ಹಳಿಯಾಳ:- ಕಿಲ್ಲರ್ ಕೊರೊನಾ ವೈರಸ್ಗೆ ಇಂದು ದೇಶವೇ ಲಾಕ್ಡೌನ್ ಆಗಿದ್ದು, ದೇಶ ಹಲವಾರು ಬಗೆಯ ಸಂಕಷ್ಟಕ್ಕೆ ಸಿಲುಕಿದ್ದು ಕೆಲವರು ತಮ್ಮ ವಿವಿಧ ಪ್ರಕಾರದ ಸೇವೆಗಳ ಮೂಲಕ ಸಮಾಜ ಸೇವೆ ಗೈಯುತ್ತಿದ್ದಾರೆ. 5 ಸಾವಿರ ಉಚಿತ ಮಾಸ್ಕ್ ತಯಾರಿಸುವ ಮೂಲಕ ಹಳಿಯಾಳದ ಮಹಿಳಾ ವಾರಿಯರ್ಸ್ ತಮ್ಮ ಅನುಪಮ ಸೇವೆ ಸಲ್ಲಿಸಲು ಸಜ್ಜಾಗಿರುವ ಕಥೆ ಇದು.
ಕೆಲವರು ಬಡವರಿಗೆ, ನಿರ್ಗತಿಕರಿಗೆ, ಕೂಲಿಕಾರರಿಗೆ ಕಿರಾಣಿ, ದಿನಸಿ, ಔಷದೋಪಚಾರ ನೀಡುವ ಸೇವೆ ಮಾಡುತ್ತಿದ್ದರೇ ಕೆಲವರು ಕಾರ್ಮಿಕರಿಗೆ, ತೀರಾ ಬಡವರಿಗೆ ಅನ್ನ ನೀಡುವ ಕಾಯಕದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಬಿಡಾಡಿ ನಾಯಿ ಹಾಗೂ ಜಾನುವಾರುಗಳಿಗೆ ಒಂದೊಪ್ಪತ್ತಿನ ಹೊಟ್ಟೆ ತುಂಬಿಸುವ ಪುಣ್ಯದ ಕಾರ್ಯದಲ್ಲಿ ತೊಡಗಿದ್ದಾರೆ.

ಅದರಂತೆಯೇ ಇನ್ನೊಂದು ಬಗೆಯ ಸೇವೆಯ ಮೂಲಕ ತಮ್ಮ ಕೊಡುಗೆಯನ್ನು ನೀಡಲು ಮುಂದಾಗಿರುವ ಹಳಿಯಾಳದ ನಾಮದೇವ ಶಿಂಪಿ ಮಹಿಳಾ ಮಂಡಳದ ಸದಸ್ಯೆಯಾಗಿರುವ ವೃತ್ತಿಯಲ್ಲಿ ಮಹಿಳಾ ಟೇಲರ್ ಆಗಿರುವ ಪಟ್ಟಣದ ದೇಸಾಯಿಗಲ್ಲಿ ನಿವಾಸಿ ರತ್ನಮಾಲಾ ಸುರೇಶ ಮುಳೆ ಅಂದಾಜು 1 ಲಕ್ಷ ರೂ. ವರೆಗೂ ಸ್ವಂತದ ಹಣ ಖರ್ಚು ಮಾಡಿ ಉಚಿತವಾಗಿ 5 ಸಾವಿರ ಮಾಸ್ಕ್ಗಳನ್ನು ನೀಡಲು ದಿನವಿಡಿ ಶ್ರಮಿಸುತ್ತಿದ್ದಾರೆ.
ಮಾಸ್ಕ್ನ ತೀರಾ ಅವಶ್ಯಕತೆ ಇರುವ ಈ ಸಂದರ್ಭದಲ್ಲಿ ತಾಯಿಯ ಮಹತ್ಕಾರ್ಯಕ್ಕೆ ಅವರ ಮಕ್ಕಳಾದ ಅಮಿತ, ಅಕ್ಷಯ ಹಾಗೂ ಸೋಸೆ ಐಶ್ವರ್ಯ ಕೂಡ ಕೈ ಜೋಡಿಸಿದ್ದು ಸುಮಾರು 6 ಜನ ಮಹಿಳಾ ಕಾರ್ಮಿಕರೊಂದಿಗೆ ಕಳೆದ 5 ದಿನಗಳಿಂದ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ.
ಹಳಿಯಾಳದ ಗೌರಿಗುಡಿ(ಜವಾಹರ) ರಸ್ತೆಯಲ್ಲಿ “ಮ್ಯಾಚ್ವೆಲ್” ಹೆಸರಿನ ಟೇಲರ್(ದರ್ಜಿ) ಅಂಗಡಿ ನಡೆಸುತ್ತಿರುವ ರತ್ನಮಾಲಾ ಈ ದಿಟ್ಟ ನಿರ್ಧಾರ ಕೈಗೊಂಡು ಕಳೆದ 5 ದಿನಗಳಿಂದ ಉತ್ತಮ ಗುಣಮಟ್ಟದ ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ. ಈವರೆಗೆ 2500 ಮಾಸ್ಕ್ ತಯಾರಾಗಿವೆ.
