
ಹಳಿಯಾಳ :- ವೈಶ್ಯ ಸಮಾಜದ ಕುಲಗುರು ಶ್ರೀಹಳದಿಪುರ ಶಾಂತಾಶ್ರಮದ ಮಠಾಧೀಶರಾದ ಶ್ರೀ ವಾಮನಾಶ್ರಮ ಮಹಾಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ವರ್ಧಂತಿ ಮಹೋತ್ಸವ ಕಾರ್ಯಕ್ರಮ ಹಳಿಯಾಳದಲ್ಲಿ ನೆರವೆರಿತು.
ಈ ಪಟ್ಟಾಭೀಷೇಕ ಕಾರ್ಯಕ್ರಮದಲ್ಲಿ ಲೋಕ ಕಲ್ಯಾಣಕ್ಕಾಗಿ ಸಹಸ್ರಮೋದಕ ಮಹಾಗಣಪತಿ ಹೋಮ, ಗಾಯತ್ರಿ ಹಾಗೂ ಚಂಡಿಕಾದೇವಿ ಹೋಮ, ಯಾಗವನ್ನು ನಡೆಸಲಾಯಿತು.
ಬಳಿಕ ನಡೆದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀ ವಾಮನಾಶ್ರಮ ಮಹಾಸ್ವಾಮೀಜಿಯವರು ಒಳ್ಳೆಯ ಮಾತುಗಳನ್ನಾಡುವ ರೂಢಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಮಾನವನಲ್ಲಿ ಜ್ಞಾನ-ಧರ್ಮದ ಗುಣವಿರಬೇಕು. ನಾವು ಎಷ್ಟೇ ಬಡವ ಶ್ರೀಮಂತರಿದ್ದರು ನಮ್ಮ ಜೀವನ ಸುಃಖ-ದುಃಖದಿಂದ ಸಾಗುತ್ತಿರುತ್ತದೆ. ಗುರುಗಳಿಂದ ಆಧ್ಯಾತ್ಮಿಕ ಜ್ಞಾನದ ಜೊತೆಗೆ ಪೂರ್ಣಜ್ಞಾನ ದೊರಕುತ್ತದೆ ಎಂದರು.
ಮಹಾಮಾರಿ ರೋಗಗಳಿಂದ ಇಂದು ಜಗತ್ತು ಹಾಗೂ ಭಾರತ ದೇಶ ತಲ್ಲಣಿಸುತ್ತಿದೆ. ಭಯಾನಕ ರೋಗದ ಮುಕ್ತಿಗೆ ವ್ಯವಹಾರಿಕ ಜಾಗೃತೆ, ಮುನ್ನೆಚ್ಚರಿಕೆ ಮುಖ್ಯವಾಗಿದ್ದು ಯಜ್ಞ-ಯಾಗಾದಿ, ಹೋಮ-ಹವನಗಳಿಂದ ಪೂರ್ಣವಾದ ಆರೋಗ್ಯ ಹಾಗೂ ಆಯುಷ್ಯದಿಂದ ಬಾಳಲು ಸಾಧ್ಯ ಎಂದು ಹಳದಿಪುರ ಶಾಂತಾಶ್ರಮದ ಮಠಾಧೀಶರಾದ ಶ್ರೀ ವಾಮನಾಶ್ರಮ ಮಹಾಸ್ವಾಮೀಜಿ ಹೇಳಿದರು.
ಆಧ್ಯಾತ್ಮಿಕ ಉನ್ನತಿ ಭಾವನೆ ಇದ್ದಾಗ ನಮ್ಮಲ್ಲಿ ಯಾವುದೇ ರೀತಿಯ ಅಹಂಕಾರ, ಮಮಕಾರ ಭಾವನೆ ಇರುವುದಿಲ್ಲ ಎಂದ ಸ್ವಾಮೀಜಿ ಪ್ರತಿಯೊಬ್ಬರು ಆಧ್ಯಾತ್ಮಿಕತೆಯಲ್ಲಿ ಕೆಲ ಸಮಯವನ್ನಾದರೂ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

Leave a Comment