
ಹೊನ್ನಾವರ : ತಾಲೂಕಿನ 29 ಗ್ರಾಮೀಣ ಪ್ರದೇಶ ಮತ್ತು ಪಟ್ಟಣದ ಪ್ರಯಾಣಿಕರಿಗೆ ಸಂಪರ್ಕ ಸೇತುವೆಯಾಗಬೇಕಾದ ಹೊನ್ನಾವರ ಬಸ್ ನಿಲ್ದಾಣ ಮೂಲಭೂತ ಸೌಕರ್ಯವಿಲ್ಲದೇ ಕೊಳಚೆ ಗುಂಡಿಯಾಗಿ ಗಬ್ಬೆದ್ದು ನಾರುತ್ತಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ. ಎನ್. ತೆಂಗೇರಿ ಆಪಾದಿಸಿದ್ದಾರೆ.
ಅವರು ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿ ಬಸ್ ನಿಲ್ದಾಣದ ಆವರಣದ ಗೋಡೆ ಕುಸಿದು ತಿಂಗಳು ಕಳೆದರೂ ಸಾರಿಗೆ ಅಧಿಕಾರಿಗಳು ಕಣ್ಣೆತ್ತಿಯೂ ನೋಡುತ್ತಿಲ್ಲ. ಜೋರಾಗಿ ಮಳೆ ಬಂದರೆ ಮಳೆ ನೀರು ಹರಿದು ಹೋಗಲು ಇರುವ ಕಾಲುವೆ ಮೇಲೆ ಆವರಣದ ಗೋಡೆ ಕುಸಿದು ನೀರು ಹರಿಯಲು ಜಾಗವಿಲ್ಲದೇ, ಬಸ್ ನಿಲ್ದಾಣದ ಆವರಣ ನದಿಯಂತೆ ಬಾಸವಾಗಿದ್ದು, ದಿನನಿತ್ಯ ಪ್ರಯಾಣಿಕರು ಇಲ್ಲಿ ಪರದಾಡುವ ದೃಶ್ಯ ಸಾಮಾನ್ಯವಾಗಿದೆ ಎಂದಿದ್ದಾರೆ.

ಬಸ್ ನಿಲ್ದಾಣದ ಒಳಗಡೆ ಆವರಣದ ಸುತ್ತಲೂ ಗಿಡ-ಗಂಟಿಗಳು ಏಥೇಚ್ಛವಾಗಿ ಬೆಳೆದಿದ್ದು, ಸುತ್ತಲೂ ಕಸಕಡ್ಡಿ, ಮಲೀನ ನೀರು, ಸಂಗ್ರಹವಾಗಿ ಕಸವಿಲೇವಾರಿ ಸಂಗ್ರಹಣ ಘಟಕವಾಗಿ ಪರಿವರ್ತನೆಗೊಂಡಿದೆ. ಈ ಬಗ್ಗೆ ಸ್ವಚ್ಛತೆ ಕಾಪಾಡಿಕೊಂಡು ದಿನನಿತ್ಯ ಬಸ್ ನಿಲ್ದಾಣಕ್ಕೆ ಬರುವ ಸಾವಿರಾರು ಪ್ರಯಾಣಿಕರ ಯೋಗ ಕ್ಷೇಮ ಕಾಪಾಡಬೇಕಾದ ಸಾರಿಗೆ ಮತ್ತು ಆರೋಗ್ಯ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಈ ಕೊಳಚೆ, ತ್ಯಾಜ್ಯ ವಸ್ತುಗಳ ಗಬ್ಬೆದ್ದು ನಾರುತ್ತಿದ್ದು ಸುತ್ತಲಿನ ಒಂದು ಕಿ.ಮೀ ಪ್ರದೇಶದಲ್ಲಿ ವಾಸನೆ ಮತ್ತು ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಜನ ಪರದಾಡುತ್ತಿದ್ದು, ಸಾರಿಗೆ ಮತ್ತು ಆರೋಗ್ಯ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ತೆಂಗೇರಿ ತಿಳಿಸಿದ್ದಾರೆ.

