
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿದೆ. ಜಿಲ್ಲೆ ಭೌಗೋಳಿಕವಾಗಿ ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆ ಪ್ರದೇಶ ಹೊಂದಿದೆ. ಯಾವುದೇ ಪ್ರದೇಶ ಅಭಿವೃದ್ಧಿ ಯಾಗಬೇಕೆಂದರೆ ಮೂಲಭೂತ ಸೌಲಭ್ಯಗಳಾದ ಸಾರಿಗೆ ವ್ಯವಸ್ಥೆ, ಜಲ ಸಂಪನ್ಮೂಲ , ವಿದ್ಯುತ್, ವೈದ್ಯಕೀಯ ಸೌಲಭ್ಯ, ಶಿಕ್ಷಣ ಸೌಲಭ್ಯ ಕೊರತೆ ಇರಬಾರದು. ಇವುಗಳು ಒಂದಕ್ಕೊಂದು ಅವಲಂಭಿಸಿವೆ. ಹೀಗಿರುವಾಗ ಜಿಲ್ಲೆಗೆ ಯಾವುದೇ ಕೈಗಾರಿಕೆಗಳು ಹಾಗೂ ಅಭಿವೃದ್ಧಿಗೆ ಪೂರಕ ಯೋಜನೆಗಳು ಬಂದರೂ ಪರಿಸರವಾದಿಗಳಿಂದ ಕಾರ್ಯಗತವಾಗುತ್ತಿಲ್ಲ.
ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ , ಕುಮಟಾ-ಶಿರಸಿ ರಸ್ತೆ ಕಾಮಗಾರಿ, ತದಡಿ ಬಂದರು ನಿರ್ಮಾಣ ಇಂತಹ ಹಲವಾರು ಜನಪರ ಯೋಜನೆಗಳು ಕೇವಲ ಡೊಂಗಿ ಪರಿಸರವಾದಿಗಳ ಕೈವಾಡದಿಂದ ನೆನೆಗುದಿಗೆ ಬಿದ್ದಿರುತ್ತದೆ. ಜಿಲ್ಲೆಯ ಅಕ್ಕ ಪಕ್ಕದ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಹಾಗೂ ಹುಬ್ಬಳ್ಳಿ – ಧಾರವಾಡದಲ್ಲಿ ಅಭಿವೃದ್ಧಿ ಯೋಜನೆಗಳು ಬರುತ್ತವೆ ಹಾಗೂ ಕಾರ್ಯಗತವಾಗುತ್ತದೆ. ಅಲ್ಲಿಯೂ ಅರಣ್ಯ ಪ್ರದೇಶವಿದೆ. ಆದರೆ ನಮ್ಮ ಜಿಲ್ಲೆ ಹಿಂದಿನಿಂದಲೂ ಯಾವುದೇ ಅಭಿವೃದ್ಧಿ ಕಾರ್ಯಗಳಾಗುವುದಿಲ್ಲ.ಜಿಲ್ಲೆಯಲ್ಲಿ ವಿದ್ಯಾವಂತ ಯುವಕ ಯುವತಿಯರು ಉದ್ಯೋಗ ನಿಮಿತ್ತ ಬೇರೆ ಜಿಲ್ಲೆಗೆ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಪ್ರವಾಸೋದ್ಯಮ, ಆಟೊಮೊಬೈಲ್ ಉದ್ಯಮ ಹಾಗೂ ಐ ಟಿ ಮತ್ತು ಬಿ ಟಿ. ಉದ್ಯಮವನ್ನು ಬೆಳೆಸಬಹುದು. ರೈಲ್ವೆ ಮಾರ್ಗ ಉದ್ಯಮಕ್ಕೆ ಪೂರಕವಾದ ಯೋಜನೆಯಾಗಿರುತ್ತದೆ. ಯಾವುದೇ ಯೋಜನೆಯಿಂದ ಅರಣ್ಯ ನಾಶವಾಗಬಾರದಾದರೂ ಜಿಲ್ಲೆಯ ಹೆಚ್ಚಿನ ಭಾಗ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶವಾಗಿದೆ. ಅರಣ್ಯ ನಾಶ ತಪ್ಪಿಸಬೇಕೆಂದರೆ ಪರ್ಯಾಯ ಸ್ಥಳಗಳಲ್ಲಿ ಅರಣ್ಯ ಬೆಳೆಸಬೇಕು.

