
ಹೊನ್ನಾವರ : ತಾಲೂಕಿನ ಗುಂಡಬಾಳಾದ ಆರೋಗ್ಯಮಾತಾ ಪ್ರೌಢಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ಸಮಾಜ ವಿಜ್ಞಾನ ಸಂಘದ ಅಡಿಯಲ್ಲಿ 2019-20 ನೇ ಸಾಲಿನ ಶಾಲಾ ಸಂಸತ್ತಿಗೆ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು. ಮಕ್ಕಳಲ್ಲಿ ಚುನಾವಣೆಯ ಕುರಿತು ತಿಳುವಳಿಕೆ ಮೂಡಿಸುವ ಸಲುಯವಾಗಿ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿಯೇ ಚುನಾವಣೆಯನ್ನು ನಡೆಸಲಾಯಿತು. ಮುಖ್ಯ ಚುನಾವಣಾಧಿಕಾರಿಗಳಾದ ಮುಖ್ಯಾಧ್ಯಾಪಕರ ಅಧಿಸೂಚನೆಯೊಂದಿಗೆ ಚುನಾವಣಾ ದಿನಾಂಕ ಮತ್ತು ವೇಳಾ ಪಟ್ಟಿಯನ್ನು ಸೂಚಿಸಲಾಯಿತು. ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ನಾಮಪತ್ರವನ್ನು ಸೂಚಕ ಮತ್ತು ಅನುಮೋದಕರ ಸಹಿಯೊಂದಿಗೆ ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ನಾಮಪತ್ರ ಪರಿಶೀಲನೆ, ಹಿಂಪಡೆಯುವಿಕೆ, ಚಿಹ್ನೆ ನೀಡುವಿಕೆ ಪ್ರಕ್ರಿಯೆಗಳ ನಂತರ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳ ಹೆಸರು, ಚಿಹ್ನೆ ಸಹಿತ ಇರುವ ಮುದ್ರಿತ ಮತ ಪತ್ರಗಳ ಮೂಲಕ 11 ಅಭ್ಯರ್ಥಿಗಳಲ್ಲಿ 8 ಅಭ್ಯರ್ಥಿಗಳ ಆಯ್ಕೆಗೆ ಫೋಟೊ ಸಹಿತ ಗುರುಚಿನ ಚೀಟಿಯೊಂದಿಗೆ ಮತ ಚಲಾಯಿಸಿದರು. ಚುನಾವಣಾ ಸಿಬ್ಬಂದಿಗಳಾಗಿ ವಿದ್ಯಾರ್ಥಿಗಳೇ ಕರ್ತವ್ಯ ನಿರ್ವಹಿಸಿದರು ಹಾಗೂ ಕಾನೂನು ಸುವ್ಯವಸ್ಥೆಯನ್ನು ಪೋಲೀಸ್ ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳೇ ಕಾಪಾಡಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪರಕಲ್ಪನೆ, ನಾಯಕತ್ವ, ನಾಗರೀಕ ಹಕ್ಕು ಕರ್ತವ್ಯಗಳ ಕುರಿತು ತಿಳಿದುಕೊಳ್ಳಲು ಸಹಕಾರಿಯಾಯಿತು.
ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಮಹೇಂದ್ರ ಗೌಡ, ಮನೋಹರ ಗೌಡ, ಭವನ ಜೈನ್, ದೀಕ್ಷಾ ಜೈನ್, ಪದ್ಮಾ ಗೌಡ, ಅಲಿಷಾ ಫರ್ನಾಂಡಿಸ್, ಸಹನಾ ಆಚಾರಿ, ಸುಮನಾ ಮಡಿವಾಳ ಇವರಿಗೆ ಸಂಚಾಲಕರು ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮಾರ್ಗದರ್ಶನ ನೀಡಿ ಆಭಿನಂದಿಸಿದರು.
Leave a Comment