಲಯದ ಜವಳಿ, ಆಟಿಕೆಗಳು, ಸೇವಾ ವಲಯ, ಇತ್ಯಾದಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಆದ್ಯತೆ ನೀಡುವುದರ ಜೊತೆಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಲವಾರು ನೂತನ ಯೋಜನೆಗಳನ್ನು ಜಾರಿ ಮಾಡುವುದು ಅತ್ಯಾವಶ್ಯಕವಾಗಿರುತ್ತದೆ ಎಂಬುದನ್ನು” ವಿವರಿಸಿದ್ದಾರೆ.
ವಿಶ್ವದಲ್ಲೇ ಭಾರತವು ಅತ್ಯಧಿಕ ಯುವಕರನ್ನು ಹೊಂದಿರುವ ದೇಶವಾಗಿದ್ದು, ಜಾಗತೀಕರಣ ಹಾಗೂ ಅಸ್ಥಿರ ತಾಂತ್ರಿಕತೆಯಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಗೆ ಕೌಶಲ್ಯವು ಅತಿ ಅಗತ್ಯ. ಯುವಕರಲ್ಲಿ ಕೌಶಲ್ಯವನ್ನು ಹೆಚ್ಚಿಸುವುದರಿಂದ ಅವರಲ್ಲಿ ಉದ್ಯೋಗ ಸಾಮಥ್ರ್ಯ, ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಜೊತೆಗೆ ಸಾಮಾಜಿಕ ಸ್ವೀಕಾರವನ್ನೂ ಸಾಧ್ಯವಾಗಿಸುತ್ತದೆ.
ಮಾನವ ಶ್ರಮವನ್ನು ಪ್ರತ್ಯಾಯೋಜಿಸುವ ತಾಂತ್ರಿಕತೆಯು ನಿರುದ್ಯೋಗ ಸಮಸ್ಯೆಗೆ ಮೂಲ ಕಾರಣವಾದರೂ ಹಳೆಯ ಶ್ರಮಿಕ ಕೌಶಲ್ಯ ಬಲಕ್ಕೆ ಆಧುನಿಕ ಕೌಶಲ್ಯವನ್ನು ಅಳವಡಿಸುವುದು ಇಂದಿನ ತುರ್ತು ಅಗತ್ಯ. ಅಲ್ಲದೇ, ಹೊಸ ತಾಂತ್ರಿಕ ಕೌಶಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸುವುದರ ಅವಶ್ಯಕತೆ ಇದೆ.
ಕೃಷಿ ಕ್ಷೇತ್ರ ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಜಿ.ಡಿ.ಪಿ.ಯಲ್ಲಿ ಶೇ.18%ರಷ್ಟು ಪಾಲು ಹೊಂದಿದೆ. ಅಲ್ಲದೇ, ದೇಶದ ಶ್ರಮಿಕ ಕ್ಷೇತ್ರಕ್ಕೆ ಶೇ.44% ಔದ್ಯಮಿಕ ಕೊಡುಗೆ ನೀಡಿದೆ. ಆದುದರಿಂದ ಕೃಷಿ ಕ್ಷೇತ್ರವನ್ನು ನವೀಕರಿಸಿದಲ್ಲಿ, ಸಮಗ್ರ ಅಭಿವೃದ್ಧಿ ಕಾಣಬಹುದಾಗಿದೆ. ಆದರೆ ಇಲ್ಲಿ ಸಮಸ್ಯೆಗಳು ಅನೇಕ. ಅಂತರ್ಜಲ ಹಾಗೂ ಮಣ್ಣಿನ ಫಲವತ್ತತೆ ಕ್ಷೀಣಿಸುವಿಕೆ, ಭೂ ಸವಕಳಿ, ಜಲ ನಿರ್ವಹಣೆ, ಬೆಳೆಗಳ ವಲಯವಾರು ಅಸಮತೋಲನ, ಬೆಲೆಯ ಏರಿಳಿತ ಮುಂತಾದ ಸಮಸ್ಯೆಗಳು ಅಧಿಕವಾಗಿದ್ದು ಕೃಷಿ ಕ್ಷೇತ್ರಕ್ಕೆ ಮಾರಕವಾಗಿದೆ.
.
