
ಶಿರಸಿ (ಬನವಾಸಿ):ಕನ್ನಡದ ಪ್ರಥಮ ರಾಜಧಾನಿ ಬನವಾಸಿಯ ವೈಭವವನ್ನು ವಿಶ್ವಕ್ಕೆ ಪರಿಚಯಿಸುವಂತಹ ಕದಂಬೋತ್ಸವ ಮೆರವಣಿಗೆಯನ್ನು ಕುಂಭ ಹೊರುವುದರ ಮೂಲಕ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ಶನಿವಾರ ಸಂಜೆ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳಿಂದ ಕುಂಭ ಮೇಳ ಹಾಗೂ ಪಥಸಂಚಲನ ಭಾರತ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರದೊಂದಿಗೆ ಆಕರ್ಷಕ ಪಥ ಸಂಚಲನ, ಅತ್ಯಾಕರ್ಶಕ ವಾದ್ಯ ತಂಡಗಳೊಂದಿಗೆ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಮೆರವಣಿಗೆಯು ಮಧುಕೇಶ್ವರ ದೇವಸ್ಥಾನದ ಮುಖ್ಯ ದ್ವಾರದಿಂದ ಪ್ರಾರಂಭಗೊಂಡು ಮಾರಿಹೊಕ್ಕಲು ಮೈದಾನದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಹಳಿಯಾಳ ತಂಡದಿಂದ ಸಿದ್ದರ ಕುಣಿತ, ಯಲ್ಲಾಪುರ ತಂಡದಿಂದ ಗೌಳಿ ನೃತ್ಯ, ಶಿರಸಿ ತಂಡದ ಬೇಡರ ನೃತ್ಯ ಸಿದ್ದಾಪುರ ತಂಡದ ವೀರಗಾಸೆ ದಾಂಡೇಲಿಯ ಲಮಾಣಿ ನೃತ್ಯ, ಹೊನ್ನಾವರದ ಹಗಣ ನೃತ್ಯ, ಗದಗ ಜಿಲ್ಲೆಯ ಜಾನಪದ ಕಲಾಮೇಳ ಸೇರಿದಂತೆ ಇನ್ನಿತರ ಕಲಾ ತಂಡಗಳು ಮೆರವಣಿಗೆಗೆ ಭವ್ಯ ಆಕರ್ಷಣೆ ನೀಡಿದವು.

ಅಂತೆಯೇ ಬನವಾಸಿ ಪ್ರೌಢಶಾಲಾ ಮಕ್ಕಳಿಂದ ಕುಂಭ ಸ್ವಾಗತ, ಕದಂಬಜ್ಯೋತಿ, ಶಿರಸಿಯ ಶಾಸಕರ ಮಾದರಿ ಶಾಲೆಯ ಮಕ್ಕಳ ವಾದ್ಯತಂಡ, ಬನವಾಸಿ ನಾಗಶ್ರಿ ಪ್ರೌಡಶಾಲೆಯಿಂದ ವಾದ್ಯ ತಂಡ, ಬನವಾಸಿಯ ಉರ್ದು ಹಿರಿಯ ಪ್ರಾಥಮಿಕ ಶಾಲೆಯಿಂದ ಸೇವಾದಳ ತಂಡ, ಮಾದರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸೇವಾದಳ ತಂಡ, ಕೀಲು ಕುದುರೆ ವೇಶದಲ್ಲಿ ಆನಂದ್ ನಾಗೇಂದ್ರ ಜೋಗಿ, ಬನವಾಸಿಯ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಿಂದ ಸೇವಾದಳ ತಂಡ, ಅಂಕೋಲಾದ ಸುಗ್ಗಿ ಕುಣಿತ ತಂಡ, ಗುಡ್ನಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಸೇವಾದಳ ತಂಡ, ಬನವಾಸಿ ಸರ್ಕಾರಿ ಪ್ರೌಡಶಾಲೆಯಿಂದ ಸೇವಾದಳ ತಂಡ, ದಾನಯ್ಯ ಮಹಾ ಲಿಂಗಯ್ಯ ಮಠಪತಿರವರ ಕರಡಿ ಮೇಳ, ಬನವಾಸಿಯ ಜಯಂತಿ ಪ್ರೌಡಶಾಲೆಯಿಂದ ಫ್ಲಾಗ್ ತಂಡ,ಶಿರಸಿಯ ಆವೆಮರಿಯಾ ಫ್ರಾಥಮಿಕ ಶಾಲೆಯಿಂದ ವಾದ್ಯ ತಂಡ, ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ರೂಪಕ ಹೀಗೆ ಹಲವಾರು ಶಾಲಾ ಮಕ್ಕಳ ತಂಡ ಜಾನಪದ ಕಲಾವಿದರ ತಂಡ ಮೆರವಣಿಗೆಗೆ ಇನ್ನಷ್ಟು ಮೆರಗು ನೀಡಿದವು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ ಹರೀಶಕುಮಾರ್, ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಮ್. ರೋಶನ್, ಅಪರ ಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೆರ್, ಉಪವಿಭಾಗಾಧಿಕಾರಿ ಈಶ್ವರ್ ಉಳ್ಳಾಗಡ್ಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲಾ ತಾಲೂಕು, ಗ್ರಾಮಪಂಚಾಯತ್ ಅಧ್ಯಕ್ಷರು ಸದಸ್ಯರು ಸೇರಿದಂತೆ ಸ್ಥಳೀಯ ನಾಗರೀಕರು ಭಾಗವಹಿಸಿದ್ದರು.

Leave a Comment