
ಹಳಿಯಾಳ:- ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆಯು ಯಾವುದೇ ಜಾತಿ, ಧರ್ಮವನ್ನು ಪರಿಗಣಿಸದೆ ಇದುವರೆಗೂ ಸಾವಿರಾರು ನಿರುದ್ಯೋಗಿ ಯುವಕ/ಯುವತಿಯರಿಗೆ ಹಾಗೂ ಶಾಲೆ ತೊರೆದವರಿಗೆ ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕಲು ದಾರಿ ಮಾಡಿಕೊಟ್ಟಿದೆ ಎಂದು ಹಳಿಯಾಳ ಶಾಸಕರು ಮತ್ತು ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಹೇಳಿದರು.
ಭಾನುವಾರ ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ನಡೆದ ಲರ್ನಿಂಗ್ ಸೊಸೈಟಿ ಬೆಂಗಳೂರುರವರ ಸಹಕಾರದೊಂದಿಗೆ ಪಟ್ಟಣದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ನಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಆಸಕ್ತಿಯ ಜೊತೆಗೆ ಕೌಶಲ್ಯಾಭಿವೃದ್ಧಿ ಹಾಗೂ ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆಧುನಿಕ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡಲ್ಲಿ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿಯಾಗಬಹುದೆಂದು ತಿಳಿಸಿದರು. ವಿದ್ಯಾರ್ಥಿಗಳು ಪಡೆದ ಶಿಷ್ಯವೇತನವನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೆಯೇ ವಿದ್ಯಾರ್ಜನೆಯ ಸಮಯದಲ್ಲಿ ಸಹಾಯ ಸಹಕಾರ ನೀಡಿದವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉಕ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸಂತೋಷ ರೇಣಕೆ ಮಾತನಾಡಿ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಯಾವುದೇ ಆರ್ಥಿಕ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಮೇಲಿಂದ ಮೇಲೆ ಹಲವಾರು ಶಿಷ್ಯವೇತನವನ್ನು ನೀಡುತ್ತಾ ಬರುವ ಮೂಲಕ ಸಹಾಯ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಕಾರ್ಯವೆಂದರು.
ಹಳಿಯಾಳ ಬ್ಲಾಕ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಭಾಸ ಕೋರ್ವೆಕರ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಲವಾರು ಬಡ ಕುಟುಂಬದಿಂದ ಬಂದಿರುವುದರಿಂದ ಶಿಕ್ಷಣಕ್ಕೆ ಆರ್ಥಿಕ ತೊಂದರೆಗನ್ನು ಅನುಭವಿಸುತ್ತಾರೆ. ಹೀಗೆ ಆರ್ಥಿಕ ತೊಂದರೆಯಿಂದ ತಮ್ಮ ವಿದ್ಯಾಭ್ಯಾಸವನ್ನು ಮೋಟಕುಗೊಳಿಸಬಾರದೆನ್ನುವ ಉದ್ದೇಶದಿಂದ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಶಿಷ್ಯವೇತನ ನೀಡುತ್ತಿದೆ. ಅದರ ಸದುಪಯೋಗವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ತಾವು ಸಹ ಸಮಾಜಕ್ಕೆ ತಮ್ಮ ಕೈಲಾದ ಸಹಾಯವನ್ನು ಮಾಡಬೇಕೆಂದು ಕರೆ ನೀಡಿದರು.
ಹಳಿಯಾಳ ದಾಂಡೇಲಿ ಜೋಯಿಡಾದ ಬಿ.ಇ., ಬಿಸಿಎ, ಬಿ.ಎಸ್ಸಿ, ಬಿ.ಎಡ್, ಜನರಲ್ ನರ್ಸಿಂಗ್, ಡಿಪ್ಲೋಮಾ, ಜಿ.ಟಿ.& ಟಿ.ಸಿ., ಎಮ್.ಎಸ್ಸಿ., ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ 126 ವಿದ್ಯಾರ್ಥಿಗಳಿಗೆ ರೂ.10 ಲಕ್ಷಗಳ ಶಿಷ್ಯವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕೃಷ್ಣಾ ಪಾಟೀಲ, ವಕ್ಫ್ ಬೊರ್ಡ ಅಧ್ಯಕ್ಷರಾದ ಖಯಾಮ ಮುಗದ, ಪ್ರಮುಖರಾದ ಸತ್ಯಜೀತ ಗೀರಿ, ಸಂಜು ಮಿಶ್ಯಾಳಿ, ಕೆನರಾಬ್ಯಾಂಕ ದೇಶಪಾಂಡೆ ಆರ್ಸೆಟಿ ಯೋಜನಾ ಸಂಯೋಜಕರಾದ ವಿನಾಯಕ ಚವ್ಹಾಣ, ವಿ.ಆರ್.ಡಿ.ಎಮ್ ಟ್ರಸ್ಟ್ ವ್ಯವಸ್ಥಾಪಕ ವಿವೇಕ ಹೆಗಡೆ ಇದ್ದರು. ದೇಶಪಾಂಡೆ ಕೈಗಾರಿಕಾ ಸಂಸ್ಥೆಯ ಪ್ರಾಂಶುಪಾಲ ದಿನೇಶ ಆರ್. ನಾಯ್ಕ ಕಾರ್ಯಕ್ರಮ ನಿರ್ವಹಿಸಿದರೇ ವಿವಿಡಿ ಸ್ಕೂಲ್ ಆಫ್ ಎಕ್ಸಲೆನ್ಸನ ಅಧ್ಯಾಪಕ ಶ್ರೀಧರ ಬುಳ್ಳಣ್ಣನವರ ವಂದಿಸಿದರು.
Leave a Comment