ಹಳಿಯಾಳ:- ಪಟ್ಟಣದ ಸಂಗೋಳ್ಳಿ ರಾಯಣ್ಣ(ಅರ್ಬನ್ ಬ್ಯಾಂಕ್)ವೃತ್ತದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿಯ 5ಸಾವಿರ ಲೀ. ನೀರು ಶೇಖರಣಾ ಸಾಮಥ್ರ್ಯ ಹೊಂದಿರುವ ಸಿಂಟೇಕ್ಸ್ ಸ್ಪೋಟಗೊಂಡು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಸಿಎಸ್‍ಆರ್(ಸಾಮಾಜಿಕ ಹೊಣೆಗಾರಿಕೆ ನಿಧಿ)ಯ 2.5 ಲಕ್ಷ ರೂ. ಅನುದಾನದಲ್ಲಿ ಮಂಜೂರಿಯಾದ ಈ ಘಟಕವನ್ನು ಲ್ಯಾಂಡ್ ಆರ್ಮಿಯವರು ಒಂದೂವರೆ ವರ್ಷಗಳ ಹಿಂದೆ ನಿರ್ಮಿಸಿದ್ದರು. ಬಳಿಕ ಹಳಿಯಾಳ ಪುರಸಭೆಗೆ ಈ ಶುದ್ದ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಗಿತ್ತು. ಸದ್ಯ ಪುರಸಭೆಯವರು ಇದರ ನಿರ್ವಹಣೆ ಮಾಡುತ್ತಿದ್ದರು.

ಮಂಗಳವಾರ ಮಧ್ಯಾಹ್ನ ಒಮ್ಮೇಲೆ ದೊಡ್ಡ ಶಬ್ದದೊಂದಿಗೆ ಸ್ಪೋಟಗೊಂಡ ಸಿಂಟೆಕ್ಸ್ ಘಟಕದಲ್ಲಿನ ಗಾಜುಗಳನ್ನು ಪುಡಿ ಪುಡಿ ಮಾಡಿದೆ, ಒಳಗಡೆ ಇರುವ ಕೆಲವು ವಸ್ತುಗಳಿಗೂ ಹಾನಿ ಮಾಡಿದೆ. ಸ್ಪೋಟದ ತೀವೃತೆಗೆ ಗಾಜುಗಳು 20 ಅಡಿಗೂ ಹೆಚ್ಚು ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇಂತಹ ಘಟನೆ ಇದೆ ಮೊದಲು ನೋಡುತ್ತಿರುವುದು ಎಂದು ಸ್ಥಳದಲ್ಲಿದ್ದ ಸಾರ್ವಜನೀಕರು ಹಾಗೂ ಅಧಿಕಾರಿಗಳು ಹೇಳುತ್ತಿದ್ದರು ಅಲ್ಲದೇ ಇದು ಅಪರೂಪದಲ್ಲಿ ಅಪರೂಪದ ಘಟನೆಯಾಗಿದೆ ಎಂದಿರುವ ಅಧಿಕಾರಿಗಳು ಸ್ಪೋಟಕ್ಕೆ ನಿಖರ ಕಾರಣಗಳು ತಿಳಿದು ಬರಬೇಕಿದೆ ಎಂದಿದ್ದಾರೆ.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ಹಾಗೂ ಸದ್ಯ ಮೋಹರಂ ಹಬ್ಬ ಇರುವುದರಿಂದ ಇದೆ ವೃತ್ತದಲ್ಲಿ ಪಂಜಾ ದೇವರುಗಳನ್ನು ನೋಡಲು ಸಾವಿರಾರು ಜನ ಸೇರುವ ಮುಂಚೆ ಕೆಲವು ನಿಮಿಷಗಳ ಮೊದಲು ಈ ಸ್ಪೋಟ ಉಂಟಾಗಿದ್ದರಿಂದ ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸದೆ ಇರುವುದು ದೇವರ ಕೃಪೆಯೇ ಸರಿ.
ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ, ಇಂಜೀನಿಯರ್ ಹರೀಶ ಗೌಡಾ, ಪುರಸಭೆ ಸದಸ್ಯರಾದ ಸಂತೋಷ ಘಟಕಾಂಬಳೆ, ಉದಯ ಹೂಲಿ, ರುದ್ರಪ್ಪಾ(ಯಲ್ಲಪ್ಪಾ) ಸಾಂಬ್ರೇಕರ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪುರಸಭೆಯವರು ಇದರ ನಿರ್ವಹಣೆ ಸರಿಯಾಗಿ ಮಾಡದ್ದರಿಂದ ಕೆಲವೆಡೆ ಕಾರ್ಬನ್ ಹಿಡಿದಿದ್ದು ಕಸ ತುಂಬಿಕೊಂಡಿರುವುದರಿಂದ ಸಿಲಿಂಡರ್‍ನಲ್ಲಿ ಒತ್ತಡ ಹೆಚ್ಚಾಗಿ ಈ ಘಟನೆ ನಡೆದಿರಬಹುದು ಎನ್ನುತ್ತಿರುವ ಜನರು ಪುರಸಭೆಯವರ ನಿಷ್ಕಾಳಜಿಯೇ ಇದಕ್ಕೆ ಕಾರಣವಾಗಿದೆ ಎಂದು ಸ್ಥಳದಲ್ಲಿ ಜಮಾಯಿಸಿದ್ದ ಜನಪ್ರತಿನಿಧಿಗಳು ಹಾಗೂ ಸಾರ್ವಜನೀಕರು ಆರೋಪಿಸುತ್ತಿರುವುದು ಕಂಡು ಬಂತು.
ಸ್ಥಳಕ್ಕಾಗಮಿಸಿದ ಪುರಸಭೆಯವರು ಕೂಡಲೇ ರಸ್ತೆಯ ಮೇಲೆ ಹಾಗೂ ಅಕ್ಕಪಕ್ಕದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗ್ಲಾಸ್ ಚೂರುಗಳನ್ನು ಹಾಗೂ ಇತರ ಬಿಡಿ ಭಾಗಗಳನ್ನು ಸ್ವಚ್ಚಗೊಳಿಸಿದರು.
ಈ ಕುರಿತು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಅವರು ಸ್ಪೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಆದ್ದರಿಂದ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗುವುದು ಹಾಗೂ ಹಾನಿಯಾಗಿರುವ ಘಟಕವನ್ನು ದುರಸ್ಥಿ ಮಾಡುವ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.
ಪುರಸಭೆ ಸದಸ್ಯರಾದ ಉದಯ ಹೂಲಿ ಹಾಗೂ ಸಂತೋಷ ಘಟಕಾಂಬಳೆ ಮಾತನಾಡಿ ತಾಲೂಕಿನಲ್ಲಿ ಅರ್ಧಕ್ಕಿಂತ ಹೆಚ್ಚು ಶುದ್ದ ಕುಡಿಯುವ ನೀರಿನ ಘಟಕಗಳು ಕೆಲಸವನ್ನೇ ಮಾಡದೆ ತುಕ್ಕು ಹಿಡಿಯುತ್ತಿವೆ. ಕೆಲಸ ಮಾಡುತ್ತಿರುವ ಕೆಲವೆ ಕೆಲವು ಘಟಕಗಳಲ್ಲಿ ಈ ರೀತಿ ಸಮಸ್ಯೆಗಳಾದರೇ ಜನರಿಗೆ ಸಮಸ್ಯೆಯಾಗಲಿರುವ ಕಾರಣ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವುದರ ಮೂಲಕ ಉಳಿದ ಘಟಕಗಳಲ್ಲಿ ಎಲ್ಲ ರೀತಿಯ ಪರಿಶೀಲನೆ ನಡೆಸಬೇಕು ಹಾಗೂ ಸಮಸ್ಯೆಗಳಿದ್ದಲ್ಲಿ ಕೂಡಲೇ ಸರಿಪಡಿಸಬೇಕು. ಯಾರಿಗೂ ತೊಂದರೆ ಆಗದಂತೆ ಪುರಸಭೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

ಸಂಬಂಧಪಟ್ಟವರೇ ಎಲ್ಲಾ ವಿಷಯಗಳಲ್ಲೂ ಮುನ್ನೆಚ್ಚರಿಕೆಯಿರಲಿ.