
ಹಳಿಯಾಳ:- ಬಡತನ-ನಿರಕ್ಷರತೆ-ನಿರುದ್ಯೋಗ ಈ ಮೂರು ದೇಶಕ್ಕೆ ಅಂಟಿದ ಮಹಾರೋಗಗಳಾಗಿದ್ದು ಯಾರು ಇವುಗಳಿಗೆ ಹೆದರಬೇಡಿ. ಎಲ್ಲರೂ ಒಗ್ಗಟ್ಟಾಗಿ ಈ ಮೂರು ಪಿಡುಗುಗಳ ವಿರುದ್ದ ಹೊರಾಟಬೇಕಿರುವುದು ಮುಖ್ಯವಾಗಿದೆ ಎಂದು ಹಳಿಯಾಳ ಶಾಸಕ ಹಾಗೂ ವಿಆರ್‍ದೇಶಪಾಂಡೆ ಮೇಮೋರಿಯಲ್ ಟ್ರಸ್ಟ್‍ನ ಅಧ್ಯಕ್ಷ ಆರ್.ವಿ.ದೇಶಪಾಂಡೆ ಅಭಿಪ್ರಾಯಪಟ್ಟರು.
ಪಟ್ಟಣದ ಆರ್‍ಸೆಟಿ ಸಭಾಭವನದಲ್ಲಿ ನಡೆದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿಯ 15ನೇ ವಾರ್ಷಿಕ ವರದಿ ಬಿಡುಗಡೆಯ ಸಮಾರಂಭದಲ್ಲಿ ವಾರ್ಷಿಕ ವರದಿ ಬಿಡುಗಡೆಗೊಳಿಸಿ ಮಾತನಾಡಿದರು. ವಿ.ಆರ್.ದೇಶಪಾಂಡೆ ಅವರ ಸ್ಮರಣಾರ್ಥ ಆರಂಭಿಸಿದ್ದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‍ಸೆಟಿಯ ಉದ್ದೇಶ ಈಡೇರುತ್ತಿದೆ ಅಲ್ಲದೇ ಈ ಸಂಸ್ಥೆ ಉದ್ಯೋಗ ಸೃಷ್ಠಿಗೆ ಕಾಮಧೆನುವಾಗಿದೆ ಎಂದರು.
ಯುವಕ-ಯುವತಿಯರು ಕೌಶಲ್ಯದ ಮೂಲಕ ಉದ್ಯೋಗ ಸೃಷ್ಠಿ ಮಾಡಿಕೊಳ್ಳಲು ಸಾಧ್ಯವೆಂದು ಅಧ್ಯಯನದಿಂದ ತಿಳಿದು 2004 ರಲ್ಲೇ ರುಡಸೆಟ್ ಪ್ರಾರಂಭಿಸಲಾಯಿತು. ಈಗ ಈ ಸಂಸ್ಥೆಯಿಂದ 15ಸಾವಿರಕ್ಕೂ ಅಧಿಕ ನಿರುದ್ಯೋಗಿ ಯುವಕ-ಯುವತಿಯರು ಬದುಕು ಕಟ್ಟಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಧಾರವಾಡದ ವಾಲ್ಮೀ ಸಂಸ್ಥೆ ನಿರ್ದೇಶಕ ಡಾ|| ರಾಜೇಂದ್ರ ಪೊದ್ದಾರ ಮಾತನಾಡಿ ಇಂದಿನ ದಿನಮಾನಗಳಲ್ಲಿ ಜ್ಞಾನ, ಕೌಶಲ್ಯಗಳ ಜೊತೆಗೆ ಯುವಕರಲ್ಲಿ ಸಮಸ್ಯೆಗಳನ್ನು ಎದುರಿಸುವ ಛಲ ಬೇಕು. ಜಲ ಹಾಗೂ ನೆಲದ ಸಂರಕ್ಷಣೆ ನಮ್ಮೇಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. ವಿಆರ್‍ಡಿಎಮ್ ಟ್ರಸ್ಟ್ ಹಾಗೂ ರುಡಸೆಟಿಯ ಕಾರ್ಯ ಚಟುವಟಿಕೆಗಳನ್ನು ಅದರಲ್ಲೂ ಮುಖ್ಯವಾಗಿ ಜಲ ಸಂರಕ್ಷಣೆಯಲ್ಲಿ ಕೈಗೊಂಡ ಮಹತ್ವದ ಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಮೆಚ್ಚಿ, ಸಂಸ್ಥೆಯು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಸಾಧಿಸಿ ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಹೊಂದಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ವಿದೇಶಾಂಗ ಸಚಿವೆ ದಿ. ಸುಶ್ಮಾ ಸ್ವರಾಜ್ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಸಂಸ್ಥೆಯಿಂದ ತರಬೇತಿಹೊಂದಿ ಯಶಸ್ವಿ ಸ್ವ-ಉದ್ಯೋಗವನ್ನು ನಡೆಸುತ್ತಿರುವ 5 ಸ್ವಯಂ ಉದ್ಯೋಗಿಗಳಿಗೆ, ಸಂಸ್ಥೆಯ ಮಾರ್ಗದರ್ಶದಲ್ಲಿ ರಚಿತಗೊಂಡ ಯಶಸ್ವಿ 5 ಸ್ವ-ಸಹಾಯ ಸಂಘಗಳಿಗೆ ಸನ್ಮಾನಿಸಲಾಯಿತು. ಸ್ವ-ಉದ್ಯೋಗವನ್ನು ಇದೀಗ ಪ್ರಾರಂಭಿಸಿದ 10 ಯುವಕರಿಗೆ ಉಚಿತ ಟೂಲ್ ಕಿಟ್ಸ ವಿತರಣೆ ಮಾಡಲಾಯಿತು.
ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ರಾಷ್ಟವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದ ಗ್ರಾಮೀಣ ಯುವಕ ಸೂರಜ್ ಅನ್ನಿಕೇರಿಯನ್ನು ಗೌರವಿಸಲಾಯಿತು.
ಹಳಿಯಾಳ ಹಾಗೂ ಜೋಯಿಡಾ ತಾಲ್ಲೂಕುಗಳಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ತೆರ್ಗಡೆಹೊಂದಿದ ಮೊದಲ 5 ಶಾಲೆಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.
ಸಂಸ್ಥೆಯ ನಿರ್ದೇಶಕರಾದ ನಿತ್ಯಾನಂದ ವೈದ್ಯೆ 2018-19ನೇ ಸಾಲಿನ ವರದಿ ವಾಚನ ಮಾಡಿದರು. ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಸಾದ ದೇಶಪಾಂಡೆ, ಕೆನರಾ ಬ್ಯಾಂಕ್ ಬೆಳಗಾವಿ ರಿಜಿನಲ್ ಕಛೇರಿಯ ಕೆ.ಎನ್. ಕುಲಕರ್ಣಿ, ಹಿರಿಯ ಸಲಹೆಗಾರ ಅನಂತಯ್ಯ ಆಚಾರ್ ವೇದಿಕೆಯ ಮೇಲಿದ್ದರು.
Leave a Comment