ಜಿಲ್ಲೆಯ ಪರಿಸರದ ಬಗ್ಗೆ ಸಮಸ್ತ ಜಿಲ್ಲೆಯ ಜನರಿಗೂ ಕಾಳಜಿ ಇದೆ. ಕೇವಲ ಯೋಜನೆಗಳು ಬರುವುದರಿಂದ ಪರಿಸರಕ್ಕೆ ಹಾನಿಯಾಗುವುದಿಲ್ಲ. ನದಿ ಪಾತ್ರದ ಜನ ನದಿಯಲ್ಲಿ ಮಣ್ಣು ತುಂಬಿಸುವುದರಿಂದ, ಎಗ್ಗಿಲ್ಲದೇ ಸಾಗುವ ಮರಗಳ ಕಳ್ಳ ಸಾಗಾಣೆ, ನದಿಪಾತ್ರದಲ್ಲಿ ಮರಳಿಗಾಗಿ ಅಗೆಯುವುದರಿಂದ ಹಿಡಿದು ನಾನಾ ತರಹದಿಂತ ಪರಿಸರಕ್ಕೆ ಹಾನಿಯಾಗುತ್ತದೆ. ಆದರೆ ಈ ಬಗ್ಗೆ ಚಕಾರವೆತ್ತದ ಪರಿಸರವಾದಿಗಳು ಸರ್ಕಾರದಿಂದ ಜಿಲ್ಲೆಯ ಸಮಸ್ತ ಜನರಿಗೆ ಅನಕೂಲವಾಗುವ ಯೋಜನೆಗಳನ್ನು ಅರಣ್ಯನಾಶವೆಂದು ವಿರೋಧಿಸುತ್ತಾರೆ. ಆದರೆ ಇವರು ಇಷ್ಟೆಲ್ಲ ವರ್ಷಗಳಿಂದ ಎಷ್ಟು ಅರಣ್ಯ ಬೆಳೆಸಿದ್ದಾರೆ. ಅರಣ್ಯ ನಾಶವಾಗುವುದು ತಪ್ಪಿಸಬೇಕಿದ್ದರೆ ಅದಕ್ಕೆ ಪೂರಕವಾಗಿ ಖಾಲಿ ಬಿದ್ದಿರುವ ಭೂಮಿಯಲ್ಲಿ ಗಿಡ ಮರಗಳನ್ನು ನೆಟ್ಟು ಬೆಳೆಸ ಬಹುದು. ಆದರೆ ಇದರ ಕುರಿತು ಯಾವುದೇ ಆಸಕ್ತಿ ನಮ್ಮ ಜಿಲ್ಲೆಯ ಅಭಿವೃದ್ಧಿಗೆ ತೊಡರುಗಾಲಾಗಿರುವ ಡೊಂಗಿ ಪರಿಸರವಾದಿಗಳಿಗೆ ಇಲ್ಲವೇಕೆ? ಇದು ಹಿಗೆಯೇ ಮುಂದುವರಿಯುವುದು ಜಿಲ್ಲೆಯ ಜನರ ಭವಿಷ್ಯದ ದೃಷ್ಟಿಯಿಂದ ಸರಿಯಲ್ಲ. ಇನ್ನಾದರೂ ಸಮಸ್ತ ಜಿಲ್ಲೆಯ ಜನ ಬೆರಳೆಣಿಕೆಯ ಡೊಂಗಿ ಪರಿಸರವಾದಿಳನ್ನು ಬದಿಗಿಟ್ಟು ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟಕ್ಕೆ ಸಜ್ಜಾಗಬೇಕು. ಇಲ್ಲದಿದ್ದರೆ ನಮ್ಮ ಮುಂದಿನ ಜನಾಂಗ ನಮ್ಮನ್ನು ಸದಾ ಶಪಿಸುವಂತಾಗಬಹುದು. ಎಂದು ಕರ್ನಾಟಕ ರಕ್ಷಣಾವೇದಿಕೆ ಪ್ರವೀಣ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಉದಯರಾಜ ಮೇಸ್ತ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿಕೆ ನೀಡಿದ್ದಾರೆ .

Leave a Comment