
ಹಳಿಯಾಳ:- ಲಾಕ್ಡೌನ್ ಆದೇಶ ಜಾರಿಯಾದ ದಿನದಿಂದ ಬೆಂಗಳೂರಿನ ತಮ್ಮ ನಿವಾಸದಲ್ಲಿದ್ದ ಹಳಿಯಾಳ ಶಾಸಕ ಆರ್ ವಿ ದೇಶಪಾಂಡೆ ಅವರು ಇಂದು ಹಳಿಯಾಳಕ್ಕೆ ಆಗಮಿಸಿ ತಾಲೂಕಾಡಳಿತ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದರು.
ಬೆಂಗಳೂರಿನಿಂದ ನೇರವಾಗಿ ಪತ್ನಿ ಸಮೇತ ಹಳಿಯಾಳ ತಾಲೂಕಾ ಆಸ್ಪತ್ರೆಗೆ ಆಗಮಿಸಿದ ಅವರು ಕೋವಿಡ್-19 ತಪಾಸಣಾ ಕೇಂದ್ರದಲ್ಲಿ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡರು. ಅವರ ಗನ್ಮ್ಯಾನ್ ಹಾಗೂ ಚಾಲಕನನ್ನು ತಪಾಸಣೆಗೆ ಒಳಪಡಿಸಲಾಯಿತು.
ಬಳಿಕ ಮಿನಿ ವಿಧಾನಸೌಧದಲ್ಲಿ ತಾಲೂಕಾಡಳಿತದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೊವಿಡ್-19 ಹಿನ್ನೆಲೆ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಯಾವ ಬಡವರಿಗೂ ಸಮಸ್ಯೆಯಾಗದಂತೆ ಕೆಲಸ ಮಾಡುವಂತೆ ಸೂಚಿಸಿದರು.

ಬಳಿಕ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕೊರನಾ ಹಿನ್ನೆಲೆ ಜಾತಿ,ಧರ್ಮ ಎಂಬ ಭೇದ ಭಾವವಿಲ್ಲದೆ ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಜನರ ಸಹಕಾರ ಮುಖ್ಯವಾಗಿದೆ. ಜನರು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಉದಾರ ಮನಸ್ಸಿನಿಂದ ದೇಣಿಗೆ ನೀಡಬೇಕು ಎಂದು ಕರೆ ನೀಡಿದರು.
ವೈದ್ಯರು, ನರ್ಸಗಳು, ಪೋಲಿಸರು, ಅಂಗನವಾಡಿ, ಆಶಾ ಕಾರ್ಯಕರ್ತರು, ಪತ್ರಕರ್ತರು, ಜನಪ್ರತಿನಿಧಿಗಳು ಹೀಗೆ ಕೊರೊನಾ ವಿರುದ್ದ ಕೆಲಸ ಮಾಡುತ್ತಿರುವ ಎಲ್ಲ ವಾರಿಯರ್ಸ್ಗಳ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.
ಕೊರೊನಾ ಹಿನ್ನೆಲೆ ಹಳಿಯಾಳದಲ್ಲಿ 5 ಸರ್ಕಾರಿ ಕಟ್ಟಡಗಳನ್ನು ಗುರುತಿಸಿ 307 ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಯಾರಿಗೂ ಔಷದೋಪಚಾರ ತೊಂದರೆ ಆಗದಂತೆ ಸಂಬಂಧಪಟ್ಟವರು ಕೆಲಸ ನಿರ್ವಹಿಸಬೇಕೆಂದು ಸೂಚಿಸಲಾಗಿದೆ ಎಂದ ದೇಶಪಾಂಡೆ ಬೆಸಿಗೆ ಕಾಲವಾದ್ದರಿಂದ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ, ಗ್ರಾಮಾಂತರ ಭಾಗದಲ್ಲಿ ಬೊರವೆಲ್ಗಳಿಗೆ ಪೈಪ್ ಜೋಡಿಸಿ ನೀರು ಪೂರೈಸುವಂತೆ ಆದೇಶಿಸಿದರು.
ಇನ್ನೂ ದನಕರುಗಳಿಗೆ ಮೇವಿನ ತೊಂದರೆ ಆಗದಂತೆ, ರೈತರಿಗೆ ಕೃಷಿ ಕಾರ್ಯದಲ್ಲಿ ಯಂತ್ರೋಪಕರಣಗಳು, ಬಿತ್ತನೆ ಬೀಜಗಳು, ರಸಗೊಬ್ಬರಗಳ ಕೊರತೆ ಆಗದಂತೆ ನಿಗಾವಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿರುವುದಾಗಿ ಹೇಳಿದರು.
ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು ಉದಾರ ಮನಸ್ಸಿನಿಂದ ಬಡವರು, ಕೂಲಿಕಾರರನ್ನು, ಸಂಕಷ್ಟದಲ್ಲಿರುವವರನ್ನು ಗುರುತಿಸಿ ಆಹಾರ ಸಾಮಗ್ರಿಯ ಸಹಾಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು ತಮ್ಮ ಸೇವೆ ಮುಂದುವರೆಸುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ, ಜಿಪಂ ಉಪಾಧ್ಯಕ್ಷ ಸಂತೋಷ ರೆಣಕೆ, ಸದಸ್ಯರಾದ ಕೃಷ್ಣಾ ಪಾಟೀಲ್, ಮಹೇಶ್ರಿ ಮಿಶ್ಯಾಳೆ ಇತರರು ಇದ್ದರು.
Leave a Comment