
ಕಾರವಾರ: ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ವೈರಸ್ ಭಾರತಕ್ಕೂ ಕಾಲಿಟ್ಟು ಎಲ್ಲರನ್ನು ಕಂಗೆಡಿಸಿದೆ. ರಾಜ್ಯದಲ್ಲೂ ಕೊರೋನಾ ಭೀತಿ ಎದುರಾಗಿದ್ದು, ಸಾರ್ವಜನಿಕರು ಹೊರಗೆ ಅಡ್ಡಾಡುವುದಕ್ಕೂ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಪ್ರವಾಸೋದ್ಯಮದ ಮೇಲೂ ಕೊರೋನಾ ವೈರಸ್ ಕರಿಛಾಯೆ ಬಿದ್ದಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ಜಿಲ್ಲೆಯ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಾದ ಮುರ್ಡೇಶ್ವರ, ಗೋಕರ್ಣದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದ್ದು, ಪ್ರವಾಸೋದ್ಯಮದ ಮೇಲೆ ‘ಕೊರೋನಾ’ ಪ್ರಭಾವ ಬೀರಿದೆ. ಗೋಕರ್ಣಕ್ಕೆ ವಿದೇಶಿ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಆದರೆ, ಕಳೆದ ಮೂರ್ನಾಲ್ಕು ದಿನಗಳಿಂದ ಭಾರತಕ್ಕೆ ಕೊರೋನಾ ಕಾಲಿಟ್ಟ ಸುದ್ದಿಗಳು ಹೆಚ್ಚು ಹೆಚ್ಚಾಗಿ ಪ್ರಸಾರ ಆಗುತ್ತಿರುವ ಹಿನ್ನಲೆಯಲ್ಲಿ ಪ್ರವಾಸಿಗರು ಪ್ರವಾಸಿ ತಾಣದತ್ತ ಮುಖ ಮಾಡದೇ ಜಾಗೃತೆ ವಹಿಸಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ ಮಾರ್ಚ್ ಹಾಗೂ ಏಪ್ರಿಲ್ ಪ್ರವಾಸಿಗರನ್ನು ಅತಿ ಹೆಚ್ಚಾಗಿ ಆಕರ್ಷಿಸುವ ಸಮಯ. ಆದರೆ, ಈ ಬಾರಿ ಕೊರೋನಾ ಭೀತಿಯಿಂದ ಇದೇ ಸಮಯದಲ್ಲಿ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖವಾದಂತಾಗಿದೆ.

ವ್ಯವಹಾರದ ಮೇಲೆ ಹೊಡೆತ
ಕೊರೋನಾ ಭೀತಿಯಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು ಪ್ರವಾಸಿ ತಾಣಗಳಲ್ಲಿ ವ್ಯಾಪರ ವ್ಯವಹಾರ ಸಹ ಇಳಿಮುಖವಾಗಿದೆ. ಮಾರ್ಚ್, ಏಪ್ರಿಲ್ನಲ್ಲಿ ಹೆಚ್ಚಾಗಿ ಪ್ರವಾಸಿಗರು ಆಗಮಿಸಿ ವೇಳೆ ಸ್ವಲ್ಪ ವ್ಯಾಪಾರ ವ್ಯವಹಾರ ಚನ್ನಾಗಿ ನಡೆದು ಅಂಗಡಿಕಾರರು ಲಾಭ ಗಳಿಸುತ್ತಾರೆ. ಉಳಿದ ದಿನ ಪ್ರವಾಸಿಗರ ಸಂಖ್ಯೆ ಕಡಿಮೆ ಇರೋದರಿಂದ ಲಾಭ ಕಡಿಮೆ ಇರುತ್ತದೆ. ಈ ಭಾರಿ ಪ್ರವಾಸಿಗರ ಸಂಖ್ಯೆ ಹೆಚ್ಚು ಆಗಮಿಸುವ ವೇಳೆಯೇ ಕೊರೋನಾ ಭೀತಿ ಲಾಭವನ್ನ ಗಳಿಸಬೇಕು ಎಂದು ಬಯಸಿದ್ದ ಅಂಗಡಿಕಾರರಿಗೆ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ.
ಮಂಗನ ಕಾಯಿಲೆ ಭೀತಿ ಒಂದೆಡೆ ಕೊರೋನಾ ಭೀತಿಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖ ಕಂಡಿದ್ದರೆ, ಮತ್ತೊಂದೆಡೆ ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ ಎದುರಾಗಿದೆ. ಹೀಗಾಗಿ ಜಿಲ್ಲೆಯ ಕರಾವಳಿ ಪ್ರವಾಸಿ ತಾಣಗಳಲ್ಲಷ್ಟೇ ಅಲ್ಲದೇ, ಮಲೆನಾಡಿಗೂ ಪ್ರವಾಸಿಗರು ಭೇಟಿ ನೀಡಲು ಭಯ ಬೀಳುವಂಥ ಪರಿಸ್ಥಿತಿ ಸದ್ಯ ಉದ್ಭವವಾಗಿದೆ.

ಪ್ರವಾಸಿಗರ ಮಾಹಿತಿ ಸಂಗ್ರಹ
ಜಿಲ್ಲೆಯ ಮುಂಡಗೋಡ ಹಾಗೂ ಗೋಕರ್ಣವನ್ನು ಕ್ಲಸ್ಟರ್ ಎಂದು ಆರೋಗ್ಯ ಇಲಾಖೆಯಿಂದ ಗುರುತಿಸಲಾಗಿದ್ದು, ಇಲ್ಲಿ ಪ್ರವಾಸಕ್ಕೆ ಬಂದಿರುವ ವಿದೇಶಿ ಪ್ರವಾಸಿಗರ ಮಾಹಿತಿ ಹಾಗೂ ಕೊರೋನಾ ವೈರಸ್ ಲಕ್ಷಣದ ಕುರಿತು ಸಮೀಕ್ಷೆ ನಡೆಸುವ ಸಲುವಾಗಿ ಎಲ್ಲಾ ರೆಸಾರ್ಟ್ ಮತ್ತು ಲಾಡ್ಜ್ ಗಳಿಗೆ ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯಿಂದ ಗೋಕರ್ಣದಲ್ಲಿ 37 ತಂಡಗಳನ್ನು ರಚಿಸಲಾಗಿದ್ದು, ಮುಂಡಗೋಡದಲ್ಲಿ 13 ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಗೋಕರ್ಣ, ಮುಂಡಗೋಡ ಸುತ್ತಮುತ್ತಲಿನಲ್ಲಿ ವಾಸ ಹೂಡಿರುವ ವಿದೇಶಿ ಪ್ರವಾಸಿಗರ ಮಾಹಿತಿಗಳನ್ನು ಸಂಗ್ರಹಿಸಿದರು. ವಿವಿಧ ಪ್ರದೇಶದಲ್ಲಿ ತಂಗಿರುವ ಪ್ರವಾಸಿಗರನ್ನು ಭೇಟಿಯಾಗಿ, ಮಾಹಿತಿಗಳನ್ನು ಕಲೆ ಹಾಕಿದೆ.
ಭಯವಿಲ್ಲದೇ ಜಿಲ್ಲೆಗೆ ಬನ್ನಿ
ಉತ್ತರ ಕನ್ನಡ ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಯಾವುದೇ ಭಯ ಬೇಡ. ಜಿಲ್ಲಾಡಳಿತ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ನಿರ್ಭೀತರಾಗಿ ಜಿಲ್ಲೆಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದ್ದಾರೆ.


Leave a Comment