
ಹಳಿಯಾಳ :- ಕೊಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಬಿಕೆ ಚಂದ್ರಮೌಳೇಶ್ವರ ಹತ್ಯೆಯನ್ನು ತೀವೃವಾಗಿ ಖಂಡಿಸಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಳಿಯಾಳ ಘಟಕದವರು ಕಠಿಣ ಕಾನೂನು ರೂಪಿಸಿ ಸರ್ಕಾರಿ, ನೌಕರರು ಮತ್ತು ಅಧಿಕಾರಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಶುಕ್ರವಾರ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿದ ಅವರು ಮುಖ್ಯಮಂತ್ರಿಗಳ ಹೆಸರಿನಲ್ಲಿದ್ದ ಮನವಿ ಪತ್ರವನ್ನು ತಹಶೀಲ್ದಾರ್ ವಿದ್ಯಾಧರ ಗುಳಗುಳೆ ಅವರಿಗೆ ಸಲ್ಲಿಸಿದರು.
ಮನವಿಯಲ್ಲಿ ಜಮೀನಿನ ವ್ಯಾಜ್ಯದ ಸಂಬಂಧ ಪೋಲಿಸ್ ರಕ್ಷಣೆಯಲ್ಲಿ ಜಂಟಿ ಸರ್ವೇ ಕಾರ್ಯ ಮಾಡುತ್ತಿದ್ದ ತಹಶೀಲ್ದಾರ್ ಅವರ ಮೇಲೆ ಏಕಾಏಕಿ ಆರೋಪಿ ವೆಂಕಟಪತಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ಈ ಹೇಯ ಕೃತ್ಯವನ್ನು ಸಂಘ ತೀವೃವಾಗಿ ಖಂಡಿಸುತ್ತದೆ ಎಂದು ಹೇಳಲಾಗಿದೆ.
ರಾಜ್ಯಾದ್ಯಂತ ಮೇಲಿಂದ ಮೇಲೆ ಸರ್ಕಾರಿ ಅಧಿಕಾರಿಗಳು, ನೌಕರರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಲ್ಲೆಯಂತಹ ಪ್ರಕರಣಗಳು ನಡೆಯುತ್ತಿರುವುದರಿಂದ ಮುಂದೆ ಇಂತಹ ಘಟನೆಗಳು ನಡೆಯದಂತೆ ಕಠಿಣ ಕಾನೂನು ರೂಪಿಸಬೇಕು, ತಕ್ಷಣ ಆರೋಪಿಗೆ ಕಠಿಣ ಶೀಕ್ಷೆ ವಿಧಿಸಬೇಕು, ನೌಕರರಿಗೆ ರಕ್ಷಣೆ ನೀಡಬೇಕು, ಮೃತರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡಬೇಕು, ಅನುಕಂಪದ ಆಧಾರದ ಮೇಲೆ ಕುಟುಂಬದ ಓರ್ವ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಸರ್ಕಾರಿ ನೌಕರರ ಸಂಘದವರು ಆಗ್ರಹಿಸಿದ್ದಾರೆ.
ಮನವಿ ಸಲ್ಲಿಸುವಾಗ ನೌಕರರ ಸಂಘದ ಅಧ್ಯಕ್ಷ ಪ್ರಶಾಂತ ನಾಯಕ, ಪ್ರಮುಖರಾದ ಕಿಶೋರ ನಾಯ್ಕ, ಅನಿಲ ಪರಭತ, ಲಕ್ಷ್ಮೀ ಡೊಂಕಣ್ಣವರ, ಜಗದೀಶ ಜುಟ್ಟಲ, ರುದ್ರಮೂರ್ತೀ ತಳವಾರ, ವಿಜಯಕುಮಾರ ನಾಗನೂರ, ಸತೀಶ ನಾಯಕ, ಸಾವಿತ್ರಿ, ವಿಎಸ್ ಬೊರೆಕರ ಇತರರು ಇದ್ದರು.
Leave a Comment