ಹಳಿಯಾಳ :- ಮಳೆಗಾಲದಲ್ಲೂ ಬಿರು ಬೆಸಿಗೆಯಿಂದ ಬಸವಳಿದಿದ್ದ ಹಳಿಯಾಳ ಜನತೆ ಕಳೆದ 2 ದಿನಗಳಿಂದ ಸುರಿಯುತ್ತಿರುವ ಮಳೆಗೆ ಕೊಂಚ ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ. ಮತ್ತೇ ಬರಗಾಲ ಅನುಭವಿಸಬೇಕೆಂಬ ಚಿಂತೆಯಲ್ಲಿದ್ದ ರೈತ ಸಮುದಾಯದಲ್ಲಿ ಮಂದಹಾಸ ಮೂಡಿದೆ.
ಜೂನ್ 1 ರಿಂದ ಪ್ರಾರಂಭವಾಗಬೇಕಿದ್ದ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತ ಸಮುದಾಯವನ್ನು ಮತ್ತೇ ಚಿಂತೆಗಿಡು ಮಾಡಿತ್ತು. ಅಲ್ಲದೇ ಸುಡು ಬಿಸಿಲಿನ ತಾಪಕ್ಕೆ ಹಳಿಯಾಳದ ಬಹುತೇಕ ಎಲ್ಲ ಕೆರೆ ಕಟ್ಟೆಗಳು ಹಾಗೂ ಹಳ್ಳ-ಕೊಳ್ಳಗಳು ನೀರು ಬರಡಾಗಿ ಪಾತಾಳ ಕಂಡಿದ್ದವು. ಜೂನ್ 28ವರೆಗೂ ಇದೇ ಸ್ಥಿತಿ ಮುಂದುವರೆದು ಮಳೆಗಾಲವನ್ನೇ ಜನರು ಮರೆಯುವಂತಹ ಸ್ಥಿತಿಯು ಬಂದೊದಗಿತ್ತು.
ಕೊನೆಗೂ ಮುನಿಸಿಕೊಂಡಿದ್ದ ವರುಣ ದೇವ ದಿ.29ರಿಂದ ನಿರಂತರವಾಗಿ ಸುರಿಯುತ್ತಿದ್ದು 30 ರಂದು ಬಿಟ್ಟು ಬಿಡದೆ ಮಳೆಯಾಗಿದ್ದರಿಂದ ಬತ್ತಿದ್ದ ಹಲವು ಕೆರೆಗಳು ತುಂಬಿದ್ದರೇ. ಇನ್ನೂ ಕೆಲವು ಕೆರೆಗಳಲ್ಲಿ ಶೇ.40 ರಷ್ಟು ನೀರು ಸಂಗ್ರಹವಾಗಿದೆ. ಎಲ್ಲೆಡೆ ಕೃಷಿ ಗದ್ದೆಗಳು ಮಳೆ ನೀರಿನಿಂದ ತುಂಬಿಕೊಂಡು ಕಂಗೊಳಿಸುತ್ತಿವೆ.
ನಿರಂತರ ಸುರಿಯುತ್ತಿರುವ ಮಳೆಗೆ ಹಲವು ಬಡಾವಣೆ ಸೇರಿದಂತೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು ಕೆಲವು ಕಡೆಗಳಲ್ಲಿ ಜನ ಜೀವನ ಅಸ್ತವ್ಯಸ್ಥವಾಗಿದೆ. ಪಟ್ಟಣದಲ್ಲಿ ಪುರಸಭೆ ಹಾಗೂ ಲೋಕೊಪಯೋಗಿ ಇಲಾಖೆಯವರ ಹಲವು ಪ್ರದೇಶಗಳಲ್ಲಿ ಮಾಡಿರುವ ಅವೈಜ್ಞಾನಿಕ ಕಾಮಗಾರಿಗಳಿಂದ ಚರಂಡಿಯ ನೀರು ಸರಾಗವಾಗಿ ಸಾಗಿ ಮುಂದೆ ಹೊಗದೆ ಬಡಾವಣೆಗಳಿಗೆ ನುಗ್ಗುತ್ತಿದೆ. ಅಲ್ಲದೇ ಗಟಾರನಲ್ಲಿಯ ತ್ಯಾಜ್ಯ ವಸ್ತುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಹರಡಿರುವ ದೃಶ್ಯ ಕಾಣ ಸಿಗುತ್ತಿವೆ.
Leave a Comment