ಬಸ್ ನಿಲ್ದಾಣದ ಆವಣದೊಳಗಡೆ ಸು¯ಭ ಶೌಚಾಲಯವಿದ್ದು, ಶೌಚಾಲಯದ ನೀರು ಹೊರಗಡೆ ಹರಿದುಬಿಡುವುದರಿಂದ ಸುತ್ತಲಿನ ವಾತಾವರಣ ಮಲಿನಗೊಂಡಿದೆ. ಅದಕ್ಕೆ ಲಗತ್ತಿರುವ ಪ್ರಯಾಣಿಕರಿಗಾಗಿ ಮೂತ್ರಖಾನೆಯಿದ್ದು ಅಲ್ಲಿ ಅಗತ್ಯ ನೀರು ಮತ್ತು ಮೇಲ್ಛಾವಣಿ ಇಲ್ಲದೇ ಮಳೆಯಲ್ಲಿ ನೆನೆಯುತ್ತಾ, ಪ್ರಯಾಣಿಕರು ತಮ್ಮ ದೇಹಬಾದೆ ತೀರಿಸಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಜಗದೀಪ ತೆಂಗೇರಿ ಹೇಳಿದ್ದಾರೆ.
ಸುಲಭ ಶೌಚಾಲಯದ ಟೆಂಕ್ ಬಳಿಯಲ್ಲಿಯೇ ಕುಡಿಯುವ ನೀರಿಗಾಗಿ ಬೋರ್ವೆಲ್ ಹೊಡೆದಿದ್ದು ಅದನ್ನು ಕಣ್ಣಾರೇ ಕಂಡವರ್ಯಾರು ಅಲ್ಲಿನ ನೀರು ಕುಡಿಯಲಾರರು ಎಂದರು.
ಅದೇ ರೀತಿ ಬಸ್ ನಿಲ್ದಾಣದ ಒಳಗಡೆ ಯಾವುದೇ ಕಾವಲುಗಾರರಿಲ್ಲದೇ ಬಸ್ ನಿಲ್ದಾಣದ ಒಳಗಡೆ ಬಸ್ ನಿಲ್ಲುವ ಸ್ಥಳದಲ್ಲಿಯೂ ಕೆಲವು ಬಲಾಢ್ಯರು ತಮ್ಮ ಐಷರಾಮಿ ಕಾರುಗಳನ್ನು, ಬೈಕುಗಳನ್ನು ನುಗ್ಗಿಸಿ ಪ್ರಯಾಣಿಕರಿಗೆ ಗಾಯಗೊಳಿಸುವುದು ಸಾಮಾನ್ಯವಾಗಿದೆ. ಕಳೆದೆರಡು ವರ್ಷದ ಹಿಂದೆ ಗ್ರಾಮೀಣ ಭಾಗದ ಓರ್ವ ಮಹಿಳೆ ಬಸ್ಸಿನ ಚಕ್ರಕ್ಕೆ ಸಿಲುಕಿ ಮೃತ ಪಟ್ಟಿದ್ದರೂ, ಸಾರಿಗೆ ಇಲಾಖೆಗೆ ಇನ್ನೂ ಬುಧ್ದಿ ಬರದಾಗಿದೆ. ಮುಗ್ದ ಗ್ರಾಮೀಣ ಭಾಗದ ಪ್ರಯಾಣಿಕರು ವಿಚಾರಣೆ ಕೊಠಡಿಗೆ ಬಸ್ ವಿಚಾರಿಸಲು ತೆರಳಿದರೆ ಸಂಭಂದಿತರು ಉಡಾಪೆ ಉತ್ತರ ನೀಡಿ ಕಾಲು ಕೆರೆದು ಜಗಳಕ್ಕಿಳಿಯುತ್ತಾರೆ. ರಾತ್ರಿಯಾದರೆ ಬಸ್ ನಿಲ್ದಾಣದ ಸುತ್ತಲೂ ವಿದ್ಯುತ್ ದೀಪವಿಲ್ಲದೇ ಪ್ರಯಾಣಿಕರು ಪರಿತಪಿಸುತ್ತಾರೆ. ಇದರಿಂದ ಕಳ್ಳತನ, ದರೋಡೆ, ಸಮಾಜ ಘಾತುಕ ಕೃತ್ಯಕ್ಕೆ ಇಲಾಖೆಯೇ ಅವಕಾಶ ನೀಡಿದಂತಾಗಿದೆ. ಹೆಂಗಸರು, ಮಕ್ಕಳು ಕತ್ತಲೆಯಲ್ಲಿ ಭಯಬೀತಿಯಿಂದ ಒಡಾಡುವಂತಾಗಿದೆ ಎಂದರು.

ಕಳೆದ ವರ್ಷ ಬಸ್ ನಿಲ್ದಾಣದ ಮೇಲ್ಛಾವಣಿಯ ಕಬ್ಬಿಣದ ಬಿಮ್ ಕುಸಿದು ಬಿದ್ದು ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದರು. ನಂತರ ಹದಿನೈದು ದಿನಗಳ ಕಾಲ ಪೊಲೀಸ್ ಭದ್ರತೆಯಲ್ಲಿ ಸಾರಿಗೆ ಇಲಾಖೆ ಶಾಶ್ವತ ಪರಿಹಾರ ಕಂಡುಕೊಳ್ಳದೇ ತಾತ್ಪೂರ್ತಿಕ ರಿಪೇರಿ ನಡೆಸಿದ್ದರು. ಆದರೆ ಆ ಮೇಲ್ಛಾವಣಿ ಮಳೆಯ ರಭಸಕ್ಕೆ ಬೀಳದೇ ಇರುವುದು ಪ್ರಯಾಣಿಕರ ಅದೃಷ್ಟವೇ ಸರಿ. ಇಂದಲ್ಲಾ ನಾಳೆ ಈ ಮೇಲ್ಛಾವಣಿಯಿಂದ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತೆಂಗೇರಿ ಆರೋಪಿಸಿದ್ದಾರೆ.
ಕಾರಣ ಸಾರಿಗೆ ಇಲಾಖೆ ಇವುಗಳನ್ನೆಲ್ಲಾ ಮನಗಂಡು ತಕ್ಷಣ ಪ್ರಯಾಣಿಕರ ಸುಭದ್ರತೆಯ ಜೊತೆಗೆ ಸುಖಕರ, ಸುರಕ್ಷಿತ ಪ್ರಯಾಣಕ್ಕೆ ಎಲ್ಲಾ ರೀತಿಯ ಆವಕಾಶ ಮಾಡಿಕೊಡಬೇಕು. ನೀರು, ಸ್ವಚ್ಛತೆ, ವಿದ್ಯುತ್ ದೀಪ ಇವುಗಳ ಬಗ್ಗೆ ತಕ್ಷಣ ಅಗತ್ಯ ಕ್ರಮಕೈಗೊಳ್ಳಬೇಕು. ಸಾರ್ವಜನಿಕರು ಮತ್ತು ಪ್ರಯಾಣಿಕರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನವೇ ಇವುಗಳನ್ನೆಲ್ಲಾ ಬಗೆಹರಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರೊಂದಿಗೆ ಅನಿವಾರ್ಯವಾಗಿ ನಾವು ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ತೆಂಗೇರಿ ಎಚ್ಚರಿಸಿದ್ದಾರೆ.

Leave a Comment