ಪ್ರತಿ ವರ್ಷವೂ ರೈತ ಸಮುದಾಯ ಕೃಷಿ ಕ್ಷೇತ್ರ ಉತ್ತಮಗೊಳ್ಳುವುದೆಂದು ಸರ್ಕಾರಗಳತ್ತ ಮುಖ ಮಾಡಿ ಭರವಸೆಯಿಂದ ಕಾಯುತ್ತಿದೆ. ಆದರೆ ಸರ್ಕಾರದ ಯೋಜನೆಗಳು ಜಾರಿಯಾಗುವಲ್ಲಿ ಸೋಲುತ್ತಿವೆ. ಇದರ ಬಗ್ಗೆ ಮರು-ಪರಿಶೀಲನೆ ಅಗತ್ಯವಾಗಿ ಆಗಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವಕರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಭಾರತದಲ್ಲಿ ಕೃಷಿಯನ್ನು ಒಂದು ಆಕರ್ಷಕ, ಲಾಭದಾಯಕ ಉದ್ಯೋಗವನ್ನಾಗಿಸುವಲ್ಲಿ ಯೋಚಿಸಬೇಕಿದೆ. ಇದರಿಂದ ನಗರ ಪ್ರದೇಶಗಳ ಮೇಲಿನ ಒತ್ತಡ, ಸಂಚಾರ ದಟ್ಟಣೆ, ಪರಿಸರ ಮಾಲಿನ್ಯ, ಇವುಗಳನ್ನು ತಡೆಗಟ್ಟುವುದರ ಜೊತೆಗೆ ಪ್ರಾದೇಶಿಕ ಸಮತೋಲನವನ್ನು ಸಾಧಿಸಿದಂತಾಗುತ್ತದೆ.
ಜಿ.ಎಸ್.ಟಿ.ಯನ್ನು ಮರು-ಪರಿಶೀಲಿಸುವ ಅಗತ್ಯವನ್ನು ಒತ್ತಿ ಹೇಳಿದ ದೇಶಪಾಂಡೆರವರು ಈಗಿರುವ ಸ್ಲ್ಯಾಬ್‍ಗಳನ್ನು ಪರಿಷ್ಕರಿಸಿ ಸುಲಭ ಸ್ಲ್ಯಾಭ್‍ಗಳನ್ನು ಪರಿಚಯಿಸುವ ಮೂಲಕ ಸುಗಮ ರೀತಿಯಲ್ಲಿ ಬೃಹತ್ ಮೊತ್ತದ ತೆರಿಗೆಯನ್ನು ಸಂಗ್ರಹಿಸಬಹುದಾಗಿದೆ ಎಂದು ಸಲಹೆ ನೀಡಿದ್ದಾರೆ.
ಪ್ರಾಕೃತಿಕ ವಿಕೋಪಗಳಾದ ಬರ, ಪ್ರವಾಹ, ಭೂಕಂಪ ಮುಂತಾದ ಅನಾಹುತಗಳು ಆಗಿಂದಾಗ್ಗೆ ದೇಶದಲ್ಲಿ ಸಂಭವಿಸುತ್ತಿದ್ದು ಎಲ್ಲಾ ರಾಜ್ಯಗಳು ಬರ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳುತ್ತಿವೆಯೇ ಹೊರತು ಶಾಶ್ವತ ಕ್ರಮಗಳ ಬಗ್ಗೆ ಚಿಂತಿಸುತ್ತಿಲ್ಲ. ಈ ನಿಟ್ಟಿನಲ್ಲಿ ನದಿ ಜೋಡಣೆ, ನದಿ ಹರಿವಿನ ಬದಲಾವಣೆ, ಜಲ ಮೂಲಗಳ ರಕ್ಷಣೆ, ಅಂತರ್ ಸಂಪರ್ಕ, ಜಲ ಸಂರಕ್ಷಣೆ ಹಾಗೂ ಅರಣ್ಯ ಸಂರಕ್ಷಣೆಯಂತಹ ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ದೂರದೃಷ್ಠಿಯಿಂದ ಆಲೋಚಿಸಿ ಆದ್ಯತೆಯ ಮೇಲೆ ಕ್ರಮ ವಹಿಸುವ ಅಗತ್ಯವಿದೆ ಎಂಬುದನ್ನು ಸಹ ಸಚಿವ ದೇಶಪಾಂಡೆರವರು ತಮ್ಮ ಪತ್ರದಲ್ಲಿ ವಿಷದವಾಗಿ ನಿರೂಪಿಸಿದ್ದಾರೆ.
**********
Leave a Comment