
ಹಳಿಯಾಳ : ಪರಿಸರಕ್ಕೆ ಮಾರಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್(ಪಿಓಪಿ) ಗಣೇಶನ ವಿಗ್ರಹಗಳನ್ನು ಬಳಸದೆ. ಪರಿಸರ ಸ್ನೇಹಿಯಾಗಿರುವ ಮಣ್ಣಿನ ಮೂರ್ತಿಗಳನ್ನು ಬಳಸುವ ಮೂಲಕ ಗಣೇಶ ಚತುರ್ಥಿ ಆಚರಣೆ ಮಾಡಲು ತಾಲೂಕಾಡಳಿತ ಸೂಚಿಸಿದೆ.
ಪಟ್ಟಣದ ಮಿನಿವಿಧಾನಸೌಧದಲ್ಲಿ ಪರಿಸರಕ್ಕೆ ಹಾನಿಕಾರಕವಾದ ಪಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟ ನಿಷೇಧ ಕುರಿತು ತಹಶೀಲದಾರ ಅಧ್ಯಕ್ಷತೆಯಲ್ಲಿ ಕರೆಯಲಾದ ಸಭೆಯಲ್ಲಿ ಪ್ಲಾಸ್ಟರ್ ಆಪ್ ಪ್ಯಾರೀಸ್ನಿಂದ ಮಾಡಿದ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಿದರೇ ಅಂತವರಿಗೆ ರೂ 10 ಸಾವಿರ ದಂಡ, ಸಾರ್ವಜನಿಕ ಪ್ರದೇಶದಲ್ಲಿ ಪಟಾಕಿಗಳ ಮಾರಾಟ ಹಾಗೂ ಭಾರಿ ಶಬ್ದ ಮಾಡುವ ಡಿಜೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಪಿಓಪಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದರೇ ಮೂರ್ತಿಗಳನ್ನು ವಶಕ್ಕೆ ಪಡೆದು ಮಾರಾಟಗಾರರ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ತಹಶೀಲದಾರ ವಿದ್ಯಾಧರ ಗುಳಗುಳಿ ಸಭೆಯಲ್ಲಿ ಎಚ್ಚರಿಕೆಯನ್ನು ನೀಡಿದರು.
ಗಣೇಶ ಉತ್ಸವದ ಅಂಗವಾಗಿ ಅಧಿಕೃತ ಪಟಾಕಿ ಮಾರಾಟಗಾರರು ಮಾತ್ರ ಪಟಾಕಿ ಮಾರಾಟ ಮಾಡಬಹುದಾಗಿದ್ದು ಅವುಗಳನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ಜನನಿಬೀಡ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಮಾರಾಟ ಮಾಡದೇ ಬಯಲು ಪ್ರದೇಶದಲ್ಲಿ ಮಾರಾಟ ಮಾಡುವಂತೆ ಸೂಚನೆ ನೀಡಿದರು.
ಆರೋಗ್ಯಕ್ಕೆ ಹಾನಿಕಾರಕವಾದ ಹಾಗೂ ಭಾರಿ ಶಬ್ದ ಮಾಡುವ ಡಿಜೆ ಸೌಂಡ ಸಿಸ್ಟಮ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ತಹಶೀಲ್ದಾರ್ ಆದೇಶಿಸಿದರು. ಒಂದಾನುವೇಳೆ ತಾಲುಕಾಡಳಿತದ ಸೂಚನೆಗಳನ್ನು ಪಾಲಿಸದೆ ಇದ್ದರೇ ಡಿಜೆ ಪರಿಕರಗಳನ್ನು ವಶಕ್ಕೆ ಪಡೆದು ಅವರ ವಿರುದ್ದ ಪ್ರಕರಣದ ದಾಖಲಿಸಲಾಗುವುದೆಂದು ಸ್ಪಷ್ಟ ಸಂದೇಶ ನೀಡಿದ ತಹಶೀಲದಾರ ಗುಳಗುಳಿ ಅವರು ಗಣೇಶನ ಹಬ್ಬವನ್ನು ಪಟಾಕಿ ರಹಿತ, ಪರಿಸರ ಸ್ನೇಹಿ ಹಾಗೂ ಸ್ನೇಹ ಮತ್ತು ಸೌಹಾರ್ದದಿಂದ ಆಚರಿಸಲು ಮನವಿ ಮಾಡಿದರು.
ಸಿಪಿಐ ಬಿ.ಎಸ್. ಲೋಕಾಪೂರ, ಪಿಎಸೈ ಆನಂದಮೂರ್ತಿ ಸಿ, ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಅಗ್ನಿಶಾಮಕ ಠಾಣಾಧಿಕಾರಿ ಪಿ.ಎಸ್.ಜಾರ್ಜ್, ಗಣೇಶ ಮೂರ್ತಿಕಾರರಾದ ಶಿವಾನಂದ ತೇಲಿ, ಮಲ್ಲಿಕಾರ್ಜುನ ಕುಂಬಾರ, ನಾಗಪ್ಪ ಗೌಡ್ರ, ಶಂಕರ ಗೌಡ್ರ ಹಾಗೂ ಪಟಾಕಿ ಮಾರಾಟ ಸಂಘದ ಅಧ್ಯಕ್ಷ ಸತ್ಯಜೀತ ಗಿರಿ ಇತರರು ಸಭೆಯಲ್ಲಿ ಇದ್ದರು.
Leave a Comment