
ಹಳಿಯಾಳ:- ದಶಕಗಳಿಂದ ಹಳಿಯಾಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ರಮ ಕಸಾಯಿಖಾನೆಯನ್ನು ಶೀಘ್ರವೆ ತೆರವುಗೊಳಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಯವರು, ಸಾರ್ಜಜನಿಕರು ತಾಲೂಕಾಡಳಿತ ಹಾಗೂ ಪುರಸಭೆಗೆ ಲಿಖಿತ ಮನವಿ ಸಲ್ಲಿಸಿದರು.
ಪಟ್ಟಣದ ಕಸಾಯಿಖಾನೆ ಬಾಧಿತ ಪ್ರದೇಶದ ಮೇದಾರಗಲ್ಲಿಯ ಜನತೆ, ಕರ್ನಾಟಕ ರಕ್ಷಣಾ ವೇದಿಕೆ, ವಿಶ್ವ ಹಿಂದೂ ಪರಿಷದ್ ಭಜರಂಗದಳ, ಮೇದಾರ ಸಮಾಜ, ಗೊಂಧಳಿ ಸಮಾಜ ಸೇರಿದಂತೆ ಅನೇಕರು ಇಲ್ಲಿಯ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ ವಿದ್ಯಾಧರ ಗುಳೆಗುಳೆ ಅವರಿಗೆ ಬಳಿಕ ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಹಾಗೂ ಹಳಿಯಾಳ ಕ್ರೈಂ ಪಿಎಸ್ಐ ರಾಜಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಕೊರೊನಾ(ಕೋವಿಡ್-19) ಮಾರಕ ಸಾಂಕ್ರಾಮಿಕ ರೋಗ ಸೇರಿದಂತೆ ಮಲೆರಿಯಾ, ಕಾಲರಾ, ಡೆಂಗ್ಯೂ, ಚಿಕನ್ ಗುನ್ಯಾ, ಹಂದಿಜ್ವರ ಸೇರಿದಂತೆ ಸಾಕಷ್ಟು ಸಾಂಕ್ರಾಮಿಕ ರೋಗಗಳು ಹರಡುತ್ತಿರುವುದು ಕೇಳಿ ಬರುತ್ತಿದೆ. ಆದರೇ ರೋಗರುಜಿನಗಳ ಹರಡುವ ತಾಣವಾಗಿರುವ ಅನಧಿಕೃತ ಕಸಾಯಿಖಾನೆ ಮಾತ್ರ ತನ್ನ ಕಾರ್ಯವನ್ನು ಯಾವುದೇ ಆತಂಕವಿಲ್ಲದೇ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಕಲ್ಮಶ, ಗಬ್ಬು ದುರ್ವಾಸನೆಯ ಬಿಡಾಗಿರುವ ಇಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಇಲ್ಲಿಯ ಸುತ್ತಮುತ್ತಲ ಪರಿಸರದಲ್ಲಿ ವಾಸಿಸುವುದೇ ಕಷ್ಟವಾಗಿದೆ ಎಂದಿರುವ ಜನತೆ ಈ ಬಗ್ಗೆ ಹಿಂದೆಯೂ ಹತ್ತಾರು ಬಾರಿ ಪ್ರತಿಭಟನೆಗಳನ್ನು ಮಾಡಿ ಲಿಖಿತ ಮನವಿಗಳನ್ನು ಸಲ್ಲಿಸಲಾಗಿದೆ. ಆದರೂ ಕೂಡ ಈವರೆಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ ಎಂಬುದು ತೀರಾ ಬೇಸರವನ್ನುಂಟು ಮಾಡಿದೆ ಎಂದಿದ್ದಾರೆ.

