
ಹಳಿಯಾಳ :- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದ ಶಿವಾಜಿ ಸರ್ಕಾರಿ ಪದವಿ ಪೂರ್ವ ಹಾಗೂ ವಿ.ಡಿ.ಹೆಗಡೆ ಪಿಯು ಕಾಲೇಜಿನ ಕುಸ್ತಿ ಪಟುಗಳು ದಾವಣಗೇರಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪದವಿ ಪೂರ್ವ(ಪಿಯು) ಕಾಲೇಜು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಬಂಗಾರದ ಪದಕಗಳನ್ನು ಬೆಟೆಯಾಡಿದ್ದು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಷ್ಟç ಮಟ್ಟಕ್ಕೆ ಆಯ್ಕೆಯಾಗಿ ಹಳಿಯಾಳದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಪಟ್ಟಣದ ಶಿವಾಜಿ ಪಿಯು ಕಾಲೇಜಿನ ವಿದ್ಯಾರ್ಥಿ ಕುಸ್ತಿ ಪಟುಗಳಾದ ಜ್ಯೋತಿ ಘಾಡಿ, ಲೀನಾ ಸಿದ್ದಿ, ರೋಹಿಣಿ ಪಾಗೋಜಿ, ರಾಮಣ್ಣಾ ಕಲಗುಟಕರ ಹಾಗೂ ವಿ.ಡಿ.ಹೆಗಡೆ ಕಾಲೇಜಿನ ಸುಜಾತಾ ಪಾಟೀಲ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡು ರಾಷ್ಟç ಮಟ್ಟದ ಕುಸ್ತಿ ಪಂದ್ಯಾವಳಿಗೆ ಅರ್ಹತೆ ಪಡೆದಿದ್ದಾರೆ.
ಶಿವಾಜಿ ಕಾಲೇಜಿನ ರೇಷ್ಮಾ ಮುರಗುನಿ ಮತ್ತು ಪ್ರಶಾಂತ ಬನೋಶಿ ಕಂಚಿನ ಪದಕಗಳನ್ನು ಹಾಗೂ ವಿಡಿ ಹೆಗಡೆ ಕಾಲೇಜಿನ ನಿಕಿತಾ ಢೇಪಿ- ಬೆಳ್ಳಿ ಪದಕ ಹಾಗೂ ಮಂಜುನಾಥ ಕೊಲೆಕರ ಕಂಚಿನ ಪದಕ ಗಳಿಸಿದ್ದಾರೆಂದು ವಿದ್ಯಾರ್ಥಿಗಳೊಂದಿಗೆ ದಾವಣಗೇರೆಗೆ ತೆರಳಿದ್ದ ಶಿವಾಜಿ ಕಾಲೇಜಿನ ಪ್ರಾಚಾರ್ಯ ಸತೀಶ ಬಿ ಮಾನೆ ಅವರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಿವಾಜಿ ಕಾಲೇಜಿನ ಸಿಬ್ಬಂದಿ ವರ್ಗ ಮತ್ತು ವಿ.ಡಿ.ಹೆಗಡೆ ಕಾಲೇಜಿನ ಅಧ್ಯಕ್ಷ ವಿ.ಡಿ.ಹೆಗಡೆ ನಿರ್ದೇಶಕರಾದ ಮಾಜಿ ಶಾಸಕರು ಆಗಿರುವ ಸುನೀಲ್ ಹೆಗಡೆ, ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
Leave a Comment