
ಹಳಿಯಾಳ:- ನಗರದ ಸ್ವಚ್ಚತೆ, ಹಂದಿ ಮುಕ್ತ ಹಳಿಯಾಳ, ಅಂತರ್ಜಲ ಶುದ್ದಿಕರಣವಾಗಿ ಕೆರೆಗಳಲ್ಲಿ ನೀರು ಸದಾಕಾಲ ಬಳಕೆಗೆ, ಕೆರೆಗಳ ಸ್ವಚ್ಚತೆಗೆ ಸೇರಿದಂತೆ ಹತ್ತು ಹಲವಾರು ಉತ್ತಮ ಕಾರಣಗಳಿಗಾಗಿ ಒಳಚರಂಡಿ ಯೋಜನೆಯು ಹಳಿಯಾಳ ಪಟ್ಟಣಕ್ಕೆ ತೀರಾ ಅವಶ್ಯಕವಾಗಿದ್ದು ಕೆಲವರ ವಿರೋಧವನ್ನು ಗಮನಕ್ಕೆ ತೆಗೆದುಕೊಳ್ಳದೆ ಕಾಮಗಾರಿಯನ್ನು ಪ್ರಾರಂಭಿಸಿ ಇಲ್ಲವೇ ಪ್ರತಿಭಟನೆ ಎದುರಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಎಚ್ಚರಿಕೆ ನೀಡಿದರು.
ಅವರ ಮುಂದಾಳತ್ವದಲ್ಲಿ ತಾಲೂಕಿನ 16 ಸಂಘಟನೆಯ ಪದಾಧಿಕಾರಿಗಳು ಬುಧವಾರ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಿಂದ ಮೇರವಣಿಗೆ ಮೂಲಕ ಇಲ್ಲಿಯ ಪ್ರಮುಖ ಮಾರುಕಟ್ಟೆ ರಸ್ತೆಗೆ ಆಗಮಿಸಿ ಪಡ್ನಿಸ್ ಸರ್ಕಲ್ ನಲ್ಲಿ ರಸ್ತೆ ಮಧ್ಯೆಯೇ ಒಳಚರಂಡಿ ಯೋಜನೆ ಕುರಿತು ಸಾರ್ವಜನೀಕ ಸಭೆ ನಡೆಸಲಾಯಿತು.

ನಾನು ವಿರೋಧಿಸಿದ್ದು ನೀಜ :-
ಸಾರ್ವಜನೀಕ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್.ಎಲ್.ಘೊಟ್ನೇಕರ ಕೆಲವು ವರ್ಷಗಳ ಹಿಂದೆ ಪಟ್ಟಣಕ್ಕೆ ಒಳಚರಂಡಿ ಯೋಜನೆ ಬಂದಾಗ ನಾನು ವಿರೋಧ ವ್ಯಕ್ತಪಡಿಸಿದ್ದು ನೀಜ ಏಕೆಂದರೇ ಆಗ ಪಟ್ಟಣ ತೀರಾ ಚಿಕ್ಕದಾಗಿತ್ತು. ಆದರೇ ಬಳಿಕ ಸಕ್ಕರೆ ಕಾರ್ಖಾನೆ, ಮಹಾವಿದ್ಯಾಲಯಗಳಿಂದ ಇಂದು ಪಟ್ಟಣ ವೇಗವಾಗಿ ಬೆಳೆಯುತ್ತಿರುವ ಕಾರಣ ಈಗ ಈ ಯೋಜನೆ ಪ್ರಸ್ತುತವಾಗಿದೆ ಎಂದರು.
