
ಹಳಿಯಾಳ:- ಹಳಿಯಾಳ-ದಾಂಡೇಲಿ-ಜೋಯಿಡಾ ಮೂರು ತಾಲೂಕುಗಳನ್ನು ಒಳಗೊಂಡಿರುವ ಹಳಿಯಾಳ ಎಪಿಎಮ್ಸಿಯ ಮೂರನೇ ಹಾಗೂ ಅಂತಿಮ ಹಂತದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ತೀವೃ ಪೈಪೊಟಿಯಿಂದ ಕೂಡಿದ್ದು ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಹಳಿಯಾಳ ಎಪಿಎಮ್ಸಿಯ ಹಾಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರಾವಧಿಯು ಜೂ.26ಕ್ಕೆ ಮುಕ್ತಾಯವಾಗಲಿರುವ ಕಾರಣ ಜೂ.24 ರಂದು ಈ ಸ್ಥಾನಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
16 ಸದಸ್ಯ ಬಲದ ಹಳಿಯಾಳ ಎಪಿಎಮ್ಸಿಯಲ್ಲಿ 8ಜನರು ಕಾಂಗ್ರೇಸ್ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರೇ 5 ಜನ ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಬಿಜೆಪಿ ಪಕ್ಷದ ಬೆಂಬಲಿತ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಿದ್ದರಿಂದ ಬಿಜೆಪಿ ಕೂಡ 8 ಸದಸ್ಯ ಬಲವನ್ನು ಹೊಂದುವ ಮೂಲಕ ಕಾಂಗ್ರೇಸ್-ಬಿಜೆಪಿ ಸಮಬಲ ಉಂಟಾಗಿರುವುದೇ ಚುನಾವಣೆ ತೀವೃ ಹಣಾಹಣಿಗೆ ಕಾರಣವಾಗಿದೆ.
ಅಲ್ಲದೇ 5 ವರ್ಷದ ಅಧಿಕಾರವನ್ನು 20 ತಿಂಗಳಂತೆ ಮೂರು ಅವಧಿಗೆ ಹಂಚಿಕೆ ಮಾಡಲಾಗುವ ಕಾರಣ. ಸದ್ಯ 2 ಅವಧಿ ಅಂದರೇ 40 ತಿಂಗಳು ಅಧಿಕಾರದಲ್ಲಿದ್ದ ಹಾಲಿ ಎಪಿಎಮ್ಸಿ ಅಧ್ಯಕ್ಷರು ಹಾಗೂ ರಾಜ್ಯ ಕೃಷಿ ಮಾರುಕಟ್ಟೆ ಮಹಾಮಂಡಳಿ ನಿರ್ದೇಶಕರು ಆಗಿರುವ ಶ್ರೀನಿವಾಸ ಘೊಟ್ನೇಕರ ಅವರು ಮತ್ತೇ ಉಳಿದ ಅವಧಿಯಲ್ಲಿಯೂ ಅಧಿಕಾರದಲ್ಲಿ ಮುಂದುವರೆಯಬೇಕೆಂಬ ಮಹದಾಸೆ ಹೊಂದಿದ್ದಾರೆ.
ಅಲ್ಲದೇ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ತನ್ನ ಪುತ್ರ ಶ್ರೀನಿವಾಸ ಘೋಟ್ನೇಕರ ಉಳಿದ ಅವಧಿಗೆ ಮುಂದುವರೆಯಬೇಕೆಂಬ ಇಚ್ಚೆ ಹೊಂದಿದ್ದಾರೆ. ಅಧ್ಯಕ್ಷ ಗಾದಿಯ ಚುನಾವಣೆಯನ್ನು ವೈಯಕ್ತಿಕ ಪ್ರತಿಷ್ಠೆಯನ್ನಾಗಿ ಸ್ವೀಕರಿಸಿದ್ದು ತನ್ನ ಬದ್ದ ಎದುರಾಳಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಪ್ರತಿ ತಂತ್ರಗಳಿಗೆ ಪ್ರತಿ ತಂತ್ರ ಹೆಣೆಯುತ್ತಿದ್ದು ಬಿಜೆಪಿ ಬೆಂಬಲಿತರು ಯಾವ ಕಾರಣಕ್ಕೂ ಅಧಿಕಾರದ ಚುಕ್ಕಾಣಿ ಹಿಡಿಯಬಾರದು ಎಂದು ಇದಕ್ಕಾಗಿ ರಾಜಕೀಯವಾಗಿ ಎಲ್ಲ ಕಸರತ್ತುಗಳನ್ನು ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ.
