
ಪ್ರತಿ ವರ್ಷ ನಿಗದಿತ ದಿನಕ್ಕೆ,ಸರಿಯಾದ ಸಮಯಕ್ಕೆ ಜರುಗುವ ಸಂಭ್ರಮವೇ ಸಂಕ್ರಾಂತಿ.ಸೂರ್ಯ ತನ್ನ ಚಲನ ಮಾರ್ಗವನ್ನು ಉತ್ತರಾಯಣದಿಂದ ದಕ್ಷಿಣಾಯನಕ್ಕೆ ಪಥವನ್ನು ಬದಲಾಯಿಸುತ್ತಾನೆ. ಈ ಚಲನೆ ವಿಶ್ವ ಪರಿಸರದ ದಿಕ್ಕನ್ನೇ ಬದಲಾಯಿಸುತ್ತದೆ. ಇದನ್ನು ಭಾರತೀಯರೆಲ್ಲಾ ಸಂಕ್ರಾಂತಿ ಹಬ್ಬವೆಂದು ಆಚರಿಸುತ್ತಾರೆ.
ಸಂಕ್ರಮಣವು ಕೇವಲ ಭೌಗೋಳಿಕ ಬದಲಾವಣೆ ಅಷ್ಟೆ ಅಲ್ಲ.ಪೌರಾಣಿಕ,ಐತಿಹಾಸಿಕ,ಜಾನಪದದ ಹಿನ್ನಲೆಯು ಅಡಗಿದೆ.ಜ್ಯೋತಿಷ್ಯದ ಪ್ರಕಾರ ದಿನಕರನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಸಂಭವಿಸುತ್ತದೆ.ಗ್ರೆಗೋರಿಯನ್ ಪಂಚಾಂಗದ ಪ್ರಕಾರ ಜನವರಿ 13 ರಂದು ರಾತ್ರಿ12 ಗಂಟೆ 57 ನಿಮಿಷಕ್ಕೆ ಮಕರ ರಾಶಿಗೆ ಸೂರ್ಯ ಪ್ರವೇಶಿಸುತ್ತಾನೆ.ಈ ವೇಳೆ ರಾತ್ರಿಯಾಗಿರುವುದರಿಂದ ಮರುದಿನ ಹಬ್ಬವ್ನನು ಆಚರಿಸಲಾಗುತ್ತದೆ.ಗೆಲೆಲಿಯೋ ದೂರದರ್ಶಕವನ್ನು ಕಂಡುಹಿಡಿಯುವ ಮುಂಚೆ,ಉಪಗ್ರಹಗಳು ಭೂಮಿಯಾಚೆ ಹೋಗುವ ಮೊದಲೆ ಭಾರತಿಯರು ಸೂರ್ಯನ ಚಲನೆಯನ್ನು ಗಮನಿಸಿದ್ದರು ಎಂಬುದೆ ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ.

ಮಹಾಭಾರತ ಕಾಲದಲ್ಲಿಯೂ ಉತ್ತರಾಯಣ ಹಾಗೂ ದಕ್ಷಿಣಾಯನದ ಉಲ್ಲೇಖವಿತ್ತು. ಭೀಷ್ಮ ತನ್ನ ಪ್ರಾಣವನ್ನು ಬಿಡಲು ಉತ್ತರಾಯಣವನ್ನ ಆಯ್ಕೆ ಮಾಡಿಕೊಂಡಿದ್ದನು. ಅಂದರೆ ಸಂಕ್ರಮಣದ ಹೆಗ್ಗುರುತು ಪೌರಾಣಿಕ ಕಾಲದಲ್ಲಿಯೂ ಇತ್ತು ಅನ್ನೋದು ಸ್ಪಷ್ಟ. ಸೂರ್ಯ ದಕ್ಷಿಣ ದಿಕ್ಕಿನತ್ತ ಚಲನೆ ನಿಲ್ಲಿಸಿ ಉತ್ತರಕ್ಕೆ ವಾಲುವುದೇ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಬೇಸಿಗೆಯ ಮುನ್ಸೂಚನೆ. ಇದಾದ ಆರು ತಿಂಗಳುಗಳ ನಂತರ ಮತ್ತೆ ದಕ್ಷಿಣಾಯನಕ್ಕೆ ಬರುತ್ತಾನೆ. ಆಗ ಚಳಿಗಾಲ ಆರಂಭವಾಗುತ್ತದೆ.
ಹಿಂದೂಗಳ ಪಾಲಿಗೆ ಸಂಕ್ರಾಂತಿ ಸಡಗರದ ಹಬ್ಬ. ಕೌಟುಂಬಿಕ ಭ್ರಾಂತಿಗಳನ್ನು ದೂರ ಮಾಡಿ ನವಕ್ರಾಂತಿ ತರುವ ಕಾಲ. ಈ ಕಾರಣಕ್ಕಾಗಿಯೇ ಹಳ್ಳ- ಕೊಳ್ಳಗಳ ಬಳಿ ಹೋಗಿ ಪುಣ್ಯಸ್ನಾನ ಮಾಡಿಬರುವ ಆಚರಣೆ ಇದೆ. ಸೂರ್ಯನ ಹಾಗೆಯೇ ಬದುಕಿನ ಚಲನೆಗಳು ಬದಲಾಗಲಿ ಎನ್ನುವುದು ಹಬ್ಬದ ಸಂದೇಶ. ತಮಿಳುನಾಡಿನಲ್ಲಿ ‘ಪೊಂಗಲ್’ ಎಂದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ‘ಮಕರಮಿಳಕ್ಕು’ ಎಂದೂ ಕರೆಯುತ್ತಾರೆ. ಹೀಗೆ, ಸಂಕ್ರಾಂತಿಯ ಧಾರ್ಮಿಕ ಮುಖಗಳೂ ಅನನ್ಯ ಪರಿವರ್ತನೆ ಹೊಂದಿವೆ.

