
ಹಳಿಯಾಳ :- ತಾಲೂಕಾ ಕೇಂದ್ರವಾಗಿರುವ ಹಳಿಯಾಳ ಪಟ್ಟಣದ ಜನನಿಬಿಡ, ಜನವಸತಿ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ಅಕ್ರಮ ಕಸಾಯಿಖಾನೆ(ಗೋ ವಧಾಲಯ), ಮಾಂಸದಂಗಡಿಗಳನ್ನು ಕೂಡಲೇ ಕೂಡಲೇ ಮುಚ್ಚಲು ಆದೇಶ ಹೊರಡಿಸಬೇಕೆಂದು ಹಳಿಯಾಳ ಬಿಜೆಪಿ ಘಟಕ ಉ.ಕ ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ.
ಪಟ್ಟಣಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ.ಹರೀಶ ಅವರನ್ನು ಬಿಜೆಪಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ನೇತೃತ್ವದಲ್ಲಿ ಹಳಿಯಾಳ ಬಿಜೆಪಿ ನಿಯೋಗ ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಭೇಟಿ ಮಾಡಿ ಪಟ್ಟಣದ ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಲಿಖಿತ ಮನವಿಯ ಮೂಲಕ ಕ್ರಮ ಜರುಗಿಸುವಂತೆ ಆಗ್ರಹಿಸಿದೆ.

ಮನವಿಯಲ್ಲಿ ಹಳಿಯಾಳ ಪಟ್ಟಣದ ಮಧ್ಯ ಭಾಗದಲ್ಲಿ ಅನೇಕ ಪಶು ವಧಾಲಯಗಳು ಮತ್ತು ಮಾಂಸದ ವ್ಯಾಪಾರ ನಡೆಯುತ್ತಿದೆ ಇದು ಜನನಿಬಿಡ ಪ್ರದೇಶದಲ್ಲಿರುವುದರಿಂದ ಇಲ್ಲಿ ಉಂಟಾಗುವ ಅಸ್ವಚ್ಚತೆ ಹಾಗೂ ಪರಿಸರ ಮಾಲಿನ್ಯದ ಬಗ್ಗೆ ಜನರು ರೋಸಿ ಹೋಗಿದ್ದು ಅನೇಕ ಬಾರಿ ಪ್ರತಿಭಟನೆಯೂ ನಡೆದಿದೆ. ಜಿಲ್ಲಾಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಈ ವಧಾಲಯ ಹಾಗೂ ಮಾಂಸದ ಅಂಗಡಿಗಳನ್ನು ತುರ್ತಾಗಿ ಮುಚ್ಚಲು ಆದೇಶ ನೀಡುವ ಮೂಲಕ ಜನರಿಗೆ ಸ್ಪಂದಿಸಬೇಕಿದೆ. ಒಂದು ವೇಳೆ ಈ ವಧಾಲಯಗಳು ಮುಂದುವರೆದರೆ ಸಾರ್ವಜನಿಕರೊಡಗೂಡಿ ಬಿಜೆಪಿಯಿಂದ ಊಗ್ರ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಲಾಗಿದೆ.
ಪಟ್ಟಣದಲ್ಲಿ ಮೀನು ಹಾಗೂ ಮಾಂಸದ ಮಾರುಕಟ್ಟೆ ಇದ್ದರೂ ನಗರದ ಬೀದಿ ಕಾಲನಿ ಹಾಗೂ ಜನನಿಬಿಡ ಪ್ರದೇಶದಲ್ಲಿ ಮೀನು ಮಾಂಸ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದು ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಹಾಗೂ ಹಲವರ ಧಾರ್ಮಿಕ ಭಾವನೆಗೂ ಧಕ್ಕೆ ಉಂಟು ಮಾಡುತ್ತದೆ. ಈ ಬಗ್ಗೆ ಈಗಾಗಲೇ ಹಲವು ಭಾರಿ ಸಾರ್ವಜನಿಕರು ತಕರಾರು ನೀಡಿದರು ಪುರಸಭೆ ಮುಖ್ಯಾಧಿಕಾರಿಗಳು ಜಾಣಕುರುಡ ನೀತಿ ಅನುಸರಿಸುವ ಮೂಲಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
ಇನ್ನೂ ಹಳಿಯಾಳದಲ್ಲಿ 75 ಕೋಟಿರೂ ಅನುದಾನದಲ್ಲಿ ಒಳಚರಂಡಿ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದ್ದು ಈಗಾಗಲೇ ಟೆಂಡರ ಕರೆದು ಗುತ್ತಿಗೆದಾರರನ್ನು ನೇಮಿನಿ ಕಾಮಗಾರಿ ನಡೆಸಲು ಸರ್ವತಯಾರಿ ನಡೆದಿರುತ್ತದೆ. ಹಳಿಯಾಳ ಪಟ್ಟಣವು ಪುರಾತನವಾಗಿದ್ದು ನಗರವು ಯೋಜನಾಬದ್ದವಾಗಿ ರಚಿತವಾಗಿಲ್ಲಾ ಇಲ್ಲಿ ಒಳಚರಂಡಿ ಕಾಮಗಾರಿಯು ಅವಶ್ಯವಿದ್ದರೂ ವಾಸ್ತವಿಕವಾಗಿ ಪಟ್ಟಣ ಪ್ರದೇಶದ ಮೇಲ್ಮೈ ಲೆಕ್ಕಾಚಾರ ನೋಡಿದಲ್ಲಿ ಈ ಒಳಚರಂಡಿ ಕಾಮಗಾರಿಯಿಂದ ಜನರಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚಾಗಿದೆ.