ಇನ್ನೂ ಹಳಿಯಾಳದಲ್ಲಿ ಬಿಜೆಪಿ ನಾಯಕ ಮಾಜಿ ಶಾಸಕ ಸುನೀಲ್ ಹೆಗಡೆ ಅವರು ನಮ್ಮ ಪಕ್ಷದ ಸರ್ಕಾರ ಆಡಳಿತದಲ್ಲಿದೇ ಹಾಗೂ ಸದಸ್ಯ ಬಲ ಕೂಡ ಹೊಂದಿದೆ. ಅಲ್ಲದೇ ತನ್ನ ಬದ್ದ ಎದುರಾಳಿ ಎಸ್.ಎಲ್.ಘೊಟ್ನೇಕರ ಅವರ ಪುತ್ರ ಅಧಿಕಾರದಲ್ಲಿರುವ ಎಪಿಎಮ್ಸಿಯನ್ನು ಹೇಗಾದರೂ ಮಾಡಿ ಘೊಟ್ನೇಕರ ಕಪಿಮುಷ್ಠಿಯಿಂದ ಬಿಡಿಸಬೇಕು.
ಅವರು ಯಾವ ಕಾರಣಕ್ಕೂ ಮತ್ತೇ ಅಧಿಕಾರಕ್ಕೆ ಬರಬಾರದು ಬಿಜೆಪಿ ಬೆಂಬಲಿತ ಸದಸ್ಯರೇ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಪ್ರತಿ ಹಂತದಲ್ಲಿಯೂ ಚಾಣಾಕ್ಷತೆಯಿಂದ ರಾಜಕೀಯ ತಂತ್ರಗಳೊಂದಿಗೆ ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸುತ್ತಿದ್ದು ಇವರು ಕೂಡ ವೈಯಕ್ತಿಕ ಪ್ರತಿಷ್ಠಯನ್ನಾಗಿ ಸ್ವೀಕರಿಸಿದ್ದು ಪ್ರತಿ ಹಂತದಲ್ಲಿಯೂ ಎದುರಾಳಿಯ ತಂತ್ರಗಳನ್ನು ವಿಫಲ ಮಾಡಿ ಗೆಲುವು ಸಾಧಿಸಬೇಕೆಂಬ ನೀರಿಕ್ಷೆಯಲ್ಲಿದ್ದಾರೆಂದು ಅವರ ಆಪ್ತ ವಲಯದಿಂದ ಕೇಳಿ ಬರುತ್ತಿದೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಬಿಜೆಪಿ ಬೆಂಬಲಿತ ಸದಸ್ಯ ಬೆಳವಟಗಿಯ ಕೃಷ್ಣಮೂರ್ತಿ ರಾಮಚಂದ್ರ ಪಾಟೀಲ್ ಜೂ.18 ರಿಂದ ಕಾಣೆಯಾಗಿದ್ದು ಇವರನ್ನು ಯಾವುದೋ ಉದ್ದೇಶದಿಂದ ಬಾಬು ಪಾಗೋಜಿ ಎಂಬಾತ ಅಪಹರಿಸಿದ್ದಾನೆಂದು ಎಪಿಎಮ್ಸಿ ಸದಸ್ಯ ಕೃಷ್ಣಮೂರ್ತಿ ತಂದೆ ರಾಮಚಂದ್ರ ಪಾಟೀಲ್ ಹಳಿಯಾಳ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನೂ ಹಳಿಯಾಳ ಎಪಿಎಮ್ಸಿ ವ್ಯಾಪ್ತಿಗೆ ಬರುವ ರಾಮನಗರದ ಕಾಂಗ್ರೇಸ್ ಬೆಂಬಲಿತ ಎಪಿಎಮ್ಸಿ ಸದಸ್ಯ ವಸಂತ ಸಗುಣ ಹರಿಜನ ಅವರನ್ನು ಅಪಹರಣ ಮಾಡಲಾಗಿದೆ ಎಂದು ಇತನ ಪತ್ನಿ ರಾಮನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದಷ್ಟೇ ಅಲ್ಲದೇ ಮಂಗಳವಾರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೇಕರ ಅವರು ಹಳಿಯಾಳದ ಮರಾಠಾ ಭವನದಲ್ಲಿ ತನ್ನ ಅಪಾರ ಬೆಂಬಲಿಗರ ಸಭೆ ನಡೆಸಿದ್ದು ಮುಂದಿನ ರಾಜಕೀಯ ಬೆಳವಣಿಗೆಗಳು ತಾವು ಕೈಗೊಳ್ಳಲಿರುವ ನಿರ್ಧಾರಗಳ ಬಗ್ಗೆ ಸುಳಿವು ನೀಡಿದ್ದು ಹಳಿಯಾಳ ಎಪಿಎಮ್ಸಿ ಚುನಾವಣೆಯ ಬಗ್ಗೆಯೂ ಗಹನ ಚರ್ಚೆಗಳು ನಡೆದಿವೆ ಎನ್ನಲಾಗಿದೆ.