‘ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡೋಣ’ ಎಂದು ಹೇಳಿ ಪರಸ್ಪರ ಎಳ್ಳುಬೆಲ್ಲ ಹಂಚುವುದು ಜನಪದರು ಮಾಡಿಕೊಂಡು ಬಂದ ರೂಢಿ. ಹಳ್ಳಿಗಾಡಿನಲ್ಲಿ ಈ ಪದ್ಧತಿ ಇನ್ನಷ್ಟು ಸಾಧ್ಯತೆಗಳನ್ನು ಕಂಡುಕೊಂಡಿದೆ. ಜಗಳವಾಡಿದ ಬಂಧುಗಳು, ಮುನಿಸಿಕೊಂಡ ದಂಪತಿ, ಬೇರೆಯಾದ ಸ್ನೇಹಿತರನ್ನು ಮಾತನಾಡಿಸಲು ಇದೊಂದು ಸುಸಂದರ್ಭ. ಎಳ್ಳುಬೆಲ್ಲ ಕೊಟ್ಟು ಹಳತನ್ನು ಮರೆತುಬಿಡುವ ಸಂಪ್ರದಾಯ ಶ್ರೇಷ್ಠ ಆಚರಣೆಯೇ ಸರಿ. ಎಳ್ಳು- ಬೆಲ್ಲದ ಮಿಶ್ರಣವು ಶೀತ- ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರ ಮಾಡುವುದು ಎನ್ನುವುದು ನಂಬಿಕೆ. ಈ ಕಾರಣಕ್ಕಾಗಿಯೇ ಹಬ್ಬದಲ್ಲಿ ಎಳ್ಳು-ಬೆಲ್ಲದ ಮಿಶ್ರಣ ಹಂಚುತ್ತಾರೆ ಎಂಬುದು ಇನ್ನೊಂದು ಹೇಳಿಕೆ.
ಗಂಡುಮಕ್ಕಳು ಗಾಳಿಪಟ ಹಾರಿಸುವುದು, ಹೆಣ್ಣುಮಕ್ಕಳು ರಂಗೋಲಿ ಬಿಡುವುದು, ದೊಡ್ಡವರು ತಮ್ಮ ಸಾಕುಪ್ರಾಣಿಗಳನ್ನು ಕಿಚ್ಚಿನ ಮೇಲೆ ಓಡಿಸುವುದು ಎಲ್ಲವೂ ಜನಪದರ ಸಂಸ್ಕೃತಿ. ಆದರೆ ನಮ್ಮ ಆಧುನಿಕತೆಯ ಭರಾಟೆಗೆ ಮೈವೊಡ್ಡಿರುವ ನಾವು ಕೆಲವು ಸಂಪ್ರದಾಯಗಳನ್ನು ಕೊನೆಗಾಣಿಸುತ್ತಿದ್ದೇವೆ. ಸಂಕ್ರಾಂತಿಯ ಈ ಶುಭ ಸಂದರ್ಭದಲ್ಲಿ ಎಳ್ಳು-ಬೆಲ್ಲವನ್ನ ತಿಂದು ಒಳ್ಳೆಯ ಮಾತುಗಳನ್ನ ಆಡೋಣ. ಹಾಗೆ ಈ ಬಾರಿ ಉಂಟಾದ ಅನಾಹುತಗಳು, ಅಡಚಣೆಗಳು,ಅನಾನುಕೂಲಗಳು ಮತ್ತೆ ಬಾರದೆ ಇರಲಿ.ದೇಶ ಹಾಗೂ ರಾಜ್ಯ ಸುಭೀಕ್ಷದಿಂದ ಕೂಡಿರಲಿ. ರೈತರು ತಾವು ಬೆಳೆದ ಪೈರನ್ನು ಕೊಯ್ದು ಪೂಜಿಸುವ ಈ ಕಾಲದಲ್ಲಿ ಎಲ್ಲ ಅನ್ನದಾತರಿಗೂ ಒಳ್ಳೆಯದಾಗಲಿ. ನಮ್ಮ ರಕ್ಷಿಸುತ್ತಿರುವ ಸೂರ್ಯದೇವನ ಕೃಪೆ ನಮ್ಮೆಲ್ಲರ ಮೇಲೆ ಇರಲಿ.

Leave a Comment