
ಹಳಿಯಾಳ : ರಾಜ್ಯದಲ್ಲಿಯೇ ಕಸ ವಿಲೇವಾರಿಯಲ್ಲಿ ಪ್ರಶಸ್ತಿ ಪಡೆದಿರುವ ಉಕ ಜಿಲ್ಲೆಯ ಹಳಿಯಾಳ ಪುರಸಭೆಗೆ ಧಾರವಾಡ ಜಿಲ್ಲೆಯ ನವಲಗುಂದ ಪುರಸಭೆಯವರು ಭೇಟಿ ನಿಡಿ ಮಾಹಿತಿ ಸಂಗ್ರಹಿಸಿದರು.
ಮಂಗಳವಾರ ಬೆಳಿಗ್ಗೆ ಆಗಮಿಸಿದ ಈ ತಂಡವು ಪಟ್ಟಣದ ಹಲವು ಬಡಾವಣೆಗಳಿಗೆ ಭೇಟಿ ನೀಡಿ ಹಳಿಯಾಳದ ಪುರಸಭೆಯ ಪೌರ ಕಾರ್ಮಿಕರು ಪ್ರತಿ ದಿನ ಮನೆ ಮನೆಗೆ ತೆರಳಿ ಕಸ ಪಡೆಯುವುದು, ಅದನ್ನು ವಿಂಗಡಿಸುವುದು, ಕಸವನ್ನು ಪಡೆಯುವಾಗ ಜನರೊಂದಿಗೆ ಒಡನಾಟ, ಕಸವನ್ನು ವಿಂಗಡಿಸಿ ನೀಡುವ ಕುರಿತು ಸಾರ್ವಜನಿಕರ ಆಸಕ್ತಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಇಲ್ಲಿಯ ಪುರಸಭೆ ಅಧಿಕಾರಿಗಳು ಹಾಗೂ ಪಟ್ಟಣದ ಜನರಿಂದ ಮಾಹಿತಿ ಪಡೆದರು.
ಪಟ್ಟಣದ ಅಂಚಿನಲ್ಲಿರುವ ಬಾಮಣಿಕೊಪ್ಪದಲ್ಲಿರುವ ಘನ ತಾಜ್ಯ ವಿಲೇವಾರಿ ಘಟಕ್ಕೆ ತೆರಳಿದ ಈ ತಂಡ ಘನ ತಾಜ್ಯ ವಿಲೇವಾರಿ ಘಟಕದಲ್ಲಿಯ ಯಂತ್ರೋಪಕರಣಗಳು, ತಾಜ್ಯಗಳನ್ನು ವಿಂಗಡಿಸಿ ಅವುಗಳನ್ನು ಪುನರ ಬಳಕೆ ಮಾಡುವ ಹಾಗೂ ಗೊಬ್ಬರಗಳನ್ನು ತಯಾರಿಸಿ ಅವುಗಳ ಮಾರಾಟ ಮಾಡುವ ಕುರಿತು ಹಾಗೂ ಘಟಕದಲ್ಲಿ ಕೈಗೊಂಡ ಇನ್ನಿತರ ಕಾಮಗಾರಿಗಳು, ಪ್ರತಿ ದಿನ ಬರುವ ತರಕಾರಿ ಸೇರಿದಂತೆ ಇನ್ನಿತರ ಹಸಿ ಕಸವನ್ನು ಯಾವ ರೀತಿಯಲ್ಲಿ ಕೊಳೆಯಿಸಿ ಅದನ್ನು ಗೊಬ್ಬರ ಸೇರಿದಂತೆ ಮರಳಿ ಉಪಯೋಗಿಸುವ ತಂತ್ರಜ್ಞಾನ ಮತ್ತು ಘನ ತಾಜ್ಯ ಘಟಕದಲ್ಲಿ ಯಾವುದೇ ರೀತಿಯಲ್ಲಿ ದುರ್ವಾಸನೆ ಹರಡದಂತೆ ತಡೆಯುವ ಕ್ರಮಗಳ ಕುರಿತು ಸಿಬ್ಬಂದಿಯೊಂದಿಗೆ ಚರ್ಚಿಸಿದರು.
ಹಳಿಯಾಳದ ನೈರ್ಮಲ್ಯಾಧಿಕಾರಿ ಪರಶುರಾಮ ಶಿಂಧೆ, ಸಿಬ್ಬಂದಿಗಳಾದ ರಾಮಚಂದ್ರ ಮೋಹಿತೆ, ರಮೇಶ ಮುಜುಕರ, ಚಂದ್ರು ನಿಂಗನೌಡಾ, ಗೋಪಾಲಸಿಂಗ್ ಬಿಂದ್ರಾಬಿನ್, ಪರಶುರಾಮ ಜುವೇಕರ, ಪರಶುರಾಮ ಕುರಿಯಾರ, ಸಂಜಯ ಮುಳೆ ಇತರರು ಮಾಹಿತಿ ನೀಡಿದರು.
ನವಲಗುಂದ ಪುರಸಭೆಯ ಪರಿಸರ ಇಂಜನಿಯರ್ ಕುಸಮಾ ಸಪ್ಪದಲಾ, ಹಿರಿಯ ಆರೋಗ್ಯ ನಿರೀಕ್ಷಕ ಸಣ್ಣಬಸಪ್ಪ ತೇಲಿ, ಕಿರಿಯ ನಿರೀಕ್ಷಕಿ ಎನ್.ಪ್ರತೀಮಾ, ಪೌರ ಕಾರ್ಮಿಕರಾದ ನಿಂಗಪ್ಪ ಅಫನ್ನವರ, ಸೋಮನಿಂಗ ಜಗಪೂರ, ಹನುಮಂತ ತಿರಕ್ಕಪ್ಪನವರ, ಗಂಗೆವ್ವಾ ಒಣಕುದ್ರಿ, ಸಿದ್ದವ್ವ ಹುಣಸಿಮರದ, ಕಾವೇರಿ ಗುತ್ತೇನ್ನವರ ಸೇರಿದಂತೆ 20ಕ್ಕೂ ಅಧಿಕ ಪೌರಕಾರ್ಮಿಕರು ಆಗಮಿಸಿದ್ದರು.
Leave a Comment