ಹಳಿಯಾಳ :- ತಾಲೂಕಿನಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಸದ್ಯಕ್ಕೆ ಇಲ್ಲವಾಗಿದೇ ಆದರೂ ಮುನ್ನಚ್ಚರಿಕೆಯ ಕ್ರಮವಾಗಿ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಮೇವು ಸಂಗ್ರಹಿಸಲಾಗಿದೆ ಅಲ್ಲದೇ ತಾಲೂಕಿನ ಭಾಗವತಿ ಗ್ರಾಮದಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ ಎಂದು ತಹಶೀಲ್ದಾರ್ ಶಿವಾನಂದ ಉಳ್ಳೆಗಡ್ಡಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಉಳ್ಳೇಗಡ್ಡಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ತಡೆಯಲು ಸಚಿವ ಆರ್.ವಿ.ದೇಶಪಾಂಡೆ ಅವರ ಆದೇಶದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿರುವ ಅವರು ಪ್ರತಿ ಜಾನುವಾರಿಗೆ ಪ್ರತಿ ದಿನಕ್ಕೆ 5 ಕೆಜಿಯಷ್ಟು ಮೇವನ್ನು ಪ್ರತಿ ಕೆಜಿಗೆ ಕೇವಲ 2 ರೂ ದರದಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾಗವತಿ ಗ್ರಾಮದಲ್ಲಿ ಗೌಳಿ ಸಮುದಾಯದವರು ಹಾಗೂ ಜಮೀನು ರಹಿತ ಜಾನುವಾರು ಮಾಲಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಅವರಿಗೆ ಅನುಕೂಲವಾಗುವ ದೃಷ್ಠಿಯಿಂದ ಮೇವು ಬ್ಯಾಂಕ್ ತೆರೆಯಲಾಗಿದೆ. ಜಾನುವಾರುಗಳನ್ನು ಸಾಕಿದ ಹಾಗೂ ಅವಶ್ಯಕತೆ ಉಳ್ಳ ಅರ್ಹರು ಮೇವನ್ನು ರಿಯಾಯತಿ ದರದಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹಳಿಯಾಳ ಪಶು ಸಂಗೋಪನಾ ಇಲಾಖೆಯಿಂದ ವರದಿಯನ್ನು ಪಡೆದಿದ್ದು ಬೇಸಿಗೆಯ ಸಮಯದಲ್ಲಿ ಮೇವು ಕೊರತೆಯಾಗದಂತೆ ತಡೆಯಲು ಈ ಕ್ರಮಗಳನ್ನು ಆರಂಭಿಸಲಾಗಿದೆ. ಸದ್ಯ ಕೇಲ ದನಗರ ಗೌಳಿ ಸಮುದಾಯದವರು ಮೇವು ಖರೀದಿಸಿದ್ದಾರೆ ಎಂದು ತಿಳಿಸಿದ ಅವರು ಪಶು ವೈದ್ಯ ಕೆ.ಎಮ್.ನಧಾಪ್ ಅವರ ತಂಡವು ಇದರಲ್ಲಿ ಭಾಗವಹಿಸಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದರು.
Leave a Comment