
ಹಳಿಯಾಳ:- ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳು, ಸೇವೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸೌಲಭ್ಯಗಳನ್ನು ನೀಡುವಂತೆ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಇತರೇ ಹಿಂದುಳಿದ ವರ್ಗಗಳ ಜಾತಿಗಳನ್ನು ಹೊರತುಪಡಿಸಿ ಇತರ ಯಾವುದೇ ವರ್ಗಗಳ ಕುಟುಂಬದ ವಾರ್ಷಿಕ ಆದಾಯವು ರೂ.8 ಲಕ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿಗಳಿಗೆ ‘ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ’ ಸೌಲಭ್ಯಗಳನ್ನು ನೀಡಲು ಕೇಂದ್ರ ಸರ್ಕಾರವೂ ಉಲ್ಲೇಖದ ಅಧಿಕೃತ ಜ್ಞಾಪನದಲ್ಲಿ ಆದೇಶಿಸಿರುತ್ತದೆ. ಇಂತಹ ಆರ್ಥಿಕ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರದ ಹುದ್ದೆಗಳು, ಸೇವೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಶೇ.10ರಷ್ಟು ಮೀಸಲಾತಿಯನ್ನು ನೀಡಿರುತ್ತದೆ.

ಇದೇ ಮಾದರಿಯನ್ನು ಅನುಸರಿಸಿ ಅನೇಕ ರಾಜ್ಯಗಳೂ ಸಹ ತಮ್ಮ ತಮ್ಮ ರಾಜ್ಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಮೀಸಲಾತಿಯನ್ನು ನೀಡಿರುತ್ತವೆ. ಅದರಂತೆ ನಮ್ಮ ರಾಜ್ಯದಲ್ಲಿ ಸಹ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸುವ ವಿಧಿ-ವಿಧಾನಗಳ ಬಗ್ಗೆ ವರದಿಯನ್ನು ನೀಡಲು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದ್ದು ಅವರು ಈಗಾಗಲೇ ಒಂದು ವರದಿಯನ್ನು ತಮಗೆ ನೀಡಿರುತ್ತಾರೆಂದು ತಿಳಿದು ಬಂದಿದೆ.
ಈ ಬಗ್ಗೆ ತಾವು ವಿಶೇಷ ಆಸಕ್ತಿ ವಹಿಸಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ/ಪಂಗಡಗಳು ಮತ್ತು ಇತರೇ ಹಿಂದುಳಿದ ವರ್ಗಗಳನ್ನು ಹೊರತು ಪಡಿಸಿ, ಇತರರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸಿ ಅಂತಹ ಬಡ ಜನತೆಗೆ ಉಪಯೋಗ ಮಾಡಿಕೊಡುವಂತೆ ದೇಶಪಾಂಡೆ ಸರ್ಕಾರಕ್ಕೆ ವಿನಂತಿಸಿದ್ದಾರೆ.
Leave a Comment