ಈಗಲಾದರೂ ಈ ಅಕ್ರಮ ಕಸಾಯಿಖಾನೆಯನ್ನು ತೆರವುಗೊಳಿಸಿ ಇಲ್ಲಿ ಸ್ವಚ್ಚತೆಯನ್ನು ಕಾಪಡುವಲ್ಲಿ ಪುರಸಭೆ ಮುಂದಾಗಬೇಕು. ಒಂದಾನುವೇಳೆ ಈಗಲೂ ಕಸಾಯಿಖಾನೆ ತೆರವುಗೊಳಿಸದೆ ಇದ್ದರೆ ಹಾಗೂ ಈ ಭಾಗದಲ್ಲಿ ಯಾರಿಗಾದರು ಸಾಂಕ್ರಾಮಿಕ ರೋಗ ತಗುಲಿ ಪ್ರಾಣಕ್ಕೆ ಸಮಸ್ಯೆಯಾದರೇ ಸಂಬಂಧಪಟ್ಟ ಇಲಾಖೆಯವರೇ ನೇರ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಲಾಗಿದೆ.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಕೊಂಚ ಸಿಟ್ಟಿನಿಂದಲೇ ಕಸಾಯಿ ಖಾನೆ ನಡೆಸುವವರದ್ದು ದಂಧೆಯಾಗಿದೆ ಅವರು ಹೊಟ್ಟೆಪಾಡಿಗಾಗಿ ದುಡಿಯುತ್ತಾರೆ. ಅಲ್ಲಿ ಪರಿಶೀಲನೆ ಮಾಡುತ್ತೇವೆ ಸ್ವಚ್ಚತೆಯನ್ನು ಕಾಪಾಡಲು ಆದೇಶಿಸುತ್ತೇವೆ. ಅಲ್ಲಿ ತಪ್ಪು ನಡೆಯುತ್ತಿದ್ದರೇ ಕ್ರಮ ಜರುಗಿಸುತ್ತೇವೆ ಎಂದು ಕೋಪದಲ್ಲೇ ಹೇಳಿದ ಅವರು ಮುಂದಿನ 2-3 ದಿನಗಳಲ್ಲಿ ಪುರಸಭೆ ಅಧಿಕಾರಿಯೊಂದಿಗೆ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಮಾತನಾಡಿ ಕಸಾಯಿಖಾನೆಯನ್ನು ನೂತನ ಕಾರಾಗೃಹದ ಬಳಿ ಈಗಾಗಲೇ ಗುರುತಿಸಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು. ಇವರ ಸ್ಥಳಾಂತರ ಆಗುವವರೆಗೆ ಅಲ್ಲಿಯೇ ಕಸಾಯಿಖಾನೆ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಈ ಪ್ರದೇದ ರಹವಾಸಿ ಚಂದ್ರಕಾಂತ ದುರ್ವೆ ಮಾಧ್ಯಮದವರೊಂದಿಗೆ ಮಾತನಾಡಿ ನಮ್ಮ ಮನೆ ಹಾಗೂ ಅಕ್ಕಪಕ್ಕದ ಮನೆಯವರೆಲ್ಲ ಈ ಕಸಾಯಿಖಾನೆಯಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಮನೆಯಲ್ಲಿ ಎಲ್ಲರು ಸಾಕಷ್ಟು ಅಲರ್ಜಿ, ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ನೂರಾರು ಬಾರಿ ಮನವಿ ಸಲ್ಲಿಸುವುದೇ ಆಗಿದೆ ಆದರೇ ಕ್ರಮಗಳೇನು ಈವರೆಗೆ ಆಗಿಲ್ಲ ಎಂದ ದುರ್ವೆ ಆಸ್ಪತ್ರೆ ಅಲೆದಾಟದ ದಾಖಲೆ ನೀಡುವುದಾಗಿ ಹೇಳಿದರು.
ಮನವಿ ಸಲ್ಲಿಸುವಾಗ ಭಜರಂಗದಳ ಅಧ್ಯಕ್ಷ ಸರ್ವೇಶ ಕಾಂಡೊಳಕರ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಚಂದ್ರಕಾಂತ ಗೊಂಧಳಿ, ಪ್ರಮುಖರಾದ ಶಿವರಾಯಪ್ಪ ನೆಸರಗಿ, ಪರಶುರಾಮ ಶಾಪುರಕರ, ಚೆನ್ನಪ್ಪಾ ಮಡ್ಡಿ, ಅಶೋಕ ಮಡ್ಡಿ, ವಿಶ್ವನಾಥ ಬುದಪ್ಪನವರ, ವಿನಾಯಕ ಮಡ್ಡಿ, ಸರೊಜಾ, ರೇಣುಕಾ ಬುದಪ್ಪನವರ, ಯಲ್ಲವ್ವಾ ಮೇದಾರ ಮೊದಲಾದವರು ಇದ್ದರು.

Leave a Comment