
ಹಳಿಯಾಳ :- ಕಳೆದೊಂದು ವಾರದಿಂದ ಹಳಿಯಾಳ ಹಾಗೂ ಸುತ್ತಮುತ್ತಲು ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು, ಸೇತುವೆಗಳು, ರಸ್ತೆಗಳು ಹಾನಿಗೊಳಗಾಗಿದ್ದು ಶಾಸಕ ಆರ್.ವಿ.ದೇಶಪಾಂಡೆ ಹಾಗೂ ವಿಪ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಹಲವು ಪ್ರದೇಶಗಳಿಗೆ ತೆರಳಿ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದರಲ್ಲದೇ ಜನರ ಸಮಸ್ಯೆಗಳನ್ನು ಆಲಿಸಿದರು.
ಹಳಿಯಾಳದಿಂದ ಧಾರವಾಡ ಹೊರತುಪಡಿಸಿ ಹಳಿಯಾಳ-ದಾಂಡೇಲಿ-ಯಲ್ಲಾಪುರ-ಬೆಳಗಾವಿ ಮಾರ್ಗದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗೀತವಾಗಿರುವುದರಿಂದ ಬೆಂಗಳೂರು ಇತರೆಡೆಯಿಂದ ದಾಂಡೇಲಿಗೆ ತೆರಳಲು ಧಾರವಾಡ ಮಾರ್ಗವಾಗಿ ಹಳಿಯಾಳಕ್ಕೆ ಬಂದ ಪ್ರಯಾಣಿಕರು ಸಮಸ್ಯೆಯಲ್ಲಿ ಸಿಲುಕಿದ್ದಾರೆಂಬ ಮಾಹಿತಿ ಪಡೆದ ಶಾಸಕರ ದೇಶಪಾಂಡೆ ಅವರು ಕೂಡಲೇ ಹಳಿಯಾಳ ಬಸ್ ನಿಲ್ದಾಣಕ್ಕೆ ತೆರಳಿ ಪ್ರಯಾಣಿಕರಿಗೆ ಹಳಿಯಾಳದ ವಿಆರ್ಡಿಎಮ್ ಟ್ರಸ್ಟ್ನಿಂದ ಊಟ-ತಿಂಡಿ ವ್ಯವಸ್ಥೆ ಮಾಡಿಸಿ ನದಿ ನೀರಿನ ಹರಿವು ಕಡಿಮೆಯಾದ ಬಳಿಕ ದಾಂಡೇಲಿಗೆ ತಲುಪಲು ಬಸ್ ವ್ಯವಸ್ಥೆ ಮಾಡಿಸಿದ್ದು ಸುಮಾರು 85 ಜನ ಪ್ರಯಾಣಿಕರು ಸುರಕ್ಷಿತವಾಗಿ ದಾಂಡೇಲಿಗೆ ತಲುಪಿದರು.

ಬಳಿಕ ದೇಶಪಾಂಡೆ ಹಾಗೂ ಘೊಟ್ನೇಕರ ಅವರು ನೀರಿನಿಂದ ಜಲಾವೃತವಾಗಿದ್ದ ಹಳಿಯಾಳದ ಯಡೋಗಾ, ಕೆಸರೊಳ್ಳಿ ಸೇತುವೆ ಪ್ರದೇಶಗಳಿಗೆ ನಂತರ ಹಾನಿಗೊಳಗಾಗಿರುವ ಮಂಗಳವಾಡ ಗ್ರಾಮದ ಮತ್ತು ಬೆಳಗಾವಿಗೆ ಸಂಪರ್ಕ ಕಲ್ಪಿಸುವ ದುಸಗಿ ಸೇತುವೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣ ಸೇತುವೆ ಸಮೀಪ ಹಾನಿಗೊಳಗಾಗಿರುವ ರಸ್ತೆಯನ್ನು ದುರಸ್ಥಿಗೊಳಿಸಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನದಿ ನೀರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನೀರಿನ ಹರಿವಿನ ಬಗ್ಗೆ ಸ್ಪಷ್ಟ ಚಿತ್ರಣ ದೊರಕದ ಕಾರಣ ನದಿ ಪಾತ್ರದ ದೂರ ದೂರದ ಜನರನ್ನು ಸಹಿತ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಬೇಕು. ನದಿ ಪಾತ್ರದಲ್ಲಿ ಹಾನಿಗೊಳಗಾದ ಬೆಳೆಗಳ ಬಗ್ಗೆ ಹಾಗೂ ರೈತರು ಪಂಪಸೆಟ್, ಪೈಪಲೈನ್, ಕೃಷಿ ಸಲಕರಣೆಗಳು, ಕೊಟ್ಟಿಗೆಗಳು, ಜಾನುವಾರುಗಳನ್ನು ಕಳೆದುಕೊಂಡ ಬಗ್ಗೆ ಸಮಗ್ರ ವರದಿ ತಯಾರಿಸಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದರು.


Leave a Comment