ಪಟ್ಟಣದ ಹತ್ತಾರು ಸಂಘಟನೆಗಳ ಇಚ್ಚಾಶಕ್ತಿ ಹಾಗೂ ಶ್ರಮದ ಕಾರಣ ಇವತ್ತು ಹಳಿಯಾಳ ಸ್ವಚ್ಚ ಸುಂದರ ಪಟ್ಟಣವಾಗಿದೆ. ಹಳಿಯಾಳ ಪುರಸಭೆ 2 ಬಾರಿ ಸ್ವಚ್ಚತೆಯ ಕುರಿತು ಪ್ರಶಸ್ತಿ ಪಡೆದಿದೆ. ಅಲ್ಲದೇ ಅಭಿವೃದ್ದಿ ಹೊಂದುತ್ತಿರುವ ಪಟ್ಟಣಕ್ಕೆ ಒಳಚರಂಡಿ ಕಾಮಗಾರಿಯ ಅವಶ್ಯಕತೆ ಇದೆ. ಆದರೇ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುವ ಮಾಜಿ ಶಾಸಕ ಸುನೀಲ್ ಹೆಗಡೆ ಈ ಕಾಮಗಾರಿಗೂ ಅಡ್ಡಿ ಪಡಿಸುತ್ತಿದ್ದು ಅಭಿವೃದ್ದಿಯ ಯೋಜನೆಗಳನ್ನು ವಿರೋಧಿಸುವುದೇ ಇವರ ಸಾಧನೆಯಾಗಿದೆ ಎಂದು ಕಿಡಿ ಕಾರಿದರು.
ಬಿಜೆಪಿಯವರು ಮಾಡಿರುವ ಒಂದು ಒಳ್ಳೆಯ ಕೆಲಸ ತೊರಿಸಿಕೊಡಲಿ, ಸುನೀಲ್ ಹೆಗಡೆ ಈ ರೀತಿಯ ಆಕ್ಷೇಪಣೆ ಮಾಡುವುದರ ಹಿಂದಿನ ಗುಟ್ಟೇನು ಎಂಬುದು ಅರಿಯದಾಗಿದೆ ಎಂದ ಅವರು ನಮ್ಮದು ಅಭಿವೃದ್ದಿ ಪರ ನಿಲುವು ಇದ್ದು ಕಳಪೆ ಕಾಮಗಾರಿ ನಡೆಸುವವರ ಬಗ್ಗೆ ನಾವು ಕೂಡ ವಿರೋಧಿಸುತ್ತೇವೆ ಅಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಹೊರತು ಕಾಮಗಾರಿಗೆ ಅಡ್ಡಿಪಡಿಸಬಾರದು ಎಂದು ಅಭಿಪ್ರಾಯಪಟ್ಟರು.

ನಾನು ಬಿಜೆಪಿ-ನನಗೆ ಯೋಜನೆ ಬೇಕು:-
ಬಿಜೆಪಿಯ ರಾಜು ಧೂಳಿ ಮಾತನಾಡಿ ನಾನು ಬಿಜೆಪಿ ಕಾರ್ಯಕರ್ತನಿದ್ದು ಒಳಚರಂಡಿ ಯೋಜನೆಗೆ ನಮ್ಮ ವಿರೋಧವಿಲ್ಲ ಆದರೇ ಮಾಜಿ ಶಾಸಕ ಸುನೀಲ್ ಹೆಗಡೆ ಈ ಯೋಜನೆಯನ್ನು ವಿರೋಧಿಸುತ್ತಿರುವುದರ ಒಳಗುಟ್ಟೇನು ಎಂದು ಪ್ರಶ್ನೀಸಿದರು. ಜನರ ಆಕ್ಷೇಪಣೆ, ಅಹವಾಲು ಕೇಳುವ ಪ್ರಶ್ನೇಯೇ ಇಲ್ಲಿ ಉಧ್ಭವಿಸುವುದಿಲ್ಲ ಎಂದ ಧೂಳಿ ಟೆಬಲ್ ಕೆಳಗೆ ಏನಾದರೂ ಸಿಗುತ್ತೆ ಎಂದು ಅಹವಾಲು ಕೇಳಬೇಕೆ ಎಂದು ಧೂಳಿ ವ್ಯಂಗ್ಯವಾಡಿದರು.
ಪುರಸಭೆ ಕಾಂಗ್ರೇಸ್ ಸದಸ್ಯೆ ಸುವರ್ಣಾ ಮಾದರ, ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ತೆರಗಾಂವನ ಸುರೇಶ ಶಿವಳ್ಳಿ ಮಾತನಾಡಿದರು.

