ಜೋಯಿಡಾ –
ಗಣರಾಜ್ಯೋತ್ಸವದಂದು ಜೋಯಿಡಾದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ ಮಾಡುತ್ತಿರುವುದು ಸಂತೋಷದ ವಿಷಯ ಎಂದು ಜೋಯಿಡಾ ತಹಶೀಲ್ದಾರ ಸಂಜಯ ಕಾಂಬಳೆ ಹೇಳಿದರು.
ಅವರು ಕಾರ್ಯನಿರತ ಪತ್ರಕರ್ತರ ಸಂಘ ಜೋಯಿಡಾ, ಗೆಳೆಯರ ಬಳಗ ಜೋಯಿಡಾ, ಕನ್ನಡಭಿಮಾನಿ ಬಳಗ ಜೋಯಿಡಾ ಇವರು ಗಣರಾಜ್ಯೋತ್ಸವದ ಅಂಗವಾಗಿ ನಡೆಸಿಕೊಟ್ಟ ಗಣ್ಯರಿಗೆ ಸನ್ಮಾನ ಹಾಗೂ ರಸಮಂಜರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಜೋಯಿಡಾದ ಜನರು ಇಂದು ವಿಶ್ವಕ್ಕೆ ಪರಿಚಯವಾಗಿದ್ದಾರೆ ಅದಕ್ಕೆ ಕಾರಣ ನಮ್ಮ ಸೈನಿಕರು, ಇಂದು ಅವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಜೋಯಿಡಾದ ಜನತೆಗೆ ಸೈನಿಕರ ಮೇಲೆ ಇಟ್ಟ ಅಭಿಮಾನ ಎಂದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ ಮಾತನಾಡಿ ಪತ್ರಕರ್ತರ ಸಂಘದವರು ಜೋಯಿಡಾದ ಸೈನಿಕರನ್ನು ನಮ್ಮೆಲ್ಲರಿಗೆ ಪರಿಚಯಿಸಿದ್ದಾರೆ. ದೇಶ ಸೇವೆ ಮಾಡಿ ದೇಶದ ಒಳಿತಿಗಾಗಿ ಪ್ರಾಣ ತ್ಯಾಗ ಮಾಡಿದ ಅವರನ್ನು ಇಂದು ಸ್ಮರಿಸೋಣ, ಇಲ್ಲಿ ನಾವು ಅವರನ್ನು ಸನ್ಮಾನಿಸಿದರೆ ಅದೂ ಭಾರತದ ಎಲ್ಲಾ ಸೈನಿಕರಿಗೆ ಸನ್ಮಾನಿಸಿದಂತೆ ಎಂದರು.
ಜೋಯಿಡಾ ಗ್ರಾ.ಪಂ,ಉಪಾಧ್ಯಕ್ಷ ಶ್ಯಾಮ ಪೊಕಳೆ ಮಾತನಾಡಿ ಕೆಲ ವರ್ಷಗಳ ಹಿಂದೆ ಗಣರಾಜ್ಯೋತ್ಸದಂದು ನಾಟಕಗಳನ್ನು ಮಾಡುತ್ತಿದ್ದರು, ಅದು ಸ್ಥಗಿತಗೊಂಡ ನಂತರ ಪುನ: ತಾಲೂಕಿನ ಪತ್ರಕರ್ತರು ,ಗೆಳಯರ ಬಳಗದವರು ಸೇರಿ ರಸಮಂಜರಿ, ನೃತ್ಯ ಕಾರ್ಯಕ್ರಮವನ್ನು ಸಂಘಟಿಸುತ್ತಿರುವುದು ಖುಷಿ ತಂದಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಪಾಂಡುರಂಗ ಪಟಗಾರ ಮಾತನಾಡಿದರು,
ವೇದಿಕೆಯಲ್ಲಿ 5 ಜನ ನಿವೃತ್ತ ಸೈನಿಕರಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಸನ್ಮಾನಿತರ ಪರವಾಗಿ ಮಾತನಾಡಿದ ನಿವೃತ್ತ ಸೈನಿಕ ನರೇಂದ್ರ ನಾಯ್ಕ ಹುಡಸಾ ಮಾತನಾಡಿ ಜೋಯಿಡಾ ಹಿಂದುಳಿದ ತಾಲೂಕಾಗಿದ್ದು, ಆದರೆ ಈಗ ಇಲ್ಲಿಯ ಯುವಕರು ಮಿಲಟರಿಗೆ ಸೇರಿ ದೇಶ ಸೇವೆ ಮಾಡುತ್ತಿದ್ದಾರೆ, ಜೋಯಿಡಾದ ಸೈನಿಕರು ಜೋಯಿಡಾ ಎನ್ನುವ ಹೆಸರನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯದ್ದಿದ್ದಾರೆ, ಗಂಡಾಗಲಿ ಹೆಣ್ಣಾಗಲಿ ಜೋಯಿಡಾ ತಾಲೂಕಿನ ಪ್ರತಿ ಮನೆಯಿಂದ ಒಬ್ಬರು ಭಾರತೀಯ ಸೇನೆಗೆ ಸೇರುವಂತಾಗಲಿ ಎಂದರು.
ವೇದಿಕೆಯಲ್ಲಿ ಜಿ.ಪಂ,ಸದಸ್ಯ ರಮೇಶ ನಾಯ್ಕ, ತಾ,ಪಂ,ಸದಸ್ಯ ಅಲ್ಕಂಜಾ ಮಂಥೇರೋ, ಗ್ರಾ,ಪಂ,ಸದಸ್ಯ ಸಂತೋಷ ಮಂಥೇರೋ, ವಿನೋದ ಮಿರಾಶಿ, ದಾಂಡೇಲಿಯ ಪತ್ರಕರ್ತ ಬಿ,ಎನ್,ವಾಸರೆ, ಪಿ,ವಿ,ದೇಸಾಯಿ, ಚಂದ್ರಕಾಂತ ದೇಸಾಯಿ, ಗೆಳಯರ ಬಳಗದ ಅಧ್ಯಕ್ಷ ಗಣೇಶ ಹೆಗಡೆ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಶಾಲಾ ಕಾಲೇಜು ಮಕ್ಕಳಿಂದ ಮನರಂಜನಾ ಕಾರ್ಯಕ್ರಮ , ನಂತರದಲ್ಲಿ ಭಟ್ಕಳ ಝೆಂಕಾರ ಮೆಲೋಡಿಯಸ್ ತಂಡದಿಂದ ರಸಮಂಜರಿ ,ನೃತ್ಯ, ಕಾರ್ಯಕ್ರಮ ನಡೆಯಿತು.
Leave a Comment