
ಹೊನ್ನಾವರ: ರಾಜ್ಯದೆಲ್ಲೆಡೆ ಕೊರೋನಾ ವೈರಸ್ ಮಹಾಮಾರಿ ಕುರಿತು ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವ ಕಾರ್ಯ ಆರೋಗ್ಯ ಇಲಾಖೆಯಿಂದ ನಡೆಯುತಿದ್ದು ತಾಲೂಕಿನಲ್ಲಿಯೂ ಅಗತ್ಯ ಮುಂಜಾಗ್ರತಾ ಕ್ರಮ ನಡೆಯುತ್ತಿದೆ.
ನೋವೆಲ್ ಕೊರೋನಾ ವೈರಸ್ ಎಂಬುವುದು ಕೊರೋನಾ ವೈರಸ್‍ನ ಹೊಸ ಪ್ರಬೇಧವಾಗಿದ್ದು, ಮನುಷ್ಯರಲ್ಲಿ ಮತ್ತು ಪ್ರಾಣಿಗಳಲ್ಲಿ ಅನಾರೋಗ್ಯವನ್ನು ಉಂಟು ಮಾಡುತ್ತದೆ. ಈ ರೋಗಕ್ಕೆ ಯಾವುದೇ ನಿಖರವಾದ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿಲ್ಲ. ಲಕ್ಷಣ ಆಧಾರಿತ ಚಿಕಿತ್ಸೆ ಮೂಲಕ ಸೋಂಕು ಗುಣಪಡಿಸಬಹುದಾದರೂ ಸೂಕ್ತ ಮುಂಜಾಗ್ರತೆ ವಹಿಸುವುದು ಸೂಕ್ತ ಎನ್ನುವುದು ಆರೋಗ್ಯಾಧಿಕಾರಿಗಳು ನೀಡುವ ಮಾಹಿತಿಯಾಗಿದೆ.
ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆದ್ದರಿಂದ ಕೆಮ್ಮುವಾಗ, ಸೀನುವಾಗ ಕರವಸ್ತ್ರ ಬಳಸಬೇಕು. ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು. ವ್ಯಯಕ್ತಿಕ ಮತ್ತು ಸಾಮೂಹಿಕ ನೈರ್ಮಲ್ಯ ಕಾಪಾಡಬೇಕು. ಅನಾರೋಗ್ಯದ ಲಕ್ಷಣವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು. ಬೇಯಿಸದ ಮೊಟ್ಟೆ, ಮಾಂಸ ಸೇವನೆ ಮಾಡಬಾರದು. ಬಾಯಿಯನ್ನು ಒಣಗಲು ಬಿಡದೇ ಸುರಕ್ಷಿತ ನೀರನ್ನು ಕುಡಿಯಬೇಕು. ಲಕ್ಷಣಗಳು ಕಂಡುಬಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬೇಕು. ಕೋರೋನಾ ವೈರಸ್ ಬಗ್ಗೆ ಭಯ ಬೇಡ, ಎಚ್ಚರ ಇರಲಿ ಎಂದು ಭಿತ್ತಿಪತ್ರಗಳ, ಧ್ವನಿವರ್ಧಕಗಳ ಮೂಲಕ ಜನಜಾಗೃತಿ ನಡೆಯುತ್ತಿದೆ. ಹೊನ್ನಾವರ ತಾಲೂಕಾ ಬಸ್ ನಿಲ್ದಾಣದಲ್ಲಿ ಸೊಂಕು ತಪಾಸಣಾ ಪ್ರಾಥಮಿಕ ಕ್ರಮವಾಗಿ ಉಪಕರಣಗಳ ಮೂಲಕ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ಶಂಕಿತ ಪ್ರಕರಣಗಳು ಪತ್ತೆಯಾದಲ್ಲಿ ವ್ಯಕ್ತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದು ಮುಂದಿನ ಹಂತದ ಕ್ರಮ ವಹಿಸಲಾಗುತ್ತದೆ ಎಂದು ಇಲಾಖಾ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಸುಳ್ಳು ವದಂತಿ ಹಬ್ಬಿಸುವವರ ವಿರುದ್ದ ಕಾನೂನು ಕ್ರಮ : ಹೊನ್ನಾವರದಲ್ಲಿ ಕರೋನಾ ಬಂದಿದೆ ಎಂದು ಸುಳ್ಳು ವದಂತಿ ಹಬ್ಬಿಸಿ ಸಾರ್ವಜನಿಕರಿಗೆ ಭಯ ಮೂಡಿಸಲು ಮುಂದಾದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಧಿಕಾರಿ ಡಾ.ರಾಜೇಶ ಕಿಣಿ ಮಾಹಿತಿ ನೀಡಿದ್ದಾರೆ. ಕೊರೋನಾ ಬಗ್ಗೆ ಹಲವು ಅಪ್ರಪಚಾರ ಮೂಡಿಸಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಕಾರ್ಯ ಹೊನ್ನಾವರದಲ್ಲೂ ನಡೆಯುತ್ತಿದೆ. ತಾಲೂಕಿನ ಗೇರುಸೊಪ್ಪಾ ಭಾಗದಲ್ಲಿ ಕರೋನಾ ಬಂದಿದೆ, ತಾಲೂಕಿನ ಆರೊಗ್ಯಧಿಕಾರಿಗಳೆ ಬಂದಿದ್ದಾರೆ ಎನ್ನುವ ಸಂದೇಶವನ್ನು ಸೊಶಿಯಲ್ ಮೀಡಿಯಾ ಮೂಲಕ ಹರಿಬಿಟ್ಟಿದ್ದು ಇದು ಶುದ್ದ ಸುಳ್ಳು ಎಂದು ಡಾ. ರಾಜೇಶ ಕಿಣಿಯವರೆ ಸ್ಪಷ್ಟಪಡಿಸಿದ್ದಾರೆ.ಅಲ್ಲದೇ ಇಂತಹ ಸುಳ್ಳು ಸಂದೇಶ ಫಾರ್ವಡ್ ಮಾಡುವವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Leave a Comment