ಒಟ್ಟಾರೇ ಹಳಿಯಾಳ ಎಪಿಎಮ್ಸಿಯ ಕಾಂಗ್ರೇಸ್ ಹಾಗೂ ಬಿಜೆಪಿ ಸದಸ್ಯರು ಸಮಬಲ ಇರುವುದರಿಂದ ಅಲ್ಲದೇ ಎರಡೂ ಪಕ್ಷ ಬೆಂಬಲಿತ ತಲಾ ಓರ್ವ ಸದಸ್ಯರು ಕಿಡ್ನಾಪ್ ಆಗಿರುವುದರಿಂದ ಜೂ.24 ರಂದು ನಡೆಯುವ ಚುನಾವಣೆ ತೀವೃ ಜಿದ್ದಾಜಿದ್ದಿನಿಂದ ಕೂಡಿದ್ದು ಹೊಸ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಲಿದೆ. ಈ ನಡುವೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯ ಅದೃಷ್ಠ ಯಾರ ಪಾಲಿಗೆ ತೆರೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಎಪಿಎಮ್ಸಿಯ ಇಬ್ಬರು ಸದಸ್ಯರು ಅಪಹರಣವಾಗಿರುವ ಕುರಿತು ಕುಟುಂಬ ಸದಸ್ಯರು ದೂರು ನೀಡಿದ್ದಾರೆ ಆದರೇ ಇನ್ನೊಂದು ಮಾಹಿತಿಯಂತೆ ಎಪಿಎಮ್ಸಿ ಸದಸ್ಯರನ್ನು ಗುಪ್ತ ಸ್ಥಳಗಳಿಗೆ ಕರೆದೊಯ್ದು ಅವರು ಎಲ್ಲಿಯೂ ಹೊರಗೆ ಹೊಗದಂತೆ ನೊಡಿಕೊಳ್ಳಲಾಗುತ್ತಿದ್ದು ನೇರವಾಗಿ ಬುಧವಾರ ಎಪಿಎಮ್ಸಿ ಆವರಣದಲ್ಲಿ ನಡೆಯುವ ಚುನಾವಣೆಗೆ ಅವರನ್ನು ಕರೆದುಕೊಂಡು ಬರುವ ಎಲ್ಲ ರಹಸ್ಯ ತಯಾರಿಗಳನ್ನು ಈಗಾಗಲೇ ಎರಡೂ ಪಕ್ಷದವರು ಮಾಡಿದ್ದಾರೆ ಎನ್ನಲಾಗುತ್ತಿದೆ.
ತೀವೃ ತುರುಸಿನಿಂದ ಕೂಡಿರುವ, ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಎಪಿಎಮ್ಸಿ ಅಧ್ಯಕ್ಷ-ಉಪಾಧ್ಯಕ್ಷ ಗಾದಿಯ ಈ ಚುನಾವಣೆಯಲ್ಲಿ ಶಾಂತಿ ಸುವ್ಯವಸ್ಥೆ ಕೂಡ ಹದಗೆಡುವ ಮಾಹಿತಿ ಪಡೆದಿರುವ ಪೋಲಿಸರು ತೀವೃ ಕಟ್ಟೆಚ್ಚರ ವಹಿಸಿದ್ದು ಬಿಗಿ ಪೋಲಿಸ್ ಬಂದೊಬಸ್ತ್ ಮಾಡಿದ್ದಾರೆ. ಬುಧವಾರದ ಬೆಳವಣಿಗೆ ಹಳಿಯಾಳ-ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ತೀವೃ ಸಂಚಲನವನ್ನು ಹುಟ್ಟುಹಾಕಲಿದೆ ಎಂಬುದು ಅಷ್ಟೇ ಸತ್ಯವಾಗಿದೆ.
Leave a Comment