
ಹಳಿಯಾಳ:- ಜಿಲ್ಲಾಧಿಕಾರಿಗಳ ಆದೇಶದಂತೆ ಹಳಿಯಾಳದಲ್ಲಿ ಅನಧಿಕೃತ ವೈದ್ಯಕೀಯ ವೃತ್ತಿ ಮಾಡುತ್ತಿದ್ದ 2 ಕ್ಲಿನಿಕ್ಗಳ ಮೇಲೆ ದಾಳಿ ನಡೆಸಿರುವ ತಾಲೂಕಾ ಆರೋಗ್ಯ ಅಧಿಕಾರಿಗಳು 2 ಕ್ಲಿನಿಕ್ಗಳಿಗೆ ಬೀಗಮುದ್ರೆ (ಲಾಕ್) ಹಾಕಿದ್ದಾರೆ.
ನಕಲಿ ವೈದ್ಯರು ಹಾಗೂ ಅನಧಿಕೃತ ವೈದ್ಯಕೀಯ ವೃತ್ತಿ ನಡೆಸುತ್ತಿದ್ದಾರೆಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅವರಿಗೆ ಬಂದ ವಾಟ್ಸ್ಪ್ ದೂರಿನಿಂದ ಎಚ್ಚೆತ್ತುಕೊಂಡ ಡಿಸಿ ಅವರು ಕ್ರಮ ಜರುಗಿಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಹಳಿಯಾಳ ತಾಲೂಕಾ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರ ಅನುಮತಿ ಪಡೆದು ಹಳಿಯಾಳ ತಾಲೂಕಾ ವೈದ್ಯಾಧಿಕಾರಿ ಡಾ.ರಮೇಶ ಕದಂ ಹಾಗೂ ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಮಾನೆ ಅವರು ಈ ದಾಳಿ ನಡೆಸಿದ್ದಾರೆ.
ಮೊದಲ ದಾಳಿ ಪಟ್ಟಣದ ಹಳಿಯಾಳ-ಯಲ್ಲಾಪುರ ರಸ್ತೆಯಲ್ಲಿರುವ ಮೀನು ಮಾರುಕಟ್ಟೆ ಪ್ರದೇಶದಲ್ಲಿರುವ ವಿಜಯಾ ದವಾಖಾನೆಯ ಮೇಲೆ ಮಾಡಲಾಗಿದ್ದು ಈ ದವಾಖಾನೆಯನ್ನು ಮುಚ್ಚಿಸಲಾಗಿದೆ. ಬಳಿಕ 2 ನೇ ದಾಳಿಯನ್ನು ಇಲ್ಲಿಯೇ ಸನಿಹದಲ್ಲಿದ್ದ ವಾಡಕರ ಕ್ಲಿನಿಕ್ ಮೇಲೆ ನಡೆಸಲಾಗಿದ್ದು ಶ್ರೀದೇವಿ ವಾಡಕರ ಅವರಿಗೆ ಎಚ್ಚರಿಕೆ ನೀಡಿ ಈ ಕ್ಲಿನಿಕ್ಗೂ ಲಾಕ್ ಹಾಕಿಸಲಾಯಿತು.
ಈ ಎರಡು ಕ್ಲಿನಿಕ್ನವರಿಗೆ ಇನ್ನು ಮುಂದೆ ನೊಂದಣಿ ಮಾಡದೆ ವೈದ್ಯಕೀಯ ವೃತ್ತಿ ಮಾಡದಂತೆ ಇಲ್ಲವಾದರೇ ಕಾನೂನಿನ ಪ್ರಕಾರ ಸೂಕ್ತ ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ಟಿಎಚ್ಓ ಡಾ.ರಮೇಶ ಕದಂ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Well done. Good job