ಹಳಿಯಾಳ :- ಚಂದ್ರಗ್ರಹಣದ ಬಳಿಕ ಹಳಿಯಾಳದ ಒಳಚರಂಡಿ ಕಾಮಗಾರಿಗೆ ಹಿಡಿದಿದ್ದ ಗ್ರಹಣವು ಬಿಟ್ಟಿದ್ದು ಒಂದೂವರೆ ತಿಂಗಳ ಬಳಿಕ ಪೋಲಿಸ್ ರಕ್ಷಣೆಯಲ್ಲಿ ಶನಿವಾರದಿಂದ ದೇಶಪಾಂಡೆ ಆಶ್ರಯ ನಗರದಿಂದಲೇ ಮತ್ತೇ ಒಳಚರಂಡಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ.
ಸುಮಾರು 76 ಕೋಟಿ ರೂ. ಬೃಹತ್ ಮೊತ್ತದ ಒಳಚರಂಡಿ ಯೋಜನೆಯ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿ ಕಳೆದ ಒಂದೂವರೆ ತಿಂಗಳಿಂದ ಕಾಮಗಾರಿ ಸ್ಥಗೀತಗೊಂಡು ಗ್ರಹಣ ಹಿಡಿದಂತಾಗಿತ್ತು.
ಬೃಹತ್ ಮೊತ್ತದ ಯೋಜನೆಯ ಬಗ್ಗೆ ಸಾರ್ವಜನೀಕರ, ಚುನಾಯಿತ ಜನಪ್ರತಿನಿಧಿಗಳ ಆಕ್ಷೇಪಣೆ-ಅಹವಾಲುಗಳನ್ನು ಆಲಿಸಿಲ್ಲ ಯೋಜನೆಯ ಕುರಿತು ಪಟ್ಟಣದ ನಿವಾಸಿಗಳಿಗೆ ಮಾಹಿತಿ ನೀಡಿಲ್ಲ ಎಂದು ಬಿಜೆಪಿಯವರು ಆರೋಪಿಸಿದ್ದರು. ಅಲ್ಲದೇ ಈ ಬಗ್ಗೆ ಸಭೆ ಕರೆದು ಸಾರ್ವಜನೀಕರ ಅಹವಾಲು-ಆಕ್ಷೇಪಣೆ-ಸಲಹೆ-ಸೂಚನೆ ಪಡೆದು ಕಾಮಗಾರಿ ಪ್ರಾರಂಭಿಸುವಂತೆ ಆಗ್ರಹಿಸಿದ್ದರು. ಅಲ್ಲದೇ ಸ್ಥಳೀಯರೊಂದಿಗೆ ಸೇರಿ ಕಾಮಗಾರಿ ನಡೆಸದಂತೆ ಪ್ರತಿಭಟನೆಯನ್ನು ನಡೆಸಿದ್ದರು ಇದರಿಂದ
ಕಳೆದ ಒಂದೂವರೆ ತಿಂಗಳಿನಿಂದ ಒಳಚರಂಡಿ ಕಾಮಗಾರಿ ಸ್ಥಗೀತಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಇದೆ ದಿ.6 ಸೋಮವಾರದಂದು ಪಟ್ಟಣದ ಬಾಬುಜಗಜೀವನರಾಮ್ ಸಭಾ ಭವನದಲ್ಲಿ ಯುಜಿಡಿ ಕುರಿತು ನಡೆದ ಸಭೆಗೆ ಬೆರಳೆಣಿಕೆಯಷ್ಟು ಜನರು ಆಗಮಿಸಿದ್ದರು. ಅಲ್ಲದೇ ಕಾಮಗಾರಿಯ ಕುರಿತು ಆಕ್ಷೇಪಣೆಯೂ ವ್ಯಕ್ತವಾಗಿತ್ತು.