ಗುಣಮಟ್ಟದ ಖಾದಿ ಬಟ್ಟೆಯಿಂದ ಮಾಸ್ಕ್ಗಳನ್ನು ತಯಾರಿಸುತ್ತಿರುವ ಇವರು 10ಸಾವಿರ ಮಾಸ್ಕ್ಗಳನ್ನು ನೀಡುವ ಗುರಿ ಹೊಂದಿದ್ದರು ಆದರೇ ಸದ್ಯ ಬಟ್ಟೆ ದೊರೆಯದ ಕಾರಣ 5 ಸಾವಿರ ನೀಡುವ ಗುರಿ ಹೊಂದಿದ್ದು ಆಕಸ್ಮಿಕವಾಗಿ ಬಟ್ಟೆ ದೊರೆತರೇ 10 ಸಾವಿರ ಮಾಸ್ಕ್ ತಯಾರಿಸಿ ಕೊಡುವುದಾಗಿ ರತ್ನಮಾಲಾ ಮಾಹಿತಿ ನೀಡಿದರು.
ಇವರು ಯಾರಿಂದಲೂ ಸಹಾಯ ಪಡೆಯದೆ ತಮ್ಮ ಸ್ವಂತ ಹಣದಲ್ಲಿ ಸುಮಾರು 1 ಲಕ್ಷ ರೂ. ವರೆಗೆ ಖರ್ಚು ಮಾಡಿ, ತಮ್ಮಲ್ಲಿ ಕೆಲಸ ಮಾಡುವವರಿಗೆ ಸಂಬಳವನ್ನು ನೀಡಿ, 600 ಮೀಟರ್ ಬಟ್ಟೆಯನ್ನು ಉಪಯೋಗಿಸಿ ಮಾಸ್ಕ್ ತಯಾರಿಸುತ್ತಿದ್ದು ಉಚಿತವಾಗಿ ವಿತರಿಸಲು ನಿರ್ಧರಿಸುವುದು ಇತರರಿಗೆ ಆದರ್ಶವಾಗಿದೆ.

ರತ್ನಮಾಲಾ ಅವರೊಂದಿಗೆ ಕೆಲಸಗಾರರಾದ ಅಂಜಲಿ ಬುಲಬುಲೆ, ಅಶ್ವೀನಿ ಭೊಸಲೆ, ಭಾರತಿ ಕದಂ, ಲಕ್ಷ್ಮೀ ಕಮ್ಮಾರ, ನಾಝೀಯಾ ತಾಂಬಿಟಕರ, ಮಹಾದೇವಿ ಗೋಕಾವಿ, ವಿದ್ಯಾ ಬುಲಬುಲೆ ಅವರು ದಿನನಿತ್ಯ ಮಾಸ್ಕ್ ತಯಾರಿಸುವಲ್ಲಿ ತೊಡಗಿದ್ದಾರೆ.
ಈ ಕುರಿತು ಕಡಲವಾಣಿಯೊಂದಿಗೆ ಮಾತನಾಡಿದ ರತ್ನಮಾಲಾ ಅವರು ತಮ್ಮ ಪತಿ ದಿ.ಸುರೇಶ ಮುಳೆ ಅವರ ಸ್ಮರಣಾರ್ಥ ಹಾಗೂ ಮಹಿಳೆಯರಿಗೂ, ಸಮಾಜಕ್ಕೂ ಸಹಾಯ ಮಾಡುವ ಉದ್ದೇಶದಿಂದ ತಾವು ಸದ್ಯ ಅವಶ್ಯಕತೆ ಇರುವ ಮಾಸ್ಕ್ಗಳನ್ನು ಕೊವಿಡ್-19 ವಿರುದ್ದ ಹೊರಾಡುತ್ತಿರುವ ವಾರಿಯರ್ಸ್ಗಳಿಗೆ ಹಾಗೂ ಸಮಾಜ ಸೇವಕರಿಗೆ ಉಚಿತವಾಗಿ ನೀಡಲು ಉದ್ದೇಶಿಸಿ ಕೆಲಸ ಮಾಡುತ್ತಿದ್ದೇವೆ.
ಸದ್ಯ ಉಚಿತವಾಗಿ ನೀಡುವ ಗುರಿ ಪೂರ್ಣಗೊಂಡ ಮೇಲೆ ಬೇಡಿಕೆ ಬಂದರೇ ಅತ್ಯಂತ ಕಡಿಮೆ ದರದಲ್ಲಿ ಮಾಸ್ಕ್ ತಯಾರಿಸಿ ಪೂರೈಸುವುದಾಗಿ ತಿಳಿಸಿದರು. 5 ಸಾವಿರ ಉಚಿತ ಮಾಸ್ಕ್ಗಳನ್ನು ಹಳಿಯಾಳ ತಾಲೂಕಾಡಳಿತಕ್ಕೆ ಮೂರ್ನಾಲ್ಕೂ ದಿನಗಳಲ್ಲಿ ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ನಾಮದೇವ ಶಿಂಪಿ ಸಮಾಜದ ಅಧ್ಯಕ್ಷ ಉದಯ ಜಾಧವ ಹಾಗೂ ಪುರಸಭೆ ಸದಸ್ಯ ಉದಯ ಶ್ರೀಕಾಂತ ಹೂಲಿ ಅವರು ಮಹಿಳೆಯರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಮಾಸ್ಕಗಳು ದೊರೆಯುತ್ತಿಲ್ಲ ಇಂತಹ ಸಂದರ್ಭದಲ್ಲಿ ಉಚಿತವಾಗಿ ಗುಣಮಟ್ಟದ ಮಾಸ್ಕ್ಗಳನ್ನು ನೀಡಲು ಮುಂದಾಗಿರುವ ರತ್ನಮಾಲಾ ಅವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.
Sad to learn, Shri Suresh Mule is no more. My deepest appreciation and congratulations to Smt Ratnamala Mule for volunteering for this noble work and spending Rs. 1 Lakh. The other members of the team also for their involvement. – Dr. S. N. Divekar