
ಕಾರವಾರ: ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡನಲ್ಲಿನ ಅವ್ಯವಸ್ಥೆಗಳ ಬಗ್ಗೆ ಕೊರೊನಾ ಸೋಂಕಿತರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಕೋವಿಡ್ ವಾರ್ಡಗೆ ಯಾವುದೇ ವೈದ್ಯರು ಅಥವಾ ಸಿಬ್ಬಂದಿ ಬರುತ್ತಿಲ್ಲ. ಅಲ್ಲಿ ಸ್ವಚ್ಚತೆ ಬಗ್ಗೆ ಗಮನ ಕೊಡುತ್ತಿಲ್ಲ. ನೀರು ಬಿಸಿ ಮಾಡಲು ಎಲ್ಲರ ಉಪಯೋಗಕ್ಕಾಗಿ ಒಂದೇ ಪಾತ್ರೆ ಇಡಲಾಗಿದೆ. ಕೊಠಡಿಗಳು ಕೂಡ ಸುರಕ್ಷಿತವಾಗಿಲ್ಲ. ಐಸಿಯೂ ವಾರ್ಡ ಕೂಡ ಮಾಲಿನ್ಯದಿಂದ ಕೂಡಿದೆ. ಸಾಮಾಜಿಕ ಅಂತರ ಕಾಪಾಡಿ ಎಂದು ಹೇಳುವವರು ಒಂದೇ ಕೊಠಡಿಯಲ್ಲಿ ಐದು ರೋಗಿಗಳನ್ನು ಇರಿಸಿದ್ದಾರೆ.
ಮೃತಪಟ್ಟ ಕೊರೊನಾ ಸೋಂಕಿತರ ಹಾಸಿಗೆ ಬಟ್ಟೆಗಳು ನಾಲ್ಕು ದಿನದಿಂದ ಅಲ್ಲಿಯೇ ಬಿದ್ದಿದೆ. ಶೌಚಾಲಯವೂ ಸರಿಯಾಗಿಲ್ಲ. ನಿನ್ನೆ ಬಂದ ಇಬ್ಬರು ಸೋಂಕಿತರಿಗೆ ಹಾಸಿಗೆ ಕೂಡ ನೀಡಲಿಲ್ಲ ಎಂದು 5.35 ನಿಮಿಷದ ವಿಡಿಯೋ ಮಾಡಿ ಆರೋಪ ಮಾಡಿದ್ದಾರೆ. ಕೊನೆಗೆ ಕೊರೊನಾ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಮಾಡಲು ಸಾದ್ಯವಾಗದಿದ್ದರೆ ಅವರನ್ನು ಕೋವಿಡ್ ವಾರ್ಡಗೆ ದಾಖಲು ಮಾಡಬೇಡಿ. ಅವರಿಗೆ ಹೋಂ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡುವಂತೆ ಸೋಂಕಿತ ವ್ಯಕ್ತಿ ವಿಡಿಯೋದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ.
- ಆರೋಪಕ್ಕೆ ತ್ವರಿತವಾಗಿ ಸ್ಪಂದಿಸಿದ ಕಿಮ್ಸ :-
ಕೊರೊನಾ ಸೋಂಕಿತ ವ್ಯಕ್ತಿಯ ಆರೋಪಕ್ಕೆ ತ್ವರಿತವಾಗಿ ಸ್ಪಂದಿಸಿದ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಈ ಬಗ್ಗೆ ಸ್ಪಷ್ಠಿಕರಣ ನೀಡಿದೆ. ಪ್ರತಿದಿನ ಮದ್ಯಾಹ್ನ 4 ಗಂಟೆಗೆ ಕೋವಿಡ್ ವಾರ್ಡ ಅನ್ನು ಸ್ವಚ್ಚಗೊಳಿಸಲಾಗುತ್ತದೆ. ವಾರ್ಡನ ಬಯೋಮೆಡಿಕಲ್ ವೆಸ್ಟೇಜ್ ಮ್ಯಾನೆಜ್ಮೆಂಟ್ ಗಳನ್ನು 40ಕ್ಕೂ ಅಧಿಕ ಚೀಲಗಳಲ್ಲಿ ನಿಯಮಗಳ ಪ್ರಕಾರ ತೆಗೆದುಕೊಂಡು ಹೋಗಲಾಗುತ್ತಿದೆ. ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಈ ಪ್ರಕ್ರಿಯೆ ನಡೆಸಿಕೊಂಡು ಬರಲಾಗಿದೆ. ವೈದ್ಯಕೀಯ ಸಿಬ್ಬಂದಿ ದಿನವಿಡಿ ದುಡಿಯುತ್ತಲಿದ್ದು, ಈವರೆಗೆ 200ಕ್ಕೂ ಅಧಿಕ ರೋಗಿಗಳು ಗುಣಮುಖರಾಗಿದ್ದಾರೆ. ಅವರು ಕಿಮ್ಸ ವ್ಯವಸ್ಥೆ ಬಗ್ಗೆ ಮೆಚ್ಚುಗೆ ಸೂಚಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಕಾರವಾರದ ಸಿದ್ದರದಿಂದ ಬಂದಿರುವ 37 ವರ್ಷದ ಕೊರೊನಾ ಸೋಂಕಿತ 12 ತಾಸುಗಳ ಹಿಂದೆ ಕೋವಿಡ್ ವಾರ್ಡಗೆ ದಾಖಲಾಗಿದ್ದು ಕೆಲವೇ ಗಂಟೆಗಳಲ್ಲಿ ಸ್ವಚ್ಚತೆ ಇಲ್ಲವೆಂದು ಅನಗತ್ಯವಾಗಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಕಿಮ್ಸ ನಿರ್ದೇಶಕ ಡಾ. ಗಜಾನನ ನಾಯಕ ಲಿಖಿತವಾಗಿ ತಿಳಿಸಿದ್ದಾರೆ. ಮೂರು ತಿಂಗಳ ಅವದಿಯಲ್ಲಿ ಮೊದಲ ಬಾರಿಗೆ ಇಂತಹ ಆಪಾದನೆ ಬಂದಿದೆ. ಇದರಿಂದ ಎಲ್ಲಾ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯರು ಮಾನಸಿಕವಾಗಿ ಕುಗ್ಗಿದ್ದಾರೆ. ಇದು ರೋಗಗಳ ಬಗ್ಗೆಯೂ ತಪ್ಪು ಸಂದೇಶ ನೀಡಿದಂತಾಗುತ್ತಿದೆ ಎಂದು ಹೇಳಿದ್ದಾರೆ. - ಕ್ರಮಕ್ಕೆ ಆಗ್ರಹ :-
ಕೊರೊನಾ ಸೋಂಕಿತರು ಹಾಗೂ ಅವರಿಗೆ ಚಿಕಿತ್ಸೆ ನೀಡುವವರ ವಿರುದ್ದ ತಪ್ಪು ಸಂದೇಶಗಳನ್ನು ರವಾನಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಕಿಮ್ಸ ನಿರ್ದೇಶಕ ಡಾ. ಗಜಾನನ ನಾಯಕ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅನಗತ್ಯ ಗೊಂದಲ ಹುಟ್ಟಿಸುವ ಉದ್ದೇಶದಿಂದ ವಿಡಿಯೋ ಮಾಡಿದ ವ್ಯಕ್ತಿ ಹಾಗೂ ಅದನ್ನು ಹರಿಬಿಡುತ್ತಿರುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
Leave a Comment