ಅಲ್ಲದೇ ಈ ಕಾಮಗಾರಿಯಿಂದ ಸರ್ಕಾರದ ಹಣವು ಅಪಾರ ಪ್ರಮಾಣದಲ್ಲಿ ಪೋಲಾಗುವುದು ಮತ್ತು ಗುತ್ತಿಗೆದಾರರಿಗೆ, ಮಧ್ಯವರ್ತಿಗಳಿಗೆ ಲಾಭದಾಯಕವಾಗುವುದು. ಈ ಕಾಮಗಾರಿಗೆ ಟೆಂಡರ ಕರೆಯುವ ಪೂರ್ವದಲ್ಲಿ ನೀಲ ನಕ್ಷೆಯನ್ನು ತಯಾರಿಸಿ ಸಾರ್ವಜನಿಕರ ಸಭೆ ನಡೆಸಿ ಅವರ ತಕರಾರು ಅಹವಾಲುಗಳನ್ನು ಆಲಿಸಬೇಕಾಗಿತ್ತು. ಆದರೆ ಇದಾವುದನ್ನು ಮಾಡದೇ ನೇರವಾಗಿ ಟೆಂಡರ ಕರೆದು ಕಾಮಗಾರಿಯನ್ನು ಬಲವಂತವಾಗಿ ಪ್ರಾರಂಭಿಸುವ ಪ್ರಯತ್ನ ನಡೆಯುತ್ತಿವುದಕ್ಕೆ ಖಂಡನೆಯನ್ನು ವ್ಯಕ್ತಪಡಿಸಲಾಗಿದೆ.
ಹಳಿಯಾಳದ ಪುರಸಭಾ ಅಧಿಕಾರಿಗಳು ಹಾಗೂ ಕೆಲವು ಜನ ಪ್ರತಿನಿಧಿಗಳು ತಮ್ಮ ಲಾಭಕ್ಕೋಸ್ಕರ ಜನರ ಕೂಗನ್ನು ಆಲಿಸದೇ, ಅವರ ಸಮಸ್ಯೆಯನ್ನು ಬಗೆಹರಿಸದೇ ಕಾಮಗಾರಿ ಪ್ರಾರಂಭಿಸಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಸಿದ್ದರಾಗಿರುವುದು ಯಾವ ಪುರುಷಾರ್ಥಕ್ಕೆ ಎಂದಿರುವ ಮಾಜಿ ಶಾಸಕ ಸುನೀಲ್ ಹೆಗಡೆ ಈ ಕಾಮಗಾರಿಯನ್ನು ತುರ್ತಾಗಿ ತಡೆ ಹಿಡಿದು ಪ್ರತಿಯೊಂದು ವಾರ್ಡಿನಲ್ಲಿ ಸಾರ್ವಜನಿಕ ಸಭೆ ನಡೆಸಬೇಕು. ನೀಲ ನಕ್ಷೆಯನ್ನು ಸಾರ್ವಜನಿಕರಿಗೆ ತಿಳಿಸಿ ಒಪ್ಪಿಗೆ ಪಡೆದುಕೊಂಡ ಬಳಿಕ ಕಾಮಗಾರಿಯನ್ನು ಪ್ರಾರಂಭಿಸಲು ಆದೇಶ ನೀಡಬೇಕು ಹಾಗೂ ಈ ಕಾಮಗಾರಿಯನ್ನು ನೇರವಾಗಿ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿಯೇ ನಡೆಸಬೇಕು ಎಂದು ಆಗ್ರಹಿಸಿದರು.
Leave a Comment