ಮನವಿ ಸಲ್ಲಿಕೆ :-
ಬಳಿಕ ಮೆರವಣಿಗೆ ಮೂಲಕ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಹಳಿಯಾಳ ನಗರ ಅಭಿವೃದ್ದಿ ಪರ ಸಂಘಟನೆಗಳು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು. ಮನವಿಯಲ್ಲಿ ಪಟ್ಟಣದಲ್ಲಿ 76 ಕೋಟಿ ರೂ. ಮೊತ್ತದ ಬಹುಮುಖ್ಯ ಒಳಚರಂಡಿ ಯೋಜನೆಗೆ ಕೆಲವರು ಸ್ವಾರ್ಥ ಕಾರಣಗಳಿಗಾಗಿ ಅಡ್ಡಿ ಪಡಿಸುತ್ತಿದ್ದು, ಸಾರ್ವಜನೀಕ ಹಿತದೃಷ್ಟಿಯಿಂದ ಪಟ್ಟಣಕ್ಕೆ ಅವಶ್ಯಕವಾಗಿ ಬೇಕಾಗಿರುವ ಒಳಚರಂಡಿ ಕಾಮಗಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆದೇಶಿಸಬೇಕೆಂದು ಆಗ್ರಹಿಸಲಾಗಿದೆ.
ಮನವಿಯಲ್ಲಿ ಮಾಜಿ ಸೈನಿಕರ ಸಂಘ, ನಿವೃತ್ತ ನೌಕರರ ಸಂಘ, ಹಿರಿಯ ನಾಗರೀಕರ ತಾಲೂಕಾ ಕ್ಷೇಮಾಭಿವೃದ್ದಿ ಸಂಘ, ಅಂಜುಮನ್ ಇಸ್ಲಾಂ ಸೊಸೈಟಿ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ವಕೀಲರ ಸಂಘ, ಹಳಿಯಾಳ ವ್ಯಾಪಾರಸ್ಥ ಒಕ್ಕೂಟ, ಕರ್ನಾಟಕ ನವ ನಿರ್ಮಾಣ ವೇದಿಕೆ, ಹಳಿಯಾಳ ತಾಲೂಕಾ ಕ್ಷತ್ರೀಯ ಮರಾಠಾ ಪರಿಷತ್, ಕರ್ನಾಟಕ ದ.ಸಂ.ಸ. ಯುವ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಧ್ಯಕ್ಷರು ಲಯನ್ಸ್ ಕ್ಲಬ್ ಹಳಿಯಾಳ ಮತ್ತು ಜೀಜಾ ಮಾತಾ ಮಹಿಳಾ ಸಂಘದವರು ಸೇರಿದಂತೆ 77 ಪ್ರಮುಖರ ಸಹಿಗಳನ್ನು ಮಾಡಿದ ಮನವಿಯನ್ನು ತಹಶೀಲ್ದಾರ್ ಅವರಿಗೆ ಸಲ್ಲಿಸಲಾಗಿದೆ.
ಪ್ರಮುಖರಾದ ಶ್ರೀನಿವಾಸ ಘೊಟ್ನೇಕರ, ಅನಿಲ ಚವ್ವಾಣ, ಬಸವರಾಜ ಬೆಂಡಿಗೇರಿಮಠ, ಯಲ್ಲಪ್ಪಾ ಮಾಲವನಕರ, ಕೃಷ್ಣಾ ಶಹಾಪುರಕರ, ಮಂಗಲಾ ಕಶೀಲಕರ, ಯಲ್ಲಪ್ಪಾ ಸಾಂಬ್ರೇಕರ, ಶಿರಾಜ ಮುನವಳ್ಳಿ, ಎಸ್.ಎ.ಶೆಟವಣ್ಣವರ, ಪ್ರಭಾಕರ ಗಜಾಕೋಶ, ಸುಂದರ ಮಾದರ, ಗುಲಾಬಷಾ ಲತಿಫನವರ, ಟಿಕೆ ಗೌಡಾ ಮೊದಲಾದವರು ಇದ್ದರು.

Leave a Comment