
ಹಳಿಯಾಳ:- ಫೆ.ದಿ.19 ಬುಧವಾರದಂದು ಹಳಿಯಾಳದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದ ಮುನ್ನಾದಿನ ಮಂಗಳವಾರ ಪಟ್ಟಣದಲ್ಲಿ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಸಲಾಯಿತು.
ಸಿಂಹಪಾಲು ಮರಾಠಾ ಸಮುದಾಯ ಹೊಂದಿರುವ ಹಳಿಯಾಳ ಪಟ್ಟಣದ ಮರಾಠಾ ಭವನದಲ್ಲಿ ಮಧ್ಯಾಹ್ನ 12.30 ಗಂಟೆಗೆ ನಡೆಯಲಿರುವ ಜಿಲ್ಲಾ ಮಟ್ಟದ “ಶಿವಾಜಿ ಜಯಂತಿ” ಸರ್ಕಾರಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ 10.30 ಗಂಟೆಗೆ ವಿವಿದೆಡೆಗಳಿಂದ ಆಗಮಿಸಿದ ಕಲಾ ತಂಡಗಳೊಂದಿಗೆ ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.
ಅಲ್ಲದೇ ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ಹಿಂದೂ ಸಂಘಟನೆಗಳಿಂದ ಪಟ್ಟಣದ ವಿವಿಧ ಭಾಗಗಳಲ್ಲಿ ಶಿವಾಜಿ ಜಯಂತಿ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಮರಾಠಾ ಭವನದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಎಪಿಎಮ್ಸಿ ಅಧ್ಯಕ್ಷರು ಆಗಿರುವ ಮರಾಠಾ ಮುಖಂಡ ಶ್ರೀನಿವಾಸ ಘೊಟ್ನೇಕರ ಅವರ ನೇತೃತ್ವದಲ್ಲಿ ಪಟ್ಟಣದಲ್ಲಿ ಕೇಸರಿ ಭಗವಾ ಧ್ವಜಗಳು, ಶಿವಾಜಿ ಮಹಾರಾಜರು, ಭಾರತ ಮಾತೆ, ವೀರ ಪುರುಷರು, ವೀರ ವನಿತೆಯರ ಘೋಷಣೆಗಳೊಂದಿಗೆ ಬೈಕ್ ರ್ಯಾಲಿ ಯಶಸ್ವಿಯಾಗಿ ನಡೆಸಲಾಯಿತು.

ಇಲ್ಲಿಯ ಶ್ರೀ ಗಣೇಶ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಬೈಕ್ ಜಾಥಾ ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿ ಶಿವಾಜಿ ವೃತ್ತಕ್ಕೆ ಆಗಮಿಸಿ ಅಶ್ವಾರೂಢ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಮರಾಠಾ ಭವನಕ್ಕೆ ಆಗಮಿಸಿ ಮುಕ್ತಾಯಗೊಂಡಿತು.
ಬೈಕ್ ಜಾಥಾದಲ್ಲಿ ಪುರಸಭಾ ಸದಸ್ಯರಾದ ಅನಿಲ ಚವ್ವಾಣ, ಯಲ್ಲಪ್ಪಾ ಸಾಂಬ್ರೇಕರ, ನವಿನ ಕಾಟಕರ, ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಮಂಗಲಾ ಕಶೀಲಕರ, ಭಾರತಿ ಬಿರ್ಜೆ ಪ್ರಮುಖರಾದ ಉಮೇಶ ಬೊಳಶೆಟ್ಟಿ, ಪ್ರಸಾದ ಕಮ್ಮಾರ, ನಾಗರಾಜ ಪಾಟೀಲ್, ಯಶವಂತ ಪಟ್ಟೇಕರ, ಸುಂದರ ಮಾದರ ಮೊದಲಾದವರು ಇದ್ದರು.

Leave a Comment