ಈ ಸಭೆಯಲ್ಲಿ ಹಳಿಯಾಳದಲ್ಲಿ ಯುಜಿಡಿ ಕಾಮಗಾರಿ ಗುತ್ತಿಗೆ ಪಡೆದವರು ಅವರು ಬೈಲಹೊಂಗಲದಲ್ಲಿ ನಡೆಸುತ್ತಿರುವ ಕಾಮಗಾರಿಯನ್ನು ಪರಿಶೀಲಿಸಲು ಹಳಿಯಾಳದಿಂದ ಜನಪ್ರತಿನಿಧಿಗಳು, ಪಟ್ಟಣದ ಪ್ರಮುಖ ಗಣ್ಯರು ಹಾಗೂ ಮಾಧ್ಯಮದವರ ನಿಯೋಗ ಕರೆದುಕೊಂಡು ಹೋಗುವಂತೆ, ಬಡವರ ಮೇಲೆ ಬಿಳುವ ಹೊರೆ ಕಡಿಮೆ ಮಾಡಲು ಪುರಸಭೆ ಸದಸ್ಯರು, ಇನ್ನಿತರ ಜನಪ್ರತನಿಧಿಗಳು ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಗಿತ್ತು.

ಆದರೇ ಇದ್ಯಾವುದು ಆಗದೆ ಶನಿವಾರ ಒಮ್ಮೆಲೆ ಕಾಮಗಾರಿ ಪ್ರಾರಂಭಿಸಿದ್ದರಿಂದ ಇಲ್ಲಿಯ ಬಡಾವಣೆಯ ಜನರು ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ಪ್ರತಿಭಟನೆಯ ವಿಷಯ ತಿಳಿದ ಹಳಿಯಾಳ ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರು ಸ್ಥಳಕ್ಕೆ ಆಗಮಿಸಿ ಸ್ಥಳೀಯರಿಗೆ ಪ್ರತಿಭಟನೆ ನಡೆಸದಂತೆ ಹಾಗೂ ಕಾಮಗಾರಿಗೆ ಅನುವು ಮಾಡಿಕೊಡುವಂತೆ ವಿನಂತಿಸಿದರು. ಆದರೇ ಇದಕ್ಕೆ ಸೊಪ್ಪು ಹಾಕದ ಸ್ಥಳೀಯರು ಕಾಮಗಾರಿಗೆ ಮತ್ತೇ ಅಡ್ಡಪಡಿಸಲು ಮುಂದಾದಾಗ ಬೇಸರಗೊಂಡ ತಹಶೀಲ್ದಾರ್ ಅವರು ಕಾಮಗಾರಿಗೆ ಅಡ್ಡಪಡಿಸುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸರಿಗೆ ಸೂಚಿಸಿದರು.
ಇದಾದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಕಾಯ್ದಿರಿಸಿದ ಪೋಲಿಸ್ ತುಕಡಿ ಹಾಗೂ ಹಳಿಯಾಳ ಪೋಲಿಸರು ಸ್ಥಳದಲ್ಲಿ ಬಿಡು ಬಿಟ್ಟಿದ್ದು ಪೋಲಿಸರ ರಕ್ಷಣೆಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ರಕ್ಷಣೆ ಕೊರಿದ್ದರಿಂದ ಪೋಲಿಸ್ ಇಲಾಖೆಯಿಂದ ರಕ್ಷಣೆ ನೀಡಲಾಗಿದೆ ಎಂದು ಪಿಎಸ್ಐ ಅವರು ಮಾಹಿತಿ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನೀಕರ ಆಕ್ಷೇಪಣೆಗಳನ್ನು ಕೆಳದೆಯೇ ಯೋಜನೆಯ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡದೆ ದಬ್ಬಾಳಿಕೆಯ ಮೂಲಕ ಕಾಮಗಾರಿ ಆರಂಭಿಸಲಾಗಿರುವುದು ಎಷ್ಟು ಸರಿ ಎಂದು ಸ್ಥಳೀಯ ನಿವಾಸಿ ರಾಕೇಶ ಬಾಂದೋಡಕರ ಹಾಗೂ ಹನುಮಂತ ಹರಿಜನ ಇತರರು ಅಸಮಾಧಾನ ವ್ಯಕ್ತಪಡಿಸಿದರು